Advertisement

ಪ್ಲಾಸ್ಟಿಕ್‌ ನಿಷೇಧ: ನೈಸರ್ಗಿಕ ಚಾಪೆಗಳು ಮತ್ತೆ ಮುನ್ನೆಲೆಗೆ

11:06 PM Sep 15, 2019 | Sriram |

ಕಲ್ಲುಗುಡ್ಡೆ : ಪ್ರಕೃತಿಯಲ್ಲಿ ಬೆಳೆದ ಹುಲ್ಲು, ತಾಳೆ ಗರಿ, ಮುಂಡೋವು ಎಲೆಗಳನ್ನು ಬಳಸಿ ನೈಸರ್ಗಿಕ ಚಾಪೆ ತಯಾರಿಸುವ ವೃತ್ತಿ ಅಳಿವಿನಂಚಿಗೆ ಸರಿದಿತ್ತು. ಪ್ಲಾಸ್ಟಿಕ್‌ ನಿಷೇಧದ ಸಾಧ್ಯತೆ ಹಿನ್ನೆಲೆಯಲ್ಲಿ ನೈಸರ್ಗಿಕ ಚಾಪೆ ನೇಯು ವವರಿಗೆ ಬೇಡಿಕೆ ಕುದುರುವ ನಿರೀಕ್ಷೆ ಇದೆ.

Advertisement

ಗ್ರಾಮೀಣ ಭಾಗದಲ್ಲಿ ಬಡ ಕುಟುಂಬಗಳಲ್ಲಿ ಚಾಪೆ ತಯಾರಿ ಸಂಪಾದನೆಯ ಮಾರ್ಗವಾಗಿತ್ತು. ಇಂದು ಊರಲ್ಲಿ ಚಾಪೆ ತಯಾರಿಸುತ್ತಿದ್ದರೂ ಅವು ಸೀಮಿತ ಸಂಖ್ಯೆಯಲ್ಲಿರುತ್ತವೆ. ವಿವಾಹ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಮುಂತಾದವುಗಳಿಗೆ ನೈಸರ್ಗಿಕ ಚಾಪೆಗಳನ್ನು ಉಪಯೋಗಿಸುತ್ತಿದ್ದರು. ಬೇಸಾಯಗಾರರ ಮನೆಗಳಲ್ಲಿ ಈ ಚಾಪೆಗಳು ತಪ್ಪದೆ ಇರುತ್ತಿದ್ದವು. ಪ್ಲಾಸ್ಟಿಕ್‌ನ ರಂಗು ರಂಗಿನ ರೆಡಿಮೇಡ್‌ ಚಾಪೆಗಳು ಬಂದಾಗ ಜನರ ಒಲವು ಅವುಗಳತ್ತ ಹೊರಳಿತ್ತು.

ಹಿಂದೆ ಕಸುಬಾಗಿತ್ತು
ಮುಂಡೋವು ಮುಳ್ಳಿನ ಎಲೆಯನ್ನು ಒಣಗಿಸಿ ಅದರಿಂದ ಚಾಪೆ ತಯಾರಿಸುವುದು ಒಂದು ಕಸುಬಾಗಿತ್ತು. ಹಿಂದೆಲ್ಲ ಇಂಥ ಚಾಪೆಗಳನ್ನು ತಯಾರಿಸಿ, ಊರೆಲ್ಲ ಸುತ್ತಿ, ಅವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹಲವರಿದ್ದರು. ಕ್ರಮೇಣ ಪ್ಲಾಸ್ಟಿಕ್‌ ಚಾಪೆಗಳ ಹಾವಳಿ ಹೆಚ್ಚಾಗಿ ಜನರು ನೈಸರ್ಗಿಕ ಚಾಪೆಯ ಕುರಿತಾದ ಆಕರ್ಷಣೆ ಕಳೆದುಕೊಂಡಿದ್ದರು. ಚಾಪೆ ಹೆಣೆಯಲು ಬಲ್ಲವರೆಲ್ಲ ಈಗ ವೃದ್ಧರಾಗಿದ್ದಾರೆ. ಅವರು ಮಳೆಗಾಲದಲ್ಲಿ ಮನೆಯೊಳಗೇ ಕುಳಿತು ನೈಸರ್ಗಿಕ ವಸ್ತುಗಳಿಂದ ಚಾಪೆ ಹೆಣೆಯುತ್ತಾರೆ.

