Advertisement

ಸಾಮಾಜಿಕ ಸ್ವಾಸ್ಥ್ಯಕ್ಕೆ ಹೊಸ ಹೆಜ್ಜೆ

05:20 PM Feb 15, 2021 | Team Udayavani |

ಕಾರವಾರ: ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್‌ ವಾಟರ್‌ ಬಾಟೆಲ್‌, ಕ್ಯಾನ್‌ ಹಾಗೂ ಐಸ್ಕ್ರೀಂಗೆ ಬಳಸುವ ಪ್ಲಾಸ್ಟಿಕ್‌ ಚಿಕ್ಕಚಿಕ್ಕ ಡಬ್ಬಗಳು ಸೇರಿದಂತೆ ತ್ಯಾಜ್ಯ ಪ್ಲಾಸ್ಟಿಕ್‌ನ್ನು ಪರಿಸರದಿಂದ, ಜನವಸತಿ ಪ್ರದೇಶದಿಂದ ಆಯ್ದು ಸಂಗ್ರಹಿಸುವ ಕುಟುಂಬಗಳ ಸಾಮಾಜಿಕ ಭದ್ರತೆ ಹಾಗೂ ಸಬಲೀಕರಣಕ್ಕೆ ಕೆನಡಾ ಹಾಗೂ ಬೆಂಗಳೂರು ಮೂಲದ ಸ್ವಯಂ ಸ್ವೇವಾ ಸಂಸ್ಥೆ ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಮುಂದಾಗಿದೆ.

Advertisement

ಚೆನ್ನೈ, ಬೆಂಗಳೂರು, ಮಂಗಳೂರು, ಉಡುಪಿ, ಬೆಳಗಾವಿ, ಹುಬ್ಬಳ್ಳಿ ಧಾರವಾಡಗಳಲ್ಲಿ ಕಳೆದ 3 ವರ್ಷದಿಂದ ಪಿಎಫ್‌ಸಿ ಕಾರ್ಯ ಮಾಡುತ್ತಿದ್ದು, ಈ ಯೋಜನೆಯನ್ನು ಕಾರವಾರ ನಗರಕ್ಕೂ ವಿಸ್ತರಿಸಲು ಯೋಜಿಸಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸಹ ಪ್ಲಾಸ್ಟಿಕ್‌ ತ್ಯಾಜ್ಯ ಟನ್‌ಗಟ್ಟಲೆ ಬರುತ್ತಿದ್ದು ಅದನ್ನು  ನಗರಸಭೆ ಮನೆಮನೆ ಕಸ ಸಂಗ್ರಹದಿಂದ ಬೇರ್ಪಡಿಸುತ್ತಿದೆ. ಆದರೂ ಸಹ ಪ್ರವಾಸಿ ತಾಣಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಖಾಸಗಿ ಸಮಾರಂಭಗಳ ಸುತ್ತಮುತ್ತ, ನಾಲಾಗಳಲ್ಲಿ ಪ್ಲಾಸ್ಟಿಕ್‌ ಎಸೆಯುವುದು ಕಂಡು ಬರುತ್ತಿದೆ. ಇಂತಹ ಪ್ಲಾಸ್ಟಿಕ್‌ ಸಂಗ್ರಹಕ್ಕೆ ನಗರದಲ್ಲಿ ಸದ್ದಿಲ್ಲದೆ 50 ಕುಟುಂಬಗಳು ಶ್ರಮಿಸುತ್ತಿವೆ. ಈ ಕುಟುಂಬಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಉತ್ತಮಗೊಳಿಸಲು ಹಾಗೂ ಇಲ್ಲಿ ಕೆಲಸ ಮಾಡುವ ಮಹಿಳೆಯರ ಸಬಲೀಕರಣಕ್ಕೆ ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಸಂಸ್ಥೆ ಕೆಲಸ ಮಾಡಲು ಇದೀಗ ಮುಂದಾಗಿದೆ.

ಬದುಕು ಸಂಸ್ಥೆಯ ನೆರವಿನಿಂದ ಮೊದಲು ಪ್ಲಾಸ್ಟಿಕ್‌ ಸಂಗ್ರಹದ ಕುಟುಂಬಗಳನ್ನು ಗುರುತಿಸಲಾಗಿದ್ದು, ಇಂಥ ಕುಟುಂಬಗಳಲ್ಲಿ 30 ಕುಟುಂಬಗಳಿಗೆ ಮಾಸ್ಕ್, ಗಮ್‌ ಬೂಟ್‌, ಕೈಗವಸು, ಕೋಟ್‌, ಸ್ಯಾನಿಟರಿ ಪ್ಯಾಡ್‌, ಶೂಸ್‌, ಟೂತ್‌ ಬ್ರಷ್‌, ಸೋಪ್‌, ನೇಲ್‌ ಕಟರ್‌, ಕೊಕನಟ್‌ ಆಯಿಲ್‌, ಮೆಡಿಕೇರ್‌ ಶಾಂಪು, ಬಾಚಣಿಕೆ  ಇರುವ ಕಿಟ್‌ ಗಳನ್ನು ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ನ್ಯೂಟ್ರೀಶಿಯನ್‌ ಕಿಟ್‌ ವಿತರಣೆ ಹಾಗೂ ಸ್ಕ್ರಾಪ್‌ ಶಾಪ್‌ಗ್ಳ ಜೊತೆ ಸಂವಾದ ಮಾಡಿ, ತ್ಯಾಜ್ಯ ವಿಂಗಡಣೆಯ ಶಿಸ್ತು ಮೂಡಿಸಲು ಯತ್ನ  ಮಾಡಲಾಗುವುದು ಎಂದು ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಮಂಗಳೂರು ವಿಭಾಗದ ಸಾಮಾಜಿಕ ಕಾರ್ಯಕರ್ತೆ ಚರಿತ್ರಾ ಹೇಳುತ್ತಾರೆ.

