ಬೆಳ್ತಂಗಡಿ: ಪ್ಲಾಸ್ಟಿಕ್ ಸಹಿತ ಘನತ್ಯಾಜ್ಯಗಳು ಮನುಷ್ಯನ ಅಸ್ತಿತ್ವವನ್ನೇ ಬುಡಮೇಲು ಮಾಡುವ ಮಟ್ಟಿಗೆ ಆವರಿಸಿಕೊಂಡಿವೆ. ಪಟ್ಟಣದ ವ್ಯಾಪ್ತಿಯಲ್ಲಿದ್ದ ತ್ಯಾಜ್ಯ ನಿರ್ವಹಣೆ ಸವಾಲು ಗ್ರಾಮ ಮಟ್ಟಕ್ಕೂ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ತಾಲೂಕಿಗೆ ಒಂದು ಘನತ್ಯಾಜ್ಯ ಘಟಕ ನಿರ್ಮಿಸಲಾಗುತ್ತಿದೆ. ಪ್ರಸಕ್ತ ಉಜಿರೆಯ ಅತ್ತಾಜೆ, ಬಂಟ್ವಾಳದ ನರಿಕೊಂಬುವಿನಲ್ಲಿ ಎಂಆರ್‌ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಘನತ್ಯಾಜ್ಯ ಘಟಕಕ್ಕೆ ಜಾಗ ಗುರುತಿಸಿದ್ದು ಉಜಿರೆಯಲ್ಲಿ ನವೆಂಬರ್ ಅಂತ್ಯಕ್ಕೆ ಸ್ಥಾಪನೆಗೆ ಮುಂದಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಮಂಗಳೂರು, ಮೂಲ್ಕಿ, ಮೂಡುಬಿದಿರೆ ತಾಲೂಕಿನ ಎಡಪದವಿನಲ್ಲಿ 2.70 ಕೋ.ರೂ. ವೆಚ್ಚದ 10 ಟನ್ ಸಾಮರ್ಥ್ಯದ ಘನತ್ಯಾಜ್ಯ ಘಟಕ, ಪುತ್ತೂರು ಕೆದಂಬಾಡಿ, ಕಡಬ, ಸುಳ್ಯ, ಪುತ್ತೂರು ಸಹಿತ ಉಜಿರೆಯ ಅತ್ತಾಜೆಯಲ್ಲಿ, ಬಂಟ್ವಾಳ-ಉಳ್ಳಾಲ ಸೇರಿ ನರೆಕೊಂಬುವಿನಲ್ಲಿ 5 ಟನ್ ಸಾಮರ್ಥ್ಯದ ಘಟಕ ಸ್ಥಾಪನೆಗೆ ಸಂಪೂರ್ಣ ಸಿದ್ಧತೆ ನಡೆಸಲಾಗಿದೆ. ಬಂಟ್ವಾಳದ ಘಟಕಕ್ಕೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ನವೆಂಬರ್ ಅಂತ್ಯದೊಳಗೆ ಶಿಲಾನ್ಯಾಸ ನಡೆಯುವ ಸಾಧ್ಯತೆಯಿದೆ. ಉಜಿರೆ ಘಟಕವು 5 ಟನ್ ಸಾಮರ್ಥ್ಯದ್ದಾಗಿದ್ದು, 7 ಟನ್ ಸಾಮರ್ಥ್ಯದ ಲಾರಿಯನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 25 ಟನ್ ವರೆಗಿನ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವುದು ಸರಕಾರದ ಉದ್ದೇಶ.
1.60 ಕೋಟಿ ರೂ. ವೆಚ್ಚ ಉಜಿರೆಯ ಅತ್ತಾಜೆಯ ಒಂದು ಎಕ್ರೆ ಜಾಗದಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದೆ. ಪ್ರತೀ ಗ್ರಾಮಗಳಲ್ಲಿ ಸಂಗ್ರಹಿಸಿದ ಒಣ ತ್ಯಾಜ್ಯ ಪ್ಲಾಸ್ಟಿಕ್‌ನ್ನು ಘಟಕಕ್ಕೆ ತರಲಾಗುತ್ತದೆ. ಇಲ್ಲಿ ಇವುಗಳನ್ನು ಸುಡದೇ, ಯಾವುದೇ ಕೆಮಿಕಲ್ ಬಳಸದೆ ಮರುಬಳಕೆಗೆ ಯೋಗ್ಯವಾಗುವಂತೆ ಸಂಸ್ಕರಿಸಿದ ಬಳಿಕ ಸಿಮೆಂಟ್ ಕಾರ್ಖಾನೆ ಇತ್ಯಾದಿ ಸೇರಿದಂತೆ ಬೇರೆ ಕಾರ್ಖಾನೆಗಳಿಗೂ ನೀಡಲಾಗುತ್ತದೆ.
