Advertisement

ವ್ಯಾಪಾರಿಗಳಿಗೆ ಸುಲಭವಾಗಿ ಸಿಗುತ್ತಿದೆ ಪ್ಲಾಸ್ಟಿಕ್‌

09:03 PM Nov 13, 2019 | Lakshmi GovindaRaju |

ಹುಣಸೂರು: ನಗರದಲ್ಲಿ ಪ್ರತಿದಿನ 20 ಟನ್‌ ಕಸದೊಂದಿಗೆ 200 ಕೇಜಿ ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ. ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾತ್ರ ನಿಂತಿಲ್ಲ. ಅಂಗಡಿಗಳ ಮೇಲೆ ಅಧಿಕಾರಿಗಳು ನಿರಂತರ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡು, ದಂಡ ವಿಧಿಸುತ್ತಿದ್ದಾರೆ. ಆದರೆ, ವರ್ತಕರು, ಏಜೆಂಟ್‌ಗಳು ಕದ್ದುಮುಚ್ಚಿ ಪ್ಲಾಸ್ಟಿಕ್‌ ದಾಸ್ತಾನು ಮಾಡಿ, ದಿನಸಿ, ತರಕಾರಿ, ಹೋಟೆಲ್‌, ಬೀದಿ ಬದಿ ಅಂಗಡಿಗಳಿಗೆ ಮಾರುತ್ತಿದ್ದಾರೆ.

Advertisement

ಮರುಬಳಕೆ: ನಗರದಲ್ಲಿ ಪ್ರತಿದಿನ ಕಸದೊಂದಿಗೆ 200 ಕೆ.ಜಿ. ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ. 2 ಸಾವಿರ ಕ್ವಿಂಟಲ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಟ್ರೀಟ್‌ಮೆಂಟ್‌ ಪ್ಲಾಂಟ್‌ನಲ್ಲಿ ಇದನ್ನು ಪ್ರತ್ಯೇಕಿಸಿ, ವಿವಿಧ ಬಗೆಯ ಪ್ಲಾಸ್ಟಿಕ್‌ಗಳನ್ನು ವಿಂಗಡಿಸಲಾಗುತ್ತಿದೆ. ಈ ಪ್ಲಾಸ್ಟಿಕ್‌ಗಳನ್ನು ಪ್ರತಿ ತಿಂಗಳು ಮರು ಬಳಕೆ ಮಾಡುವ ಘಟಕಗಳಿಗೆ ನೀಡಲಾಗುತ್ತದೆ.

ಬೀದಿ ಬದಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿಗಳು, ತರಕಾರಿ ಗಾಡಿಗಳು, ಹೋಟೆಲ್‌ಗ‌ಳು, ಬೇಕರಿ, ಮಾಂಸದ ಅಂಗಡಿ ಮತ್ತಿತರ ಅಂಗಡಿಗಳಲ್ಲಿ ಎಗ್ಗಿಲ್ಲದೇ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪ್ಲಾಸ್ಟಿಕ್‌ ಕಾಫಿ, ಟೀ ಲೋಟ, ಪ್ಲಾಸ್ಟಿಕ್‌ ನೀರಿನ ಬಾಟಲಿ ಮತ್ತಿತರ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ. ಮೊದಲು ಪ್ಲಾಸ್ಟಿಕ್‌ ತಯಾರಿಕಾ ಘಟಕಗಳನ್ನೇ ಮುಚ್ಚಿಸಬೇಕು. ಸ್ಥಳೀಯ ಸಂಸ್ಥೆಗಳಿಗೂ ಕಠಿಣ ಕ್ರಮ ಕೈಗೊಳ್ಳಲು ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಸಾಧ್ಯವಾಗಲಿದೆ ಎನುತ್ತಾರೆ ಸೇವ್‌ ಅವರ್‌ ಅರ್ಥ್ ಕ್ಲಬ್‌ ಅಧ್ಯಕ್ಷ ಸಂಜಯ್‌.

ಅಂಗಡಿ ಪರವಾನಗಿ ರದ್ದು: ಈ ಕುರಿತು ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತ ಶಿವಪ್ಪನಾಯಕ, ಕಳೆದ ಒಂದು ವರ್ಷದಲ್ಲಿ ನಗರದ ವಿವಿಧ ಅಂಗಡಿಗಳ ಮೇಲೆ 150ಕ್ಕೂ ಹೆಚ್ಚು ಬಾರಿ ದಾಳಿ ನಡೆಸಿ, ಒಂದು ಟನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಇದುವರೆಗೂ 25 ಸಾವಿರ ರೂ.ಗೂ ಅಧಿಕ ದಂಡ ವಿಧಿಸಲಾಗಿದೆ.

