ಕಾರವಾರ: ಪರಿಸರ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜುಲೈ 31 ರಂದು ಜಿಲ್ಲಾದ್ಯಂತ 101 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಅತಿಕ್ರಮಣ ಅರಣ್ಯ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಶನಿವಾರ ಕಾರವಾರದ ಪತ್ರಿಕಾ ಭವನದಲ್ಲಿ 1 ಲಕ್ಷ ಗಿಡ ನೆಡುವ ಪ್ರಚಾರದ ಪೋಸ್ಟರ್ ಬಿಡುಗಡೆಗೊಳಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅರಣ್ಯವಾಸಿಗಳಿಗೂ ಅರಣ್ಯವನ್ನು ರಕ್ಷಿಸಿ, ಸಂರಕ್ಷಿಸುವುದು ಅವರ ಜವಾಬ್ದಾರಿಯಾಗಿರುವುದರಿಂದ ಅರಣ್ಯವಾಸಿಗಳು ಪರಿಸರ ಅಭಿವೃದ್ಧಿ ದಿಶೆಯಲ್ಲಿ, ಪ್ರತಿ ಒಂದು ಕುಟುಂಬದಿಂದ ಮೂರು ಗಿಡ ನೆಡಲು ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ, ಬೆಂಕಿ ಅನಾಹುತಕ್ಕೆ, ಜಲವಿದ್ಯುತ್ ಯೋಜನೆ, ಸಾರಿಗೆ ಉದ್ದೇಶ, ಅರಣ್ಯ ಇಲಾಖೆಯ ಕಾಮಗಾರಿ ಹೀಗೆ ಹಲವು ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿಯ ಮೇಲೆ ಅವಲಂಬಿತ ಅರಣ್ಯವಾಸಿಗಳು ಜಿಲ್ಲಾದ್ಯಂತ ಅರಣ್ಯ ಇಲಾಖೆಯ ಸಹಕಾರವಿಲ್ಲದೇ, ಗಿಡ ನೆಟ್ಟು, ಪರಿಸರ ಜಾಗೃತಿ ಮೂಡಿಸಲಾಗುವುದೆಂದು ಅವರು ಹೇಳಿದರು.
1 ಲಕ್ಷ ಗಿಡ 165 ಗ್ರಾ.ಪಂ ವ್ಯಾಪ್ತಿಯಲ್ಲಿ: ಜಿಲ್ಲಾದ್ಯಂತ 1