Advertisement

ಚಿಂದಿ ಆಯುವ 300 ಕುಟುಂಬಗಳಿಗೆ ನೆರವು

06:15 PM Jun 09, 2021 | Team Udayavani |

ವರದಿ: ಹೇಮರಡ್ಡಿ ಸೈದಾಪುರ

Advertisement

ಹುಬ್ಬಳ್ಳಿ: ಕೋವಿಡ್‌ ಮಹಾಮಾರಿಗೆ ಚಿಂದಿ ಆಯುವವರ ಬದುಕು ಮೂರಾಬಟ್ಟೆಯಾಗಿದ್ದು, ಜೀವನ ನಡೆಸಲು ದುಸ್ತವಾಗಿರುವ ಸಂದರ್ಭದಲ್ಲಿ ಫೌಂಡೇಶನ್‌ವೊಂದು ಸಹಾಯ ಹಸ್ತ ಚಾಚಿದೆ. ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಅವರ ಜೀವನಕ್ಕೆ ನೆರವಾಗಿದೆ.

ಕಸ ಸಂಗ್ರಹಕಾರರಿಗೆ ಸೊಂಕಿನ ಭೀತಿ ಒಂದೆಡೆಯಾದರೆ ನಿತ್ಯ ಜೀವನ ಸಾಗಿಸುವ ಸಂಕಷ್ಟ ಮತ್ತೂಂದು ಕಡೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಇಂಡಿಯಾ ಫೌಂಡೇಶನ್‌ ಇಂತವರ ಕುಟುಂಬಗಳಿಗೆ ನೆರವಾಗಿದೆ. ಒಂದು ತಿಂಗಳಿಗೆ ಬೇಕಾಗುವ ದಿನಸಿ, ಆರೋಗ್ಯ ಕಿಟ್‌ ತಲುಪಿಸುವ ಕಾರ್ಯ ಮಾಡಿದೆ.

ಮಹಾನಗರ ವ್ಯಾಪ್ತಿಯಲ್ಲಿ 500 ಕುಟುಂಬಗಳ ಪೈಕಿ ಸಂಕಷ್ಟದಲ್ಲಿರುವ 300 ಕುಟುಂಬಗಳನ್ನು ಗುರುತಿಸಿ ನೆರವಿನ ಹಸ್ತ ಚಾಚಿದೆ. ಕಳೆದ ಒಂದು ವರ್ಷದಿಂದ ಕಸ ಸಂಗ್ರಹಿಸುವವರ ಕುರಿತು ಮಹಿಳಾ ಕಲ್ಯಾಣ ಸೊಸೈಟಿಯೊಂದಿಗೆ ಕೆಲಸ ಮಾಡುತ್ತಿರುವ ಫೌಂಡೇಶನ್‌ ಕಳೆದ ಬಾರಿ ಸುಮಾರು 450 ಕುಟುಂಬಗಳಿಗೆ ನೆರವು ನೀಡಿತ್ತು. ಈ ಬಾರಿ 300 ಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್‌ ನೀಡಿದೆ.

ಪಡಿತರ ಚೀಟಿಯುಳ್ಳವರು, ಇಲ್ಲದವರಿಗೆ ಪ್ರತ್ಯೇಕ ಕಿಟ್‌ ಮಾಡಿ ಅವರಿಗೆ ಅಗತ್ಯವಿರುವ ದಿನಸಿ ವಸ್ತುಗಳನ್ನು ನೀಡಲಾಗಿದೆ. ಇದರೊಂದಿಗೆ ವಿಟಾಮಿನ್‌, ಜಿಂಕ್‌ ನಂತಹ ಮಾತ್ರೆಗಳಿರುವ ಮೆಡಿಕಲ್‌ ಕಿಟ್‌ ಕೂಡ ನೀಡಲಾಗಿದೆ.

Advertisement

ಮಹಾನಗರ ವಾಪ್ತಿಯ ಧಾರವಾಡದ ಲಕ್ಷ್ಮೀ ಸಿಂಗನಕೆರೆ, ಹುಬ್ಬಳ್ಳಿಯ ಮಹಾಲಕ್ಷ್ಮೀ ಬಡಾವಣೆ ಬಳಿಯ ಗೋಸಾವಿ ಓಣಿ, ಶಿವಶಂಕರ ಕಾಲನಿ, ಬಂಕಾಪುರ ಚೌಕ್‌ ಬಳಿಯ ಗೊಲ್ಲರ ಓಣಿಯಲ್ಲಿ ಕಸ ಸಂಗ್ರಹಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮೊಬೈಲ್‌ ಸಂಖ್ಯೆ ಅಥವಾ ಪಕ್ಕದ ಮನೆಯ ಮೊಬೈಲ್‌ ಸಂಖ್ಯೆ ಪಡೆದು ಆರೋಗ್ಯದ ಬಗ್ಗೆ ವಿಚಾರಿಸುವುದು, ಅಗತ್ಯವಿದ್ದವರಿಗೆ ವೈದ್ಯರ ಸಲಹೆ ಹಾಗೂ ಅಗತ್ಯ ಔಷಧಗಳನ್ನು ತಲುಪಿಸುವ ಕೆಲಸ ಆಗುತ್ತಿದೆ. ಕೋವಿಡ್‌ ಸೋಂಕಿನ ಲಕ್ಷಣ, ಅಗತ್ಯಬಿದ್ದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸುವ ಕೆಲಸ ಆಗುತ್ತಿದೆ.

120 ಕುಟುಂಬಗಳಿಗೆ ಕಿಟ್‌: ಕಸ ಸಂಗ್ರಹಿಸುವವರೊಂದಿಗೆ ಗುಜರಿ ಅಂಗಡಿಗಳಲ್ಲಿ ಕೆಲಸ ಮಾಡುವವರಿಗೂ ಕಿಟ್‌ ವಿತರಿಸಲು ಯೋಜನೆ ರೂಪಿಸಿದ್ದಾರೆ. ಮಹಾನಗರ ವ್ಯಾಪ್ತಿಯ 20 ಗುಜರಿ ಅಂಗಡಿಗಳಲ್ಲಿ ಕೆಲಸ ಮಾಡುವ ಆರ್ಥಿಕವಾಗಿ ಹಿಂದುಳಿದ, ಕಿಟ್‌ ಅಗತ್ಯ ಇರುವ 120 ಕುಟುಂಬಗಳನ್ನು ಗುರುತಿಸಲಾಗಿದೆ. ಸದ್ಯಕ್ಕೆ ಗುಜರಿ ಅಂಗಡಿಗಳು ಕಾರ್ಯ ನಿರ್ವಹಿಸುವುದು ಕಷ್ಟ ಎನ್ನುವ ಕಾರಣಕ್ಕೆ ಕನಿಷ್ಟ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ, ಮೆಡಿಕಲ್‌ ಕಿಟ್‌ ನೀಡುವ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next