ಜೊತೆಗೆ ಕಳೆದ ಒಂದು ವರ್ಷದಿಂದಲೂ ಕಸ ಸಂಗ್ರಹಿಸುವ ಆಟೋಗಳಲ್ಲಿ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಲ್ಯಾಣ ಮಂಟಪಗಳವರು ಸಹಕಾರ ನೀಡುತ್ತಿದ್ದಾರೆ. ಆದರೆ, ಬೀದಿಬದಿ ಅಂಗಡಿಗಳು, ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಮಾರಾಟವಾಗುತ್ತಿದೆ. ಮುಂದೆ ದಂಡ ಜೊತೆಗೆ ವ್ಯಾಪಾರದ ಪರವಾನಗಿಯನ್ನು ರದ್ದುಪಡಿಸಿ, ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ದಿನಕ್ಕೆ ಎಷ್ಟು ಪ್ಲಾಸ್ಟಿಕ್‌ ಸಂಗ್ರಹ, ಮರುಬಳಕೆ ಆಗುತ್ತಿದೆಯಾ?: ಹುಣಸೂರು ನಗರದಲ್ಲಿ ನಿತ್ಯ ಎರಡು ಟನ್‌ (2 ಕ್ವಿಂಟಲ್‌) ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ.ನಗರಸಭೆವತಿಯಿಂದ 20 ಟನ್‌ (20 ಕ್ವಿಂಟಲ್‌ ) ಕಸ ಸಂಗ್ರಹಣೆಯಾಗುತ್ತಿದೆ. ನಗರದ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ನೀರಿನ ಬಾಟಲ್‌ಗ‌ಳು, ಇತರೆ ಪ್ಲಾಸ್ಟಿಕ್‌ಗಳನ್ನು ಪ್ರತ್ಯೇಕಿಸಿ ಬೇಲಿಂಗ್‌ ಮಾಡಿ, ಸಂಗ್ರಹಿಸಿಡಲಾಗುತ್ತದೆ.

ಈ ಹಿಂದೆ ಪ್ಲಾಸ್ಟಿಕ್‌ ವಸ್ತುಗಳನ್ನು ನಿರ್ಮಾಣ ಮಾಡುವವರು ಕೊಂಡೊಯ್ಯುತ್ತಿದ್ದರು. ಇದೀಗ ರಸ್ತೆ ನಿರ್ಮಾಣ ಮಾಡುವ ಕಂಪನಿಗಳವರು ಪ್ಲಾಸ್ಟಿಕ್‌ ಖರೀದಿಸಲು ಮುಂದೆ ಬಂದಿದ್ದಾರೆ. ದರ ನಿಗದಿ ಗೊಳಿಸಿ ಮಾರಾಟ ಮಾಡಲು ಚಿಂತಿಸಲಾಗಿದೆ ಎಂದು ನಗರಸಭೆ ಪರಿಸರ ಎಂಜಿನಿಯರ್‌ ಎಲ್‌. ರೂಪಾ ತಿಳಿಸಿದ್ದಾರೆ.

ನಗರದಲ್ಲಿ ಅಂಗಡಿಗಳಲ್ಲಿ ದಾಳಿ ವೇಳೆ ಸಿಕ್ಕ ಪ್ಲಾಸ್ಟಿಕ್‌ ವಾಪಸ್‌ ನೀಡದೆ ದಂಡ ವಿಧಿಸುತ್ತಿದ್ದೇವೆ. ಕ್ಯಾರಿಬ್ಯಾಗ್‌ನೊಂದಿಗೆ ಇನ್ನೂ ಹಲವು ಪ್ಲಾಸ್ಟಿಕ್‌ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಈ ಕುರಿತು ಮಾರ್ಗಸೂಚಿ ಇನ್ನಷ್ಟೇ ಇಲಾಖೆಯಿಂದ ಬರಬೇಕಿದೆ. ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಸಾರ್ವಜನಿಕರ ಸಹಕಾರದಿಂದ ನಗರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸುವುದಾಗಿಸಲು ನಿರಂತರ ಪ್ರಯತ್ನ ನಡೆಸಲಾಗುವುದು
-ರೂಪಾ, ನಗರಸಭೆ ಪರಿಸರ ಎಂಜಿನಿಯರ್‌

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next