ಹುಬ್ಬಳ್ಳಿ: ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಮೂಲಕ ಚಿಕಿತ್ಸೆ ನೀಡಿದ್ದ ಇಲ್ಲಿನ ಕಿಮ್ಸ್ ಕೋವಿಡ್ ಕೇಂದ್ರದಲ್ಲಿ ಮತ್ತೆ ಮೂವರಿಗೆ ಈ ಪದ್ಧತಿ ಅನುಸಾರ ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇನ್ನೊಬ್ಬರು ಐಸಿಯುನಲ್ಲಿದ್ದಾರೆ.
ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದ ಹುಬ್ಬಳ್ಳಿಯ ನಿವಾಸಿಯಿಂದ ಪ್ಲಾಸ್ಮಾ ಪಡೆದು ಮೇ ತಿಂಗಳಲ್ಲಿ ಮೊದಲ ಪ್ಲಾಸ್ಮಾ ಥೆರಪಿ ನಡೆಸಲಾಗಿತ್ತು. ಅನಂತರ ಐಸಿಎಂಆರ್‌ನಿಂದ ಅನುಮತಿ ದೊರೆತ ಕೂಡಲೇ ಜೂ. 27, ಜು. 4 ಮತ್ತು 7ರಂದು ಹುಬ್ಬಳ್ಳಿ, ಹಾವೇರಿ ಜಿಲ್ಲೆ ಹಾನಗಲ್ಲ ಮತ್ತು ಧಾರವಾಡ ತಾಲೂಕು ಮೊರಬ ಗ್ರಾಮದ ತಲಾ ಒಬ್ಬರು ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ.
ಸೋಂಕಿತ ಪ್ರತಿಯೊಬ್ಬರಿಗೂ ತಲಾ 200 ಎಂಎಲ್ ಪ್ಲಾಸ್ಮಾ ಕೊಡಲಾಗಿದೆ. ಥೆರಪಿಗೆ ಒಳಗಾದವರಲ್ಲಿ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಇನ್ನೊಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಮತ್ತೆ ಕೆಲವು ದಿನಗಳ ಅನಂತರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಿದ್ದು, ವರದಿ ನೆಗೆಟಿವ್ ಬರುವ ವಿಶ್ವಾಸವಿದೆ. ಇದುವರೆಗೆ ಹುಬ್ಬಳ್ಳಿಯ ಮೂವರು ಹಾಗೂ ಧಾರವಾಡದ ಇಬ್ಬರಿಂದ ಪ್ಲಾಸ್ಮಾ ಪಡೆಯಲಾಗಿದೆ. ಅದರಲ್ಲಿ ನಾಲ್ವರು ಸೋಂಕಿತರಿಗೆ ಪ್ಲಾಸ್ಮಾ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಕಿಮ್ಸ್‌ನ ಮೆಡಿಸನ್ ವಿಭಾಗದ ಡಾ| ರಾಮ ಕೌಲಗುಡ್ಡ, ಡಾ| ಈಶ್ವರ ಹಸಬಿ, ಡಾ| ಸಚಿನ ಹೊಸಕಟ್ಟಿ, ಪ್ಯಾಥಾಲಜಿ ವಿಭಾಗದ ಡಾ| ಕವಿತಾ ಏವೂರ, ಡಾ| ಪುರುಷೋತ್ತಮ ರೆಡ್ಡಿ ಅವರ ತಂಡವು ಪ್ಲಾಸ್ಮಾ ಚಿಕಿತ್ಸೆ ನಡೆಸಿದೆ.