ತಿಪಟೂರು: ಪ್ರತಿಯೊಬ್ಬರೂ ಪ್ಲಾಸ್ಟಿಕ್ ವಸ್ತು ಬಳಸುವುದಿಲ್ಲವೆಂದು ದೃಢ ಸಂಕಲ್ಪ ಮಾಡಿದಾಗ ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅರಿವು ಮೂಡಿಸ ಬೇಕೆಂದು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಂದೀಶಯ್ಯ ತಿಳಿಸಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಿಂದ ಉನ್ನತ್ ಭಾರತ್ ಅಭಿಯಾನದಡಿಯಲ್ಲಿ ಎನ್‌ಎಸ್‌ಎಸ್ ಸಹಯೋಗದೊಂದಿಗೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನದಲ್ಲಿ ಮಾತನಾಡಿದರು. ಪ್ಲಾಸ್ಟಿಕ್‌ಮುಕ್ತ ಗ್ರಾಮ ಮಾಡಬೇಕೆಂಬ ಪರಿಕಲ್ಪನೆಯೊಂದಿಗೆ ತಾಲೂಕಿನ ಹುಚ್ಚಗೊಂಡನಹಳ್ಳಿ, ಕೋಟನಾಯಕನಹಳ್ಳಿ, ಹಿಂಡಿಸ್ಕೆರೆ, ದೇವರ ಹೊಸಹಳ್ಳಿ ಮತ್ತು ಹೊನ್ನೇನಹಳ್ಳಿ ಆಯ್ಕೆ
ಮಾಡಿಕೊಂಡು ಪ್ಲಾಸ್ಟಿಕ್ ಪರಿಣಾಮದ ಬಗ್ಗೆ ಅರಿವು ಮೂಡಿಸಲಾಗಿದ್ದು, ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯರು, ದನಕರು ಸೇರಿ ಇತರ ಜೀವಿಗಳ ಪ್ರಾಣಕ್ಕೆ ಕುತ್ತು ಬರಲಿದ್ದು, ಇದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿಯೂ ಕರಗದ ವಸ್ತುವಾಗಿದ್ದು, ಇದರಿಂದ ಪರಿಸರಕ್ಕೂ ಧಕ್ಕೆಯುಂಟಾಗಲಿದೆ. ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗ್ ಬಳಕೆ ರೂಢಿಸಿಕೊಳ್ಳಬೇಕಿದೆ ಎಂದರು.
ಯುಬಿಎ ಮುಖ್ಯ ಸಂಯೋಜಕ ಡಾ. ಕಿರಣ್ ಮಾತನಾಡಿ, ಅ.2ರೊಳಗೆ ಐದು ಗ್ರಾಮಗಳನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ಮಾಡಬೇಕು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಹುಚ್ಚಗೊಂಡನಹಳ್ಳಿ ಪಿಡಿಒ ವೇದಮೂರ್ತಿ, ಕರಡಿ ಗ್ರಾಪಂ ಅಧ್ಯಕ್ಷೆ ಸರ್ವಮಂಗಳ, ತಡಸೂರು ಪಿಡಿಒ ಮಮತಾ, ಕಾಲೇಜಿನ ಡಾ. ಚಂದ್ರಕಲಾ ಇತರರಿದ್ದರು. ಐದು ಗ್ರಾಮಗಳಿಂದ ವಿದ್ಯಾರ್ಥಿಗಳ ತಂಡ ಸುಮಾರು 30 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದರು.