Advertisement
ಆಂಕಲಾಜಿಕಲ್ ರಿಕನ್‌ಸ್ಟ್ರಕ್ಷನ್
Related Articles
Advertisement
ನಡೆಸಲಾಗುವ ಚಿಕಿತ್ಸೆಯ ವಿಧಗಳು: ಕುತ್ತಿಗೆ ಮತ್ತು ತಲೆಯ ಪುನರ್‌ನಿರ್ಮಾಣ ಚಿಕಿತ್ಸೆಗಳನ್ನು ಸ್ಥೂಲವಾಗಿ ಈ ಕೆಳಗಿನ ವಿಧಗಳಾಗಿ ವರ್ಗೀಕರಿಸಬಹುದು:
ಮೃದು ಅಂಗಾಂಶ ಪುನರ್ ನಿರ್ಮಾಣ: ಅಪಘಾತ, ಗಡ್ಡೆಯನ್ನು ತೆಗೆದುಹಾಕುವ ಶಸ್ತ್ರಕ್ರಿಯೆ ಅಥವಾ ಜನ್ಮಜಾತ ವೈಕಲ್ಯಗಳಿಂದ ಕುತ್ತಿಗೆ ಮತ್ತು ತಲೆಯ ಭಾಗದಲ್ಲಿ ಚರ್ಮ, ಸ್ನಾಯು ಮತ್ತು ಇತರ ಮೃದು ಅಂಗಾಂಶಗಳಿಗೆ ಉಂಟಾಗಿರುವ ಹಾನಿಯನ್ನು ಸರಿಪಡಿಸುವುದು.
ಎಲುಬು ಪುನರ್‌ನಿರ್ಮಾಣ: ಎಲುಬು ಕಸಿ, ಮೈಕ್ರೊವಾಸ್ಕಾಲರ್ ಫ್ರೀ ಟಿಶ್ಯೂ ಟಾನ್ಸ್‌ಫರ್ ಅಥವಾ ಪ್ರಾಸ್ಥೆಸಿಸ್ ಇಂಪ್ಲಾಂಟ್‌ಗಳಂತಹ ತಂತ್ರಗಳ ಮೂಲಕ ತಲೆಬುರುಡೆ, ದವಡೆ ಅಥವಾ ಮುಖದ ಅಸ್ಥಿರಚನೆಗಳನ್ನು ಪುನರ್ ಸ್ಥಾಪಿಸುತ್ತದೆ.
ಮೈಕ್ರೊವಾಸ್ಕಾಲರ್ ಪುನರ್ ನಿರ್ಮಾಣ: ತಲೆ ಮತ್ತು ಕುತ್ತಿಗೆ ಭಾಗದಲ್ಲಿ ಸಾಕಷ್ಟು ಬಾರಿ ಸೂಕ್ಷ್ಮ ರಕ್ತನಾಳ ಅನಾಸ್ಟಮೋಸಿಸ್ ಸಹಿತವಾಗಿ ಉಂಟಾಗಿರುವ ವೈಕಲ್ಯಗಳನ್ನು ಸರಿಪಡಿಸುವುದಕ್ಕಾಗಿ ಇನ್ನೊಂದು ದಾನಿ ಅಂಗದ (ಉದಾಹರಣೆಗೆ ಹೊಟ್ಟೆ, ತೊಡೆ) ಅಂಗಾಂಶಗಳನ್ನು ಸೂಕ್ಷ್ಮ ಶಸ್ತ್ರಚಿಕಿತ್ಸಾತ್ಮಕ ತಂತ್ರಗಳ ಮೂಲಕ ವರ್ಗಾಯಿಸಿ ಕಸಿ ಮಾಡುವುದು.
