Advertisement

ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ : ಕೇಂದ್ರದಿಂದ ಹಸುರು ನಿಶಾನೆ

02:23 AM Jan 23, 2021 | Team Udayavani |

ಮಂಗಳೂರು, ಜ. 22: ಗಂಜಿಮಠ ಪರಿಸರದ 90 ಎಕರೆ ಜಾಗದಲ್ಲಿ ಅನುಷ್ಠಾನಗೊಳ್ಳಲಿರುವ “ಪ್ಲಾಸ್ಟಿಕ್‌ ಪಾರ್ಕ್‌’ ಯೋಜನೆಗೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಹಸುರು ನಿಶಾನೆ ತೋರಿಸಿದೆ. ಈ ಮೂಲಕ ಬಹುನಿರೀಕ್ಷಿತ ಯೋಜನೆ ಅನುಷ್ಠಾನ ಶೀಘ್ರ ಪ್ರಾರಂಭಗೊಳ್ಳುವ ಸಾಧ್ಯತೆಯಿದೆ.

Advertisement

1 ಸಾವಿರ ಕೋ.ರೂ. ವೆಚ್ಚ :

ಸುಮಾರು 1 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಪ್ಲಾಸ್ಟಿಕ್‌ ತಯಾರಿಕೆಯ ಜತೆಗೆ, ಪ್ಲಾಸ್ಟಿಕ್‌ನ ಮರುಬಳಕೆ ತಂತ್ರಜ್ಞಾನಕ್ಕೂ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗುತ್ತದೆ. ದೇಶದಲ್ಲಿ ಹಲವಾರು ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿ ಘಟಕಗಳಿವೆ. ಈ ಘಟಕಗಳು ಲಘು ಮತ್ತು ಸಣ್ಣ ಪ್ರಮಾಣದಲ್ಲಿದ್ದು, ಬೇಡಿಕೆ ಪೂರೈಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹುತೇಕ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಇದನ್ನು ನಿವಾರಿಸವುದಕ್ಕಾಗಿಯೇ ದೇಶದ ವಿವಿಧೆಡೆ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ ಸರಕಾರ ಮುಂದಾಗಿತ್ತು.

ಸಂಸದ ನಳಿನ್‌ ಒತ್ತಾಸೆ :

ವಿವಿಧ ರಾಜ್ಯಗಳಲ್ಲಿ 6 ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಗೆ ಈ ಹಿಂದೆ ಮಂಜೂರಾತಿ ನೀಡಲಾಗಿತ್ತು. ಇದರ ಜತೆಗೆ ಮಧ್ಯಪ್ರದೇಶ, ತ.ನಾಡು, ಒಡಿಶಾ ಮತ್ತು ಅಸ್ಸಾಂಗಳಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ವಿಶೇಷವೆಂದರೆ ಎಲ್ಲ ಭಾಗದ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಯೋಜನೆ ಅನುಷ್ಠಾನ ಹಂತದಲ್ಲಿದ್ದರೂ ಮಂಗಳೂರು ಯೋಜನೆ ಮಾತ್ರ ಕಡತದಲ್ಲಿ ಬಾಕಿಯಾಗಿತ್ತು. ಈಗ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಒತ್ತಾಸೆಯ ಮೇರೆಗೆ ಯೋಜನೆಗೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಹಸಿರು ನಿಶಾನೆ ತೋರಿಸಿದೆ.

Advertisement

ಈಬಗ್ಗೆ ಸುದ್ದಿಗಾರರ ಜತೆಗೆ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು, “ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದ್ದು, ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾಗಿದ್ದ ದಿ| ಅನಂತ್‌ ಕುಮಾರ್‌ ಅವರಿಗೆ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರಾವಳಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು’ ಎಂದರು.

ಈ ಬಗ್ಗೆ ನಳಿನ್‌ ಕುಮಾರ್‌ ಕಟೀಲು ಅವರು ಟ್ವೀಟ್‌ ಮೂಲಕವೂ ಸಂತಸ ವ್ಯಕ್ತಪಡಿಸಿದ್ದು, ಕೃತಜ್ಞತೆ ಅರ್ಪಿಸಿದ್ದಾರೆ.

ಕರಾವಳಿಯ ಸುದೀರ್ಘ‌ ವರ್ಷದ ಬೇಡಿಕೆ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಅವಕಾಶಗಳು ತೆರೆದುಕೊಂಡಿತ್ತು. ಎಂಆರ್‌ಪಿಎಲ್‌ನಿಂದ ಪಾಲಿಪ್ರೊಪಲಿನ್‌ ಘಟಕ ಆರಂಭವಾಗುತ್ತಿದ್ದಂತೆಯೇ ಕರಾವಳಿಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ನ ಬೇಡಿಕೆ ಗರಿಗೆದರಿತ್ತು. ಪಾಲಿಪ್ರೊಪಲಿನ್‌ ಘಟಕದ ತ್ಯಾಜ್ಯವು ಪ್ಲಾಸ್ಟಿಕ್‌ ಪಾರ್ಕ್‌ನ ಕಚ್ಚಾ ವಸ್ತುವಾಗಿ ಬಳಕೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ಗೆ

ಸ್ಥಾಪಿಸುವಂತೆ ಕೆನರಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಆಂಡ್‌ ಟ್ರೇಡರ್ಸ್‌ ಅಸೋಸಿಯೇಶನ್‌ ವತಿಯಿಂದ ಹಲವು ವರ್ಷಗಳ ಹಿಂದೆಯೇ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದರಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲವು, ಇದಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿತ್ತು.

ಸ್ಥಳೀಯಯರಿಗೆ ಉದ್ಯೋಗವಕಾಶ :

ಬಹುನಿರೀಕ್ಷಿತ, ದೂರದೃಷ್ಟಿಯ ಬೃಹತ್‌ ಯೋಜನೆ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಸರಕಾರದ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಹಸುರು ನಿಶಾನೆ ತೋರಿಸಿದೆ. ಕೇಂದ್ರದ ಮೇಕ್‌ ಇನ್‌ ಇಂಡಿಯಾ ಯೋಜನೆಯ ಅಂಗವಾಗಿರುವ ಪ್ಲಾಸ್ಟಿಕ್‌ ಪಾರ್ಕ್‌ ಗಂಜಿಮಠ ಪರಿಸರದಲ್ಲಿ ಅನುಷ್ಠಾನಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸಹಿತ ಜಿಲ್ಲೆಯ ಬೆಳವಣಿಗೆಗೆ ಕಾರಣವಾಗಲಿದೆ. . ನಳಿನ್‌ ಕುಮಾರ್‌ ಕಟೀಲು,  ಸಂಸದರು, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next