ಎರಡನೇ ಹಂತದ ವಿಂಗಡಣೆ: ಈ ಕೇಂದ್ರದಿಂದ ವಾಸನೆ, ಪರಿಸರ ಮಾಲಿನ್ಯದ ಸಮಸ್ಯೆ ಇಲ್ಲ. ತಾಲೂ ಕಿನಾದ್ಯಂತ ಸಂಗ್ರಹಿಸಿದ ಒಣ ಕಸವನ್ನು ನಿಗದಿತ ವಾಹನದಲ್ಲಿ ಘಟಕಕ್ಕೆ ತರಲಾ ಗುತ್ತದೆ. ಅಲ್ಲಿಂದ ಮರುಬಳಕೆ ಮಾದರಿಗೆ 2ನೇ ಹಂತದಲ್ಲಿ ಪರಿವರ್ತಿಸಿ ಬೇರೆ ಬೇರೆ ಕಡೆಯ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ. ಕಾರ್ಕಳದ ನಿಟ್ಟೆ ಯಲ್ಲಿ ನಿರ್ಮಾಣವಾದ ಕೇಂದ್ರವನ್ನು ಉಜಿರೆ ಗ್ರಾ.ಪಂ. ಆಡಳಿತ ಮಂಡಳಿ ವೀಕ್ಷಿಸಿದೆ. –
ಕುಸುಮಾಧರ್ ಬಿ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ
ಧರ್ಮಸ್ಥಳದಿಂದ 46.65 ಲಕ್ಷ ರೂ. ಅನುದಾನ: ಘಟಕಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಬೆಂಬಲ ನೀಡಿದೆ. ಇದರ ಸಿಆರ್‌ಎಸ್ ನಿಧಿಯಿಂದ ವಿವಿಧ ಘಟಕಕ್ಕೆ ಒಟ್ಟು 8 ಆವಶ್ಯಕ ಯಂತ್ರೋಪಕರಣ ಖರೀದಿಗೆ 46.65 ಲಕ್ಷ ರೂ. ಅನುದಾನವನ್ನು ಒದಗಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಸಮಗ್ರ ಘನತ್ಯಾಜ್ಯ ವಿಂಗಡಣೆಗೆ ಒತ್ತು ನೀಡಲಾಗಿದೆ.
ಉದ್ಯೋಗಾವಕಾಶ: ಉಜಿರೆಯಲ್ಲಿ ತಾಲೂಕಿಗೆ ಸಂಬಂಧ ಪಟ್ಟಂತೆ ಉಜಿರೆ ಗ್ರಾ.ಪಂ. ಗೆ ಘಟಕ ಮಂಜೂರಾಗಿದೆ. ಶಾಸಕರು 3ವರ್ಷದ ಹಿಂದೆಯೇ 11 ಎಕ್ರೆ ಜಮೀನನ್ನು ಆರ್.ಟಿ.ಸಿಯಲ್ಲಿ ಘನತ್ಯಾಜ್ಯ ನಿರ್ವಹಣ ಉದ್ಯಾನಕ್ಕೆಂದು ಜಾಗ ಕಾದಿರಿಸಲಾಗಿದೆ. ಅವರ ಆಶಯದಂತೆ ಎಂ.ಆರ್.ಎಫ್. ಯುನಿಟ್ ಸಿಕ್ಕಿದೆ. 1.60 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಆಗಿದೆ. ಸುತ್ತಮುತ್ತಲಿನ ಪ್ರದೇಶದ ಸುಮಾರು 25 ರಿಂದ 30 ಜನರಿಗೆ ಉದ್ಯೋಗಾವಕಾಶ ಸಿಗಲಿದೆ. –
ಪ್ರಕಾಶ್ ಶೆಟ್ಟಿ ನೊಚ್ಚ, ಅಭಿವೃದ್ಧಿ ಅಧಿಕಾರಿ ಉಜಿರೆ ಗ್ರಾ.ಪಂ.