ಕ್ರಿಯಾತ್ಮಕ ಪುನರ್‌ನಿರ್ಮಾಣ: ನುಂಗುವಿಕೆ, ಮಾತು ಮತ್ತು ಮುಖ ಭಾವಗಳಂತಹ ಪ್ರಮುಖ ಕ್ರಿಯೆಗಳನ್ನು ಫ್ಲಾಪ್ ರಿಕನ್‌ಸ್ಟ್ರಕ್ಷನ್, ನರ ದುರಸ್ತಿ ಮತ್ತು ಸ್ನಾಯು ಕಸಿಯಂತಹ ಶಸ್ತ್ರಚಿಕಿತ್ಸೆಗಳ ಮೂಲಕ ಪುನರ್‌ಸ್ಥಾಪಿಸುವುದು.
ಯಾವಾಗ ಪುನರ್‌ನಿರ್ಮಾಣವನ್ನು ಸೂಚಿಸಲಾಗುತ್ತದೆ?
ಕುತ್ತಿಗೆ ಮತ್ತು ತಲೆಯ ಪುನರ್‌ನಿರ್ಮಾಣವನ್ನು ಈ ಕೆಳಗಿನ ಸಂದರ್ಭಗಳ ಸಹಿತ ಅನೇಕ ಸಂದರ್ಭಗಳಲ್ಲಿ ಸೂಚಿಸಲಾಗುತ್ತದೆ:
ಗಡ್ಡೆ ನಿರ್ಮೂಲನೆ: ತಲೆ ಮತ್ತು ಕುತ್ತಿಗೆ ಭಾಗದಲ್ಲಿ ಉಂಟಾಗಿರುವ ಗಡ್ಡೆಗಳನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕಿದ ಬಳಿಕ ಆ ಭಾಗಗಳ ಸ್ವರೂಪ ಮತ್ತು ಕಾರ್ಯಚಟುವಟಿಕೆಗಳನ್ನು ಅತ್ಯಂತ ಕನಿಷ್ಠ ಕ್ರಿಯಾತ್ಮಕ ನಷ್ಟ ಮತ್ತು ಸ್ವರೂಪ ಲೋಪದೊಂದಿಗೆ ಪುನರ್‌ಸ್ಥಾಪಿಸಲು ಪುನರ್‌ನಿರ್ಮಾಣ ಚಿಕಿತ್ಸೆ ಅಗತ್ಯವಾಗಿರುತ್ತದೆ.
ಅಪಘಾತದಲ್ಲಿ ಗಾಯಗಳು: ಮುಖಕ್ಕೆ ಗಾಯ ಅಥವಾ ಇತರ ಅಪಘಾತಗಳು ಉಂಟಾದ ಬಳಿಕ ವೈಕಲ್ಯಗಳನ್ನು ದುರಸ್ತಿಪಡಿಸಿ ಸಹಜ ಶರೀರ ಸ್ವರೂಪ ಮತ್ತು ಕಾರ್ಯಚಟುವಟಿಕೆಯನ್ನು ಪುನರ್‌ಸ್ಥಾಪಿಸಲು ಪುನರ್ ನಿರ್ಮಾಣ ಚಿಕಿತ್ಸೆಗಳು ಆವಶ್ಯಕವಾಗಿರುತ್ತವೆ.
ಜನ್ಮಜಾತ ವೈಕಲ್ಯಗಳು: ಜನ್ಮಜಾತ ಕ್ರೇನಿಯೊಫೇಶಿಯಲ್ ವೈಕಲ್ಯ, ಅಸಹಜತೆಗಳನ್ನು ಹೊಂದಿರುವ ರೋಗಿಗಳು ಅವುಗಳನ್ನು ಸರಿಪಡಿಸಿಕೊಳ್ಳಲು ಮತ್ತು ಮುಖದ ಸೌಂದರ್ಯವನ್ನು ಪುನರ್‌ಸ್ಥಾಪಿಸಲು ಪುನರ್‌ನಿರ್ಮಾಣ ಚಿಕಿತ್ಸೆಯಿಂದ ಪ್ರಯೋಜನ ಪಡೆಯಬಹುದು.