ಸಾಮಾಜಿಕ ಬದಲಾವಣೆ ತರಬೇಕಿದೆ: ಬಳಸಿ ಬಿಟ್ಟ ಪ್ಲಾಸ್ಟಿಕ್‌ ತ್ಯಾಜ್ಯ ಪರಿಸರದಲ್ಲಿ ಹಾಗೆ ಬಿಟ್ಟರೆ ಅಪಾಯಕಾರಿ. ಅದನ್ನು ಸಂಗ್ರಹಿಸಿ ಉಪಕಾರ ಮಾಡುವ ಕುಟುಂಬಗಳ ಶ್ರಮ ಬಹಳ ದೊಡ್ಡ ಕೆಲಸ. ಆದರೆ ಅವರ ಜೀವನ ಶೈಲಿ ಸಂಕಷ್ಟದಲ್ಲಿದೆ. ಅವರ ಕುಟುಂಬಗಳ ಆರ್ಥಿಕ ಏಳ್ಗೆ ಮತ್ತು ಸಾಮಾಜಿಕ ಭದ್ರತೆಗೆ ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಕೆಲಸ ಮಾಡಲು ನಿರ್ಧರಿಸಿದೆ. ಅಲ್ಲದೆ ಸಂಗ್ರಹಿಸಿದ ಪ್ಲಾಸ್ಟಿಕ್‌ ಬಾಟಲ್‌ ಮುಂತಾದ ವಸ್ತುಗಳಿಗೆ ಬೆಲೆ ಕೊಡಲು ಸಹ ಮುಂದೆ ಬಂದಿದೆ.

ಈ ಕಾರ್ಯ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದು, ಇದನ್ನು ಕಾರವಾರಕ್ಕೆ ವಿಸ್ತರಿಸಲಾಗುತ್ತಿದೆ. ಪ್ಲಾಸ್ಟಿಕ್‌ ಸಂಗ್ರಹದ ಕುಟುಂಬಗಳ ಸಬಲೀಕರಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಯೋಜನೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಚಂದನ್‌ ಎಂ.ಸಿ. ಅವರ ಅಭಿಮತ. ಈ ನಿಟ್ಟಿನಲ್ಲಿ ಈಗಾಗಲೇ ಮಂಗಳೂರು, ಉಡುಪಿಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಕಾರವಾರದಲ್ಲಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಕಾರ ನಿರೀಕ್ಷಿಸಿದ್ದೇವೆ. ಈ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿ ಜೊತೆಗೆ ಪ್ಲಾಸ್ಟಿಕ್‌ ನಿರ್ವಹಣೆ, ಶಾಪ್‌ಗ್ಳ ನಿರ್ಮಾಣಕ್ಕೆ ಸಹ ನಮ್ಮಲ್ಲಿ ಯೋಜನೆಯಿದೆ ಎಂದು ಅವರು ವಿವರಿಸಿದರು.

Advertisement

ಪ್ಲಾಸ್ಟಿಕ್‌ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಂಗಡಿಸಿ, ಅವುಗಳನ್ನು ಪ್ಲಾಸ್ಟಿಕ್‌ ಸಂಗ್ರಹ ಮಳಿಗೆಗಳಲ್ಲಿ ಇಟ್ಟು, ಅದಕ್ಕೆ ಮಾರುಕಟ್ಟೆ ಸಹ ಕಲ್ಪಿಸುವ ಕಾರ್ಯದಲ್ಲಿ ಸಹ ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ನಿರತವಾಗಿದೆ. ಜೊತೆಗೆ ಪ್ಲಾಸ್ಟಿಕ್‌ ಸಂಗ್ರಹದ ಕುಟುಂಬಗಳ ಕಾಳಜಿಗೆ ಸಹ ಆದ್ಯತೆ ನೀಡಲಾಗುತ್ತಿದೆ. ಅವರ ಬದುಕಿನಲ್ಲಿ ಮಹತ್ತರ  ತಿರುವು ತರುವ ಉದ್ದೇಶವಿದೆ. ಕೋವಿಡ್‌ ಸಂದರ್ಭದಲ್ಲಿ ಕಾರವಾರಕ್ಕೆ ಬಂದು ಪ್ಲಾಸ್ಟಿಕ್‌ ಸಂಗ್ರಹದ ಕುಟುಂಬಗಳಿಗೆ ರೇಶನ್‌ ವಿತರಿಸಿ ಹೋಗಿದ್ದೆವು. ಈಗ ಸುರಕ್ಷತಾ ಕಿಟ್‌ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ನ್ಯುಟ್ರಿಶನ್‌ ಫುಡ್‌ ಕಿಟ್‌ ವಿತರಿಸುವ ಯೋಜನೆ ಇದೆ ಎಂದು ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಸಂಸ್ಥೆ ತಿಳಿಸಿದೆ. ಪ್ಲಾಸ್ಟಿಕ್‌ ಸಂಗ್ರಹದ ಕುಟುಂಬಗಳನ್ನು ಗುರುತಿಸಲು ಕಾರವಾರದ ಬದುಕು ಸಂಸ್ಥೆ ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಸಂಸ್ಥೆಗೆ ನೆರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next