Advertisement

ನಿಷೇಧದ ನಡುವೆಯೂ ಪ್ಲಾಸ್ಟಿಕ್‌ ಮಾರಾಟ

03:17 PM Oct 18, 2019 | Team Udayavani |

ಸಕಲೇಶಪುರ: ನಿಷೇಧದ ನಡುವೆಯೂ ತಾಲೂಕಿನಲ್ಲಿ ಪ್ಲಾಸ್ಟಿಕ್‌ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Advertisement

ಗಾಂಧಿ ಜಯಂತಿಯಂದು ಪ್ಲಾಸ್ಟಿಕ್‌ ಬಳಕೆ ದುಷ್ಪರಿಣಾಮ ಹಾಗೂ ಪ್ಲಾಸ್ಟಿಕ್‌ಬಳಕೆ ನಿಷೇಧ ಕುರಿತು ತಾಲೂಕು ಆಡಳಿತದಿಂದ ಪಟ್ಟಣದಲ್ಲಿ ಭರ್ಜರಿಯಾಗಿ ಜನಜಾಗೃತಿ ಆಂದೋಲನ ನಡೆಸಲಾಗಿತ್ತು. ಕೇವಲ ಪಟ್ಟಣ ಮಾತ್ರವಲ್ಲದ ತಾಲೂಕಿನ ವಿವಿಧ ಹೋಬಳಿ ಕೇಂದ್ರಗಳಲ್ಲೂ ಸಹ ಅಲ್ಲಿನ ಆಡಳಿತದ ಸಹಯೋಗ ದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿತ್ತು. ಆದರೂ ತಾಲೂಕಿನಲ್ಲಿ ಎಗ್ಗಿಲ್ಲದಂತೆ ಪ್ಲಾಸ್ಟಿಕ್‌ ವ್ಯಾಪಾರ ನಡೆಯುತ್ತಿದ್ದು ತರಕಾರಿ, ಹಣ್ಣು , ತಿಂಡಿ ತಿನಿಸುಗಳ ಪಾರ್ಸಲ್‌ಗ‌ಳನ್ನು ನೀಡಲು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿದೆ.

ಹೋಂ ಸ್ಟೇ , ರೆಸಾರ್ಟ್‌ಗಳಲ್ಲಿ ಪ್ಲಾಸ್ಟಿಕ್‌ ಹಾವಳಿ: ಮಲೆನಾಡಿನಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳು ನಾಯಿಕೊಡೆಗಳಂತಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಊರುಗಳಿಂದ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಆಗಮಿಸುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಸುತ್ತಿದ್ದಾರೆ. ಇದ ರಿಂದ ವಾತಾವರಣದ ಮೇಲೆ ಹಾನಿಯುಂಟಾಗುತ್ತಿದೆ. ಕೆಲವೇ ಕೆಲವು ರೆಸಾರ್ಟ್‌ ಹೋಂ ಸ್ಟೇಗಳಲ್ಲಿ ಪ್ಲಾಸ್ಟಿಕ್‌ನ್ನು ಕಡ್ಡಾಯವಾಗಿ ನಿಷೇಧಿಸಿದೆ. ಆದರೆ ಬಹುತೇಕ ರೆಸಾರ್ಟ್‌ ಹೋಂ ಸ್ಟೇಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮಿತಿ ಮೀರಿದೆ. ಮಲೆನಾಡಿನ ಕೆಲವು ಗುಡ್ಡಗಾಡು ಪ್ರದೇಶಗಳಿಗೆ, ಜಲಪಾತಗಳಿಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಿಸಾಡುತ್ತಿದ್ದು ಪ್ಲಾಸ್ಟಿಕ್‌ ಬಳಕೆ ಮೇಲೆ ಸರಿಯಾದ ರೀತಿಯಲ್ಲಿ ನಿಷೇಧ ಹೇರಲು ತಾಲೂಕು ಆಡಳಿತ ವಿಫಲವಾಗಿದೆ.