ಕ್ರಿಯಾತ್ಮಕ ಲೋಪಗಳು: ಶ್ವಾಸಾಂಗ ತಡೆಗಳಿಂದಾಗಿ ನುಂಗಲು ಕಷ್ಟ (ಡಿಸೆ#àಜಿಯಾ), ಮಾತಿನ ತೊಂದರೆಗಳು ಅಥವಾ ಉಸಿರಾಟ ಅಡಚಣೆಗಳಂತಹ ಕ್ರಿಯಾತ್ಮಕ ಲೋಪ, ವೈಕಲ್ಯಗಳನ್ನು ಸರಿಪಡಿಸುವುದಕ್ಕಾಗಿ ಪುನರ್‌ನಿರ್ಮಾಣ ಚಿಕಿತ್ಸೆಯನ್ನು ಅವಲಂಬಿಸಬಹುದು.
ಬಹುವಿಭಾಗೀಯ ಕಾರ್ಯವಿಧಾನ: ಕುತ್ತಿಗೆ ಮತ್ತು ತಲೆಯ ಪುನರ್‌ನಿರ್ಮಾಣ ಚಿಕಿತ್ಸೆಗಳು ಬಹುತೇಕ ಬಾರಿ ಪ್ಲಾಸ್ಟಿಕ್ ಸರ್ಜನ್‌ಗಳು, ಓಟೊಲ್ಯಾರಿಂಜಿಯಾಲಜಿಸ್ಟ್ ಗಳು (ಇಎನ್‌ಟಿ ತಜ್ಞರು), ಮ್ಯಾಕ್ಸಿಲೊಫೇಶಿಯಲ್ ಸರ್ಜನ್‌ಗಳು, ನ್ಯೂರೊಸರ್ಜನ್‌ಗಳು, ಸ್ಪೀಚ್ ಥೆರಪಿಸ್ಟ್ ಗಳು ಮತ್ತಿತರ ಆರೋಗ್ಯ ಸೇವಾ ವೃತ್ತಿಪರರ ಸಮನ್ವಯ, ಸಂಯೋಜನೆಯನ್ನು ಒಳಗೊಂಡಿರುತ್ತವೆ. ಈ ಬಹುವಿಭಾಗೀಯ ಕಾರ್ಯವಿಧಾನದಿಂದ ಕುತ್ತಿಗೆ ಮತ್ತು ತಲೆಯ ಸಂಕೀರ್ಣ ಸಮಸ್ಯೆಗಳನ್ನು ಗರಿಷ್ಠ ಕ್ರಿಯಾತ್ಮಕ ಮತ್ತು ಸೌಂದರ್ಯ ಸಂಬಂಧಿ ಪುನರ್‌ನಿರ್ಮಾಣವನ್ನು ಸಾಧಿಸುವ ಗುರಿಯೊಂದಿಗೆ ಸಮಗ್ರ ವಿಶ್ಲೇಷಣೆ, ತಪಾಸಣೆ ಮತ್ತು ನಿರ್ವಹಣೆ ಸಾಧ್ಯವಾಗುತ್ತದೆ.
ಪುನರ್‌ನಿರ್ಮಾಣ ತಂತ್ರಗಳು
ಕುತ್ತಿಗೆ ಮತ್ತು ತಲೆಯ ಪುನರ್‌ನಿರ್ಮಾಣದಲ್ಲಿ ಅನೇಕ ಶಸ್ತ್ರಚಿಕಿತ್ಸಾತ್ಮಕ ತಂತ್ರಗಳನ್ನು ಅನ್ವಯಿಸಲಾಗುತ್ತದೆ. ಅವುಗಳಲ್ಲಿ ಕೆಲವು:
ಲೋಕಲ್ ಫ್ಲಾಪ್ಸ್: ತಲೆ ಮತ್ತು ಕುತ್ತಿಗೆಯ ಭಾಗದಲ್ಲಿ ಸನಿಹದ ಅಂಗಾಂಶಗಳನ್ನು ಉಪಯೋಗಿಸಿಕೊಂಡು ಸಣ್ಣ ಮತ್ತು ಮಧ್ಯಮ ಪ್ರಮಾಣದ ವೈಕಲ್ಯಗಳನ್ನು ಸರಿಪಡಿಸುವುದು.