ಅಳಿವಿನಂಚಿನಲ್ಲಿ
ನೈಸರ್ಗಿಕವಾಗಿ ತಯಾರಿಸಿದ ಚಾಪೆಗಳು ಪೇಟೆಯ ಒಂದೊಂದು ಅಂಗಡಿಗಳಲ್ಲಿ ಕಾಣಸಿಗುತ್ತವಷ್ಟೇ. ಚಾಪೆ ಹೆಣೆಯಲು ಕಲಿಯುವ ಆಸಕ್ತಿ ಉಳ್ಳವರು ಹೆಚ್ಚಿಲ್ಲ. ಮುಂಡೋವು ಎಲೆಗಳ ಅಭಾವ ಚಾಪೆ ಹೆಣೆಯುವ ವೃತ್ತಿಯಿಂದ ಹಿಂದೆ ಸರಿಯಲು ಮತ್ತೂಂದು ಕಾರಣ. ನಿದ್ರಿಸಲು ಮಂಚ- ಹಾಸಿಗೆ, ಕುಳಿತುಕೊಳ್ಳಲು ಕುರ್ಚಿ, ಸೋಫಾ ಇತ್ಯಾದಿಗಳು ಬಂದಿರುವಾಗ, ಪ್ಲಾಸ್ಟಿಕ್‌ ಚಾಪೆಗಳನ್ನು ಬಳಸುತ್ತಿರುವಾಗ ಚಾಪೆ ಹೆಣೆಯುವುದು ಯಾರಿಗಾಗಿ ಎಂದು ವೃದ್ಧೆಯೊಬ್ಬರು ಪ್ರಶ್ನಿಸಿದ್ದಾರೆ. ಪ್ಲಾಸ್ಟಿಕ್‌ ನಿಷೇಧ ಜಾರಿಯಾದರೆ ಮತ್ತೂಮ್ಮೆ ಜನ ಸಾಂಪ್ರದಾಯಿಕ ವಸ್ತುಗಳತ್ತ ಹೊರಳುತ್ತಾರೆ ಎನ್ನುವ ನಿರೀಕ್ಷೆಯೂ ಅವರಲ್ಲಿದೆ.

ತಯಾರಿಸುವ ವಿಧಾನ
ಮುಂಡೋವು ಮುಳ್ಳಿನ ಎಲೆಗಳನ್ನು ಕತ್ತರಿಸಿ, ಬಿಸಿಲಿಗೆ ಒಣಗಲು ಹಾಕಿ, ಬಳಿಕ ಅದರ ಮುಳ್ಳುಗಳನ್ನು ತೆಗೆದು ಎಲೆಗಳನ್ನು ನಿರ್ದಿಷ್ಟ ಅಳತೆಯ ಅಗಲಕ್ಕೆ ಕತ್ತರಿಸಿ ಚಾಪೆ ಹೆಣೆಯಲು ಪ್ರಾರಂಭಿಸಬೇಕು. ಮೊದಲಿಗೆ ಚಾಪೆಯ ಮೂಲೆಯಿಂದ ಪ್ರಾರಂಭಿಸಿ ನಿರ್ದಿಷ್ಟವಾಗಿ ಚಾಪೆಯ ಒಂದು ಬದಿಯಿಂದ ಹೆಣೆಯುತ್ತಾ ಬರಬೇಕು.

Advertisement

ಆರೋಗ್ಯಕ್ಕೆ ಉತ್ತಮ
ನೈಸರ್ಗಿಕ ಚಾಪೆಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇನ್ನೂ ಬೇಡಿಕೆ ಇದೆ. ಈ ಚಾಪೆಯಲ್ಲಿ ಮಲಗುವುದು ಆರೋಗ್ಯಕ್ಕೂ ಉತ್ತಮ.

 ವರ್ಷಕ್ಕೊಂದೇ ಚಾಪೆ!
ಹಿಂದಿನ ಕಾಲದಲ್ಲಿ ನೈಸರ್ಗಿಕ ಚಾಪೆಯೇ ಮುಖ್ಯವಾಗಿತ್ತು. ಇಂದು ಹಾಗಿಲ್ಲ. ನಾನು ಮದುವೆಯಾಗಿ ಬಂದ ಬಳಿಕ ಇಲ್ಲಿಯ ಮಹಿಳೆಯರು ಚಾಪೆ ಹೆಣೆಯುವುದನ್ನು ನೋಡಿ ಕಲಿತಿದ್ದಾರೆ. ಮರೆತು ಹೋಗಬಾರದು ಎನ್ನುವ ಉದ್ದೇಶದಿಂದ ಇಂದಿಗೂ ಮಳೆಗಾಲದಲ್ಲಿ ಕನಿಷ್ಠ ಒಂದಾದರೂ ಚಾಪೆಯನ್ನು ಹೆಣೆಯುತ್ತಿದ್ದೇನೆ. ಯುವಜನರು ಕಲಿತರೆ ಉತ್ತಮ.
 - ಸೀತಮ್ಮ ಬ್ರಾಂತಿಗುಂಡಿ
ಚಾಪೆ ಹೆಣೆಯುವ ಹವ್ಯಾಸಿ

– ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next