ಮಂಜ್ರಾಬಾದ್‌ ಕೋಟೆ ಪ್ಲಾಸ್ಟಿಕ್‌ ಮಯ: ತಾಲೂಕಿನ ಪ್ರಖ್ಯಾತ ಪ್ರವಾಸಿ ಸ್ಥಳ ಮಂಜ್ರಾಬಾದ್‌ ಕೋಟೆಗೆ ಬರುವ ಪ್ರವಾಸಿಗರು ತಿಂಡಿ ತಿನಿಸುಗಳನ್ನು ತಿಂದು ಪ್ಲಾಸ್ಟಿಕ್‌ನ್ನು ಬಿಸಾಡುವುದರಿಂದ ಕೋಟೆಯ ಸುತ್ತಮುತ್ತ ಪ್ಲಾಸ್ಟಿಕ್‌ ಹಾವಳಿ ಮಿತಿ ಮೀರಿದೆ. ಪಟ್ಟಣ ವ್ಯಾಪ್ತಿಯಲ್ಲು ಸಹ ಪ್ಲಾಸ್ಟಿಕ್‌ ಬಳಕೆ ಮಿತಿ ಮೀರಿದ್ದು, ಬಹುತೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದರೂ ಪುರಸಭೆ ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ವರ್ತಕರ ಬಳಿ ಮಾತನಾಡಿದರೆ ಪ್ಲಾಸ್ಟಿಕ್‌ ಉತ್ಪಾದನೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಉತ್ಪಾದನೆ ಮಾಡುವವರ ವಿರುದ್ಧ ಯಾವ ಕ್ರಮ ಕೈಗೊಳ್ಳದೆ ಕೇವಲ ವರ್ತಕರಿಗೆ ಮಾತ್ರ ಪ್ಲಾಸ್ಟಿಕ್‌ ಮಾರಾಟ ಮಾಡದಂತೆ ನಿಷೇಧ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ.

ನರ್ಸರಿ ಉದ್ಯಮಕ್ಕೆ ಪ್ಲಾಸ್ಟಿಕ್‌ ನಿಷೇಧ ಮಾರಕ: ಪ್ಲಾಸ್ಟಿಕ್‌ ನಿಷೇಧದಿಂದ ಕಾಫಿ ನರ್ಸರಿ ಉದ್ಯಮಕ್ಕೆ ಹೊಡೆತ ಬಿದ್ದಿದ್ದು ಕಾಫಿ ನರ್ಸರಿ ಕೃಷಿಗೆ ತೆಳು ಪ್ಲಾಸ್ಟಿಕ್‌ ಕವರ್‌ಗಳ ಅಗತ್ಯವಿದೆ. ಆದರೆ ಇದೀಗ ಇಂತಹ ಕವರ್‌ಗಳ ನಿಷೇಧದಿಂದ ಕಾಫಿ ನರ್ಸರಿ ಮಾಡುವವರಿಗೆ ಮುಂದೆ ಯಾವ ರೀತಿ ನರ್ಸರಿ ಮಾಡುವುದು ಎಂಬ ಚಿಂತೆ ಆವರಿಸಿದೆ. ಕಾಫಿ ಬೆಳೆಗಾರರ ಹಿತದೃಷ್ಟಿಯಿಂದ ಕಾಫಿ ನರ್ಸರಿ ಕವರ್‌ಗಳ ಮೇಲೆ ನಿಷೇಧ ಹೇರಬಾರದೆಂದು ಹಾಸನ ಜಿಲ್ಲಾ ಬೆಳೆಗಾರರ ಸಂಘಕ್ಕೆ ಮನವಿ ಸಲ್ಲಿಸಲಾಗಿದೆ.

Advertisement

ಒಂದು ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್‌ಗೆ ನಿಷೇಧವಿದ್ದರೂ ತಾಲೂಕಿನಲ್ಲಿ ಎಗ್ಗಿಲ್ಲದೇ ಪ್ಲಾಸ್ಟಿಕ್‌ ಬಳಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ತಾಲೂಕು ಆಡಳಿತ ಬಿಗಿ ಕ್ರಮ ಕೈಗೊಳ್ಳಬೇಕಾಗಿದೆ.

 

ಮುಂದಿನ ದಿನಗಳಲ್ಲಿ ಪ್ರವಾಸಿ ಸ್ಥಳಗಳಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್‌ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಗ್ರಾಪಂಗಳಿಗೆ ಪ್ಲಾಸ್ಟಿಕ್‌ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ.  ಹರೀಶ್‌, ತಾ ಪಂ ಕಾರ್ಯನಿರ್ವಹಣಾಧಿಕಾರಿ

 

-ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next