ಫ್ರೀ ಟಿಶ್ಯೂ ಟ್ರಾನ್ಸ್‌ಫರ್: ದೂರದ ಇನ್ನೊಂದು ದೇಹಸ್ಥಳದಿಂದ ಅಂಗಾಂಶಗಳನ್ನು ಮೈಕ್ರೊವಾಸ್ಕಾಲರ್ ತಂತ್ರಜ್ಞಾನಗಳ ಮೂಲಕ ವರ್ಗಾಯಿಸಿ ದೊಡ್ಡ ಮತ್ತು ಸಂಕೀರ್ಣ ಪುನರ್‌ನಿರ್ಮಾಣಗಳನ್ನು ಸಾಧಿಸುವುದರಿಂದ ಸೌಂದರ್ಯ ಸಂಬಂಧಿ ಮತ್ತು ಕ್ರಿಯಾತ್ಮಕ ಸಂಬಂಧಿ ಫಲಿತಾಂಶಗಳನ್ನು ಪಡೆಯಬಹುದು.
ಪ್ರಾಸ್ಥೆಟಿಕ್ ರಿಕನ್‌ಸ್ಟ್ರಕ್ಷನ್: ಶಸ್ತ್ರಚಿಕಿತ್ಸಾತ್ಮಕ ಪುನರ್‌ನಿರ್ಮಾಣ ಅಸಾಧ್ಯವಾದ ಅಥವಾ ರೋಗಿ ಅದನ್ನು ಇಚ್ಛಿಸದ ಸಂದರ್ಭಗಳಲ್ಲಿ ಫೇಶಿಯಲ್ ಇಂಪ್ಲಾಂಟ್‌ಗಳು ಅಥವಾ ಡೆಂಟಲ್ ಪ್ರಾಸ್ಥೆಸಿಸ್ ಗಳಂತಹ ಪ್ರಾಸ್ಥೆಟಿಕ್ ಡಿವೈಸ್‌ಗಳನ್ನು ಸ್ವರೂಪ ಮತ್ತು ಕಾರ್ಯಚಟುವಟಿಕೆಯನ್ನು ಪುನರ್ ಸ್ಥಾಪಿಸಲು ಉಪಯೋಗಿಸಬಹುದಾಗಿದೆ. ರೋಗಿಯ ಇಷ್ಟಾನಿಷ್ಟಗಳು: ರೋಗಿಯ ಅಂಶಗಳಾದ ವಯಸ್ಸು, ಒಟ್ಟಾರೆ ಆರೋಗ್ಯ ಸ್ಥಿತಿಗತಿ, ಇತರ ಅನಾರೋಗ್ಯಗಳು ಮತ್ತು ವೈಯಕ್ತಿಕ ಇಷ್ಟಾನಿಷ್ಟಗಳು ಯಾವ ಪುನರ್‌ನಿಮಾರ್ಣ ವಿಧಾನ ಸಮರ್ಪಕ ಎಂದು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಚಿಕಿತ್ಸೆಯ ಆಯ್ಕೆಗಳನ್ನು ನಿರ್ಧರಿಸಲು, ವಾಸ್ತವಿಕ ನಿರೀಕ್ಷೆಗಳನ್ನು ನಿಗದಿಪಡಿಸಲು ಮತ್ತು ಪುನರ್‌ನಿರ್ಮಾಣ ಪ್ರಕ್ರಿಯೆಗೆ ಸಂಬಂಧಿಸಿ ರೋಗಿಗಳು ಹೊಂದಿರಬಹುದಾದ ಸಂದೇಹಗಳು, ಪ್ರಶ್ನೆಗಳು ಅಥವಾ ಭಯವನ್ನು ಹೋಗಲಾಡಿಸಲು ಸರ್ಜನ್‌ಗಳು ರೋಗಿಗಳ ಜತೆಗೆ ನಿಕಟವಾಗಿ ಸಮಾಲೋಚನೆ ನಡೆಸುತ್ತಾರೆ.
