Advertisement

ಪ್ಲಾಸ್ಟಿಕ್‌ ನಿಷೇಧ: ದಾಳಿಗೆ ಸೀಮಿತವೇ?

11:50 AM Nov 20, 2018 | |

ಕಲಬುರಗಿ: ಮಹಾನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ತಡೆಯುವ ನಿಟ್ಟಿನಲ್ಲಿ ಕಳೆದ ಅಕ್ಟೋಬರ್‌ ಮಾಸಾಂತ್ಯದಲ್ಲಿ ನಡೆಸಲಾದ ದಾಳಿ ಹಾಗೂ ಬಳಕೆ ಮಾಡದಿರುವ ಕುರಿತು ನೀಡಲಾದ ಎಚ್ಚರಿಕೆ ಎರಡು ದಿನಗಳ ಕಾಲಕ್ಕೆ ಮಾತ್ರ ಸಿಮೀತವಾಯಿತೇ? ಹೀಗೊಂದು ಅನುಮಾನ ಹಾಗೂ ಪ್ರಶ್ನೆ ಮಹಾನಗರದಲ್ಲಿಂದು ಕಾಡುತ್ತಿದೆ. ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ದಿನದಿಂದ ಪ್ಲಾಸ್ಟಿಕ್‌ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಲು ಮುಂದಾಗಿದೆ ಎಂದು ಹೇಳಲಾಗಿದ್ದ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತದನಂತರ ಸಂಪೂರ್ಣ ಹಿಂದೆ ಸರಿದಿದೆ. ಇದನ್ನು ಗಮನಿಸಿದರೆ ಎಚ್ಚರಿಕೆ ಹಾಗೂ ದಾಳಿ ನೆಪಕ್ಕೆ ಮಾತ್ರಕ್ಕೆ ಆಯಿತೇ ಎನ್ನುವಂತಾಗಿದೆ.

Advertisement

ತ್ಯಾಜ್ಯದಿಂದ ರೋಗಗಳ ಉಲ್ಬಣ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ವ್ಯಾಪಕ ಪ್ಲಾಸ್ಟಿಕ್‌ ಬಳಕೆಯಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ತಡೆಯುವ ನಿಟ್ಟಿನಲ್ಲಿ ಕಳೆದ ಅಕ್ಟೋಬರ್‌ ಮಾಸಾಂತ್ಯದಲ್ಲಿ ಪ್ಲಾಸ್ಟಿಕ್‌ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದಲ್ಲದೇ ಪ್ಲಾಸ್ಟಿಕ್‌ ಬಳಕೆ ಮಾಡಿದರೆ ವ್ಯಾಪಾರಸ್ಥರ ಮೇಲೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈಗ ಅದನ್ನು ಸಂಪೂರ್ಣ ಮರೆತಿದೆ. ಹೀಗಾಗಿ ಮೊದಲಿನಂತೆ ವ್ಯಾಪಕವಾಗಿ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿದೆ.

ಪ್ಲಾಸ್ಟಿಕ್‌ ಬಳಕೆ ನಿಷೇಧ ಕ್ರಮದ ಅಂಗವಾಗಿ ಮಹಾನಗರ ಪಾಲಿಕೆ ಹಾಗೂ ಇತರ ಅಧಿಕಾರಿಗಳು ಜಂಟಿಯಾಗಿ ಕಳೆದ ಅಕ್ಟೋಬರ್‌ 29ರಂದು ನಗರದ ಹಾಗರಗಾ ರಸ್ತೆ, ನಂದೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಪ್ಲಾಸ್ಟಿಕ್‌ ತಯಾರಿಕೆ ಮಾಡುತ್ತಿದ್ದ ನಕಲಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ನಾಲ್ಕು ಟನ್‌ ನಕಲಿ ಪ್ಲಾಸ್ಟಿಕ್‌ ಹಾಗೂ ಇತರ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.

