Advertisement

ಪರಿಸರ ಉಳಿಸಲು ಪ್ಲಾಸ್ಟಿಕ್‌ ತ್ಯಾಜ್ಯ ಬಳಕೆ

12:16 AM May 05, 2019 | sudhir |

ಉಡುಪಿ: ಪ್ಲಾಸ್ಟಿಕ್‌ ತ್ಯಾಜ್ಯ ಇಂದು ಇಡೀ ಪರಿಸರ ಕುಲಗೆಡಿಸುತ್ತಿದೆ. ಆದರೆ ಇದೇ ವಸ್ತುವನ್ನು ಪ್ರಕೃತಿಗೆ ಪೂರಕವಾಗಿಯೂ ಬಳಸಬಹುದು ಎನ್ನುವುದನ್ನು ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ (ಪಿಪಿಇಸಿ) ವಿದ್ಯಾರ್ಥಿಗಳು ತೋರಿಸಿಕೊಡುತ್ತಿದ್ದಾರೆ.

Advertisement

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಮಳೆಗಾಲದಲ್ಲಿ ಸುಮಾರು 250 ಗಿಡಗಳನ್ನು ನೆಟ್ಟಿದ್ದಾರೆ. ಇವುಗಳಿಗೆ ನಿತ್ಯ ನೀರು ಬಿಡುವಾಗ ಬೇಸಗೆಯಿಂದಾಗಿ ನೀರಿನ ತೇವಾಂಶ ಹೋಗುತ್ತಿತ್ತು. ತೇವಾಂಶ ಉಳಿಸಿಕೊಳ್ಳಲು ಗಾತ್ರದಲ್ಲಿ ಚಿಕ್ಕದಿರುವ ಸುಮಾರು 140 ಗಿಡಗಳಿಗೆ ನೀರುಣಿಸಲು ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಲಾಗಿದೆ. ಕುಡಿದು ಬಿಸಾಡುವ ನೀರಿನ ಬಾಟಲಿಗೆ ತೂತು ಮಾಡಿ ಬಾಟಲಿಗೆ ನೀರು ತುಂಬಿಸಿ ಇಟ್ಟಿದ್ದಾರೆ.

ವಾರದಲ್ಲಿ ಮೂರು ಬಾರಿ ಬಾಟಲಿಗೆ ನೀರು ತುಂಬಿಸುತ್ತಾರೆ. ಇದರಿಂದ ತೇವಾಂಶ ಉಳಿದುಕೊಂಡಿದೆ. ಸಣ್ಣ ಗಿಡಗಳಾದ ಕಾರಣ ಇತರರು ಮೆಟ್ಟಿಕೊಂಡು ತಿರುಗುವುದೂ ತಪ್ಪಿ ರಕ್ಷಣೆ ಒದಗಿಸುತ್ತದೆ.

ಯೋಜನೆಯ ಘಟಕಾಧಿಕಾರಿ ರಮಾನಂದ ರಾವ್‌ ಮಾರ್ಗದರ್ಶನದಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಪನ್ನಗ ನಾವಡ ಮತ್ತು ಎರಡನೆಯ ವರ್ಷದ ಬಿಕಾಂ ವಿದ್ಯಾರ್ಥಿ ವೆಂಕಟೇಶಪ್ರಸಾದ ಹೆಗ್ಡೆ ಅವರು ನೀರುಣಿಸುತ್ತಾರೆ. ಬಾಟಲಿಯನ್ನು ಆರಿಸಿ ಸೆಟ್‌ ಮಾಡಲು ಇನ್ನಿಬ್ಬರು ವಿದ್ಯಾರ್ಥಿಗಳಾದ ಪ್ರಣವ್‌ ಮತ್ತು ಮನೋಜ್‌ ಸಹಕರಿಸಿದ್ದಾರೆ.

ಧನ್ಯತಾಭಾವವಿದೆ
ವನಮಹೋತ್ಸವದ ವೇಳೆ ಗಿಡಗಳನ್ನು ನೆಟ್ಟರೆ ಮತ್ತೆ ನೀರಿಲ್ಲದೆ ಇದು ಸತ್ತು ಹೋಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಹೀಗಾಗಬಾರದೆಂದು ಎನ್ನೆಸ್ಸೆಸ್‌ ಘಟಕಾಧಿಕಾರಿ ರಮಾನಂದ ಸರ್‌ ಹೇಳಿದಂತೆ ಎರಡು ಮೂರು ತಿಂಗಳಿಂದ ನೀರು ಬಿಡುತ್ತಿದ್ದೇವೆ. ಇದರಿಂದ ನೆಟ್ಟ ಸಸಿಗಳು ಬದುಕಿ ಉಳಿದಿವೆ ಎಂಬ ಧನ್ಯತಾಭಾವವಿದೆ.
– ವೆಂಕಟೇಶಪ್ರಸಾದ ಹೆಗಡೆ, ಎನ್ನೆಸ್ಸೆಸ್‌ ತಂಡದ ನಾಯಕ

Advertisement

ಎನ್ನೆಸ್ಸೆಸ್‌ನ ಪ್ರಾಜೆಕ್ಟ್ ಆಗಿ ಇದನ್ನು ನಿರ್ವಹಿಸುತ್ತಿದ್ದೇವೆ. ನಮ್ಮ ಕಾಲೇಜು ಸಂಜೆ 5 ಗಂಟೆಗೆ ಆರಂಭವಾಗುವುದಾದರೂ ವಿದ್ಯಾರ್ಥಿಗಳು ಸ್ವಯಂ ಆಸಕ್ತಿಯಿಂದ ಮಧ್ಯಾಹ್ನ 2 ಗಂಟೆಗೆ ಬಂದು ನೀರು ಹಾಕುತ್ತಾರೆ. ಯುವ ಪೀಳಿಗೆಗೆ ಹಸಿರು, ಗಿಡ ಮರಗಳ ಬಗ್ಗೆ ಜಾಗೃತಿ ಮೂಡಬೇಕೆನ್ನುವುದೂ ನಮ್ಮ ಉದ್ದೇಶ. ಎಲ್ಲ ಕಡೆ ಇಂತಹ ಪ್ರವೃತ್ತಿ ಬೆಳೆದರೆ ಉತ್ತಮ.
– ರಮಾನಂದ ರಾವ್‌, ಪ್ರಶಸ್ತಿ ಪುರಸ್ಕೃತ ಎನ್ನೆಸ್ಸೆಸ್‌ ಘಟಕಾಧಿಕಾರಿ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next