ಸ್ತನದ ಪುನರ್‌ನಿರ್ಮಾಣ
ಆಂಕೊ ರಿಕನ್‌ಸ್ಟ್ರಕ್ಷನ್‌ನ ಒಂದು ಬಹು ಸಾಮಾನ್ಯ ವಿಧ ಎಂದರೆ ಸ್ತನದ ಕ್ಯಾನ್ಸರ್ ಚಿಕಿತ್ಸೆಯ ಅಂಗವಾಗಿ ಮ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯ ಬಳಿಕ ಸ್ತನದ ಪುನರ್‌ನಿರ್ಮಾಣ. ಸ್ತನದ ಪುನರ್‌ನಿರ್ಮಾಣವನ್ನು ಇಂಪ್ಲಾಂಟ್‌ಗಳು, ಆಟೊಲೋಗಸ್ ಅಂಗಾಂಶ (ಫ್ಲಾಪ್) ಪುನರ್‌ನಿರ್ಮಾಣ ಅಥವಾ ಈ ಎರಡರ ಸಂಯೋಜನೆಯಂತಹ ಹಲವಾರು ತಂತ್ರಗಳನ್ನು ಉಪಯೋಗಿಸಿ ನಡೆಸಬಹುದು. ಪುನರ್‌ನಿರ್ಮಾಣದ ಗುರಿಯು ಸ್ತನದ ಆಕಾರ, ಸ್ವರೂಪ, ಏರುತಗ್ಗುಗಳನ್ನು ಪುನರ್‌ಸ್ಥಾಪಿಸುವುದು ಆಗಿದ್ದು, ಕ್ಯಾನ್ಸರ್ ಚಿಕಿತ್ಸೆಯ ಬಳಿಕ ರೋಗಿಗಳಿಗೆ ದೇಹ ಸಂಪೂರ್ಣತೆ ಮತ್ತು ಸ್ತ್ರೀದೇಹ ಸೌಂದರ್ಯ ಸಂವೇದನೆಯನ್ನು ಉಳಿಸಿಕೊಡುವುದೇ ಆಗಿದೆ.
ತತ್‌ಕ್ಷಣದ ಪುನರ್‌ನಿರ್ಮಾಣ ಮತ್ತು ವಿಳಂಬ ಪುನರ್‌ನಿರ್ಮಾಣ: ಕೆಲವು ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಸ್ತನ ಪುನರ್‌ನಿರ್ಮಾಣ ಚಿಕಿತ್ಸೆಯನ್ನು ಮ್ಯಾಸೆಕ್ಟಮಿ ನಡೆದ ಕೂಡಲೇ ಅದೇ ಶಸ್ತ್ರಚಿಕಿತ್ಸೆಯ ಭಾಗವಾಗಿ ನಡೆಸಬಹುದಾಗಿರುತ್ತದೆ (ತತ್‌ಕ್ಷಣದ ಪುನರ್‌ನಿರ್ಮಾಣ). ಇನ್ನು ಕೆಲವು ಪ್ರಕರಣಗಳಲ್ಲಿ ಕಿಮೊಥೆರಪಿ ಅಥವಾ ರೇಡಿಯೋಥೆರಪಿಯಂತಹ ಇತರ ಕ್ಯಾನ್ಸರ್ ಚಿಕಿತ್ಸೆಗಳು ಸಂರ್ಪೂಣಗೊಳ್ಳುವ ವರೆಗೆ ಪುನರ್‌ನಿರ್ಮಾಣವನ್ನು ವಿಳಂಬಿಸಬೇಕಾಗಿರುತ್ತದೆ (ವಿಳಂಬ ಪುನರ್‌ನಿರ್ಮಾಣ). ಪುನರ್‌ನಿರ್ಮಾಣದ ಸಮಯವು ಕ್ಯಾನ್ಸರ್‌ನ ಹಂತ, ಚಿಕಿತ್ಸೆಯ ಯೋಜನೆ ಮತ್ತು ರೋಗಿಯ ಇಚ್ಛೆಗಳನ್ನು ಅವಲಂಬಿಸಿರುತ್ತದೆ.
ಸಮ್ಮಿತಿ (ಸಿಮೆಟ್ರಿ) ಕಾರ್ಯವಿಧಾನಗಳು: ಆಂಕಲಾಜಿಕಲ್ ರಿಕನ್‌ಸ್ಟ್ರಕ್ಷನ್ ಚಿಕಿತ್ಸೆಯು ಸಮತೋಲಿತ ಮತ್ತು ಸಹಜ ಸ್ತನ ಸ್ವರೂಪವನ್ನು ಸಾಧಿಸಲು ಕಾಂಟ್ರಾಲ್ಯಾಟರಲ್ ಬ್ರೆಸ್ಟ್ ರಿಡಕ್ಷನ್, ಆಗೆ¾ಂಟೇಶನ್ ಅಥವಾ ಮ್ಯಾಸ್ಟೊಪೆಕ್ಸಿ (ಬ್ರೆಸ್ಟ್ ಲಿಫ್ಟ್) ನಂತಹ ಸ್ತನ ಸಮ್ಮಿತಿಯನ್ನು ಉತ್ತಮಪಡಿಸುವ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.
ತೊಟ್ಟು ಮತ್ತು ತೊಟ್ಟಿನ ಸುತ್ತಲಿನ ವರ್ತುಲ (ಅರೆಯೋಲಾ) ದ ಪುನರ್‌ನಿರ್ಮಾಣ: ಮ್ಯಾಸ್ಟೆಕ್ಟಮಿಗೆ ಒಳಗಾದ ರೋಗಿಗಳಿಗೆ ಸ್ತನದ ಸಹಜ ಸ್ವರೂಪವನ್ನು ಪುನರ್‌ನಿರ್ಮಿಸಲು ಸ್ತನದ ತೊಟ್ಟು ಮತ್ತು ತೊಟ್ಟಿನ ಸುತ್ತಲಿನ ವರ್ತುಲದ ಪುನರ್‌ನಿರ್ಮಾಣವನ್ನು ನಡೆಸಬಹುದಾಗಿದೆ. ಸ್ಥಳೀಯ ಅಂಗಾಂಶ ಫ್ಲಾಪ್ಸ್ ಅನುಸರಿಸಿ ತೊಟ್ಟಿನ ಪುನರ್‌ನಿರ್ಮಾಣ ಅಥವಾ ಟಾಟೂಯಿಂಗ್ ನಂತಹ ತಂತ್ರಗಳನ್ನು ಉಪಯೋಗಿಸುವ ಮೂಲಕ ತೊಟ್ಟಿನ ಸುತ್ತಲಿನ ವರ್ತುಲವನ್ನು ಸಾಧಿಸಬಹುದು. ಮ್ಯಾಸ್ಟೆಕ್ಟಮಿಯ ಬಳಿಕ ಎದೆಯ ಭಿತ್ತಿಯ ಪುನರ್‌ನಿರ್ಮಾಣ (ಪೋಸ್ಟ್ ಮ್ಯಾಸ್ಟೆಕ್ಟಮಿ ಚೆಸ್ಟ್ ವಾಲ್ ರಿಕನ್‌ಸ್ಟ್ರಕ್ಷನ್)
ಮುಂದುವರಿದ ಸ್ತನ ಕ್ಯಾನ್ಸರ್ ಅಥವಾ ಅಧಿಕ ಅಪಾಯವುಳ್ಳ ರೋಗಿಗಳಿಗೆ ಪ್ರಾಫ್ರಿಲ್ಯಾಕ್ಟಿಕ್ ಮ್ಯಾಸ್ಟೆಕ್ಟಮಿಯಂತಹ ಅಂಗಾಂಶಗಳನ್ನು ತುಂಬಾ ಹೆಚ್ಚು ಪ್ರಮಾಣದಲ್ಲಿ ತೆಗೆದುಹಾಕಬೇಕಾಗುವ ಪ್ರಕರಣಗಳಲ್ಲಿ ಎದೆಭಿತ್ತಿಯ ಪುನರ್‌ನಿರ್ಮಾಣ ಅಗತ್ಯವಾಗಬಹುದು. ಇದರಲ್ಲಿ ಎದೆಯ ಏರುತಗ್ಗುಗಳನ್ನು ಪುನರ್‌ಸ್ಥಾಪಿಸಲು ಮತ್ತು ಸ್ತನ ಪ್ರಾಸ್ಥೆಸಿಸ್‌ಗೆ ಆಧಾರ ಒದಗಿಸಲು ಟಿಶ್ಯೂ ಎಕ್ಸ್‌ಪಾಂಡರ್‌ಗಳು, ಇಂಪ್ಲಾಂಟ್‌ಗಳು ಅಥವಾ ಆಟೊಲಾಗಸ್ ಫ್ಲಾಪ್‌ಗಳ ಬಳಕೆ ಸೇರಿರಬಹುದಾಗಿದೆ.