ತದನಂತರ ಮರುದಿನ ಎಚ್‌ಕೆಸಿಸಿಐ ಸಭಾಂಗಣದಲ್ಲಿ ನಡೆದಿದ್ದ ಪ್ಲಾಸ್ಟಿಕ್‌ ಬಳಕೆ ಜಾಗೃತಿ ಸಭೆಯಲ್ಲಿ ವರ್ತಕರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 15 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ ಏನೇ ಆಗಿದ್ದರೂ ಪ್ಲಾಸ್ಟಿಕ್‌ ಬಳಕೆ ನಿಲ್ಲೋದು ತಪ್ಪುವುದಿಲ್ಲ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಕೇಳಲಾಗಿದ್ದ ಕಾಲಾವಕಾಶ ಮುಗಿದಿದೆಯಲ್ಲದೇ ನವೆಂಬರ್‌ ತಿಂಗಳು ಮುಗಿಯುತ್ತಲೇ ಬಂದಿದೆ. ಆದರೆ ಪ್ಲಾಸ್ಟಿಕ್‌ ಬಳಕೆಗೆ ಎಳ್ಳು ಕಾಳಷ್ಟು ಅಂಕೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕದ್ದು ಮುಚ್ಚಿ ಪ್ಲಾಸ್ಟಿಕ್‌ ನೀಡುತ್ತಿದ್ದ ವ್ಯಾಪಾರಸ್ಥರು ಮತ್ತೆ ನಿರ್ಭಯವಾಗಿ ಕೊಡುತ್ತಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಹಾಗೂ ತ್ಯಾಜ್ಯಕ್ಕೆ ಎಡೆ ಮಾಡಿಕೊಡುತ್ತಿರುವ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವಂತೆ ಅನೇಕ ವರ್ಷಗಳಿಂದ ಮನವಿ ಮಾಡಲಾಗುತ್ತಿದೆ. ಅಲ್ಲದೇ ಆಗೊಮ್ಮೆ, ಈಗೊಮ್ಮೆ ದಾಳಿ ನಡೆಸಲಾಗುತ್ತಿದೆ. ಆದರೆ ಬಳಕೆ ಮಾತ್ರ ದಿನೇ-ದಿನೇ ಹೆಚ್ಚಳವಾಗುತ್ತಲೇ ಬಂದಿದೆ. ಇದರ ಪರಿಣಾಮವೇ ಕೇಂದ್ರ ಸರ್ಕಾರ ಪಟ್ಟಿ ಮಾಡಿರುವ ಕೆಟ್ಟ ವಾತಾವರಣದ ಪಟ್ಟಿಯಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಜತೆಗೆ ಕಲಬುರಗಿ ಜಿಲ್ಲೆಯೂ ಸೇರಿದೆ. ಹೀಗಾಗಿ ಚಿಂತನೆ ಮಾಡಿ ದೃಢ ಹೆಜ್ಜೆ ಹಾಕುವುದು ಅಗತ್ಯವಿದೆ.

ಮಾರಕ ಪ್ಲಾಸ್ಟಿಕ್‌: ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆಯೇ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧವಿದೆ. ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ ಎಂದು ಅನೇಕ ಬಾರಿ ಸೂಚಿಸಲಾಗಿದ್ದರೂ ಕಾರ್ಯಾನುಷ್ಠಾನಕ್ಕೆ ಬಂದಿಲ್ಲ. ಸಂಬಂಧಪಟ್ಟವರು ನೋಟಿಸ್‌ ನೀಡಿ ಎಚ್ಚರಿಸಿದ್ದರೂ ಯಾರೂ ಜಾಗೃತಗೊಂಡಿಲ್ಲ. ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಅಂಶ ಸೇರಿದ್ದರಿಂದ ಅದನ್ನು ಉಪಯೋಗಿಸುವವರು ರೋಗಕ್ಕೆ ತುತ್ತಾಗಬಹುದಾಗಿದೆ ಎನ್ನುವ ಎಚ್ಚರಿಕೆ ನೀಡಿದ್ದರೂ ಯಾರೂ ಜಾಗೃತಗೊಳ್ಳುತ್ತಿಲ್ಲ.

Advertisement

ಕಲಬುರಗಿ ಮಹಾನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧ ಕಾರ್ಯಾನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಒಂದೆರಡು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು. ಒಟ್ಟಾರೆ ಪ್ಲಾಸ್ಟಿಕ್‌ ಬಳಕೆ ಮೇಲೆ ನಿಷೇಧ ಕುರಿತು ಮತ್ತೂಮ್ಮೆ ಅಧಿಸೂಚನೆ ಹೊರಡಿಸಿ ಪಾಲಿಕೆ ಕಾರ್ಯಾಚರಣೆಗೆ ಇಳಿಯಲಿದೆ.
 ಪೆದ್ದಪ್ಪಯ್ಯ ಆರ್‌.ಎಸ್‌., ಆಯುಕ್ತರು, ಕಲಬುರಗಿ ಪಾಲಿಕೆ

ಕಲಬುರಗಿ ಮಹಾನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು ಬರೀ ಎಚ್ಚರಿಕೆ ಹಾಗೂ ಗಡುವು ನೀಡುವುದು ಸಾಕು. ಈಗೇನಿದ್ದರೂ ಕಾರ್ಯಾನುಷ್ಠಾನ ಮಾಡುವುದು ಮುಖ್ಯವಾಗಿದೆ. ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಲ್ಲಬೇಕಿದೆ.
 ಶಿವಕುಮಾರ ಧಂಗಾಪುರ, ಬ್ರಹ್ಮಪುರ ಬಡಾವಣೆ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next