ಭಾವನಾತ್ಮಕ ಮತ್ತು ಮನಶ್ಶಾಸ್ತ್ರೀಯ ಬೆಂಬಲ ಆಂಕಾಲಾಜಿಕಲ್ ಪುನರ್‌ನಿರ್ಮಾಣ ಎಂದರೆ ದೈಹಿಕ ಸ್ವರೂಪವನ್ನು ಪುನರ್‌ಸ್ಥಾಪಿಸುವುದು ಮಾತ್ರವೇ ಅಲ್ಲ; ಕ್ಯಾನ್ಸರ್ ಚಿಕಿತ್ಸೆಯಿಂದ ಉಂಟಾಗುವ ಭಾವನಾತ್ಮಕ ಮತ್ತು ಮನಶ್ಶಾಸ್ತ್ರೀಯ ಪರಿಣಾಮವನ್ನು ನಿರ್ವಹಿಸುವುದು ಕೂಡ ಇದರ ಭಾಗವಾಗಿದೆ. ಪುನರ್‌ನಿರ್ಮಾಣ ಪ್ರಕ್ರಿಯೆಯ ಉದ್ದಕ್ಕೂ ರೋಗಿಗಳ ಗುರಿಗಳು ಮತ್ತು ಕಳವಳಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಬೆಂಬಲ ಮತ್ತು ಮಾರ್ಗದರ್ಶನವನ್ನು ಒದಗಿಸುವ ಕೆಲಸವನ್ನು ರಿಕನ್‌ಸ್ಟ್ರಕ್ಟಿವ್ ಸರ್ಜನ್ ಗಳು ಮಾಡುತ್ತಾರೆ.
ಕ್ಯಾನ್ಸರ್ ಚಿಕಿತ್ಸೆಯ ಸವಾಲುಗಳನ್ನು ಎದುರಿಸಿ ಕ್ಯಾನ್ಸರ್‌ನಿಂದ ಬದುಕುಳಿದ ರೋಗಿಗಳು ಆತ್ಮವಿಶ್ವಾಸ, ಸ್ವಪ್ರತಿಷ್ಠೆ ಮತ್ತು ಜೀವನ ಗುಣಮಟ್ಟವನ್ನು ಪುನರ್‌ಸ್ಥಾಪಿಸಿಕೊಳ್ಳುವಲ್ಲಿ ಆಂಕಲಾಜಿಕಲ್ ರಿಕನ್‌ಸ್ಟ್ರಕ್ಷನ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕ್ಯಾನ್ಸರ್ ಚಿಕಿತ್ಸೆಯ ತತ್ವಗಳನ್ನು ರಿಕನ್‌ಸ್ಟ್ರಕ್ಟಿವ್ ತಂತ್ರಗಳ ಜತೆಗೆ ಸಂಯೋಜಿಸಿಕೊಳ್ಳುವ ಮೂಲಕ ಆಂಕಲಾಜಿಕಲ್ ರಿಕನ್‌ಸ್ಟ್ರಕ್ಷನ್ ಸ್ತನ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್, ಗಡ್ಡೆಗಳಿಂದ ಬಾಧಿತರಾದವರ ಗರಿಷ್ಠತಮ ಪುನರುಜ್ಜೀವನಕ್ಕೆ ಶ್ರಮಿಸುತ್ತದೆ.
- ಅಪಘಾತ ಗಾಯಗಳ ಚಿಕಿತ್ಸೆ ಅಪಘಾತಗಳು, ಸುಟ್ಟಗಾಯಗಳು, ಬಿದ್ದು ಆದ ಗಾಯಗಳು ಮತ್ತು ಇತರ ಅವಘಡಗಳಿಂದ ಆದ ಗಾಯಗಳನ್ನು ಸರಿಪಡಿಸಲು ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆಯನ್ನು ಬಹುತೇಕ ಬಾರಿ ಉಪಯೋಗಿಸಲಾಗುತ್ತದೆ. ಸಹಜ ಸ್ವರೂಪ ಮತ್ತು ಕಾರ್ಯಚಟುವಟಿಕೆಯನ್ನು ಪುನರ್ ಸ್ಥಾಪಿಸುವುದಕ್ಕಾಗಿ ಚರ್ಮ ಕಸಿ, ಅಂಗಾಂಶ ವಿಸ್ತರಣೆ, ಮೈಕ್ರೊಸರ್ಜರಿ ಮತ್ತು ಗಾಯ ಸರಿಪಡಿಸುವಿಕೆಯಂತಹ ವಿಧಾನಗಳನ್ನು ಅನುಸರಿಸಬಹುದಾಗಿದೆ.
- ಜನ್ಮಜಾತ ವೈಕಲ್ಯಗಳಿಗೆ ಚಿಕಿತ್ಸೆ ಸೀಳುತುಟಿ ಮತ್ತು ಅಂಗುಳ, ಕೈಗಳ ವೈಕಲ್ಯಗಳು ಮತ್ತು ಕ್ರೇನಿಯೊಫೇಶಿಯಲ್ ಅಸಹಜತೆಗಳಂತಹ ಜನ್ಮಜಾತ ವೈಕಲ್ಯಗಳು ವ್ಯಕ್ತಿಯ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಬಹುದಾಗಿದೆ. ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸೆಯ ಮೂಲಕ ಈ ವೈಕಲ್ಯಗಳನ್ನು ಸರಿಪಡಿಸಬಹುದಾಗಿದ್ದು, ಈ ಮೂಲಕ ವ್ಯಕ್ತಿಯು ಹೆಚ್ಚು ಪರಿಪೂರ್ಣವಾದ ಜೀವನವನ್ನು ನಡೆಸುವಂತೆ ಮಾಡಬಹುದಾಗಿದೆ.
- ಚರ್ಮದ ಕ್ಯಾನ್ಸರ್‌ಗೆ ಚಿಕಿತ್ಸೆ ಚರ್ಮದ ಕ್ಯಾನ್ಸರ್‌ನಿಂದಾಗಿ ಉಂಟಾಗುವ ಗಾಯಗಳನ್ನು ಸರಿಪಡಿಸಲು ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ಮೊಹ್Õ ಮೈಕ್ರೊಗ್ರಾμಕ್ ಶಸ್ತ್ರಚಿಕಿತ್ಸೆ ಮತ್ತು ಸ್ಕಿನ್ ಫ್ಲಾಪ್ ಪುನರ್‌ನಿರ್ಮಾಣದಂತಹ ವಿಧಾನಗಳನ್ನು ಕ್ಯಾನ್ಸರ್‌ಪೀಡಿತ ಅಂಗಾಂಶಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಮತ್ತು ಸುತ್ತಲಿನ ಆರೋಗ್ಯಯುತ ಅಂಗಾಂಶಗಳನ್ನು ರಕ್ಷಿಸಿ ಅತ್ಯಂತ ಕನಿಷ್ಠ ಗಾಯ ಗುರುತು ಉಳಿಯುವಂತೆ ಮಾಡುವಲ್ಲಿ ಅನುಸರಿಸಲಾಗುತ್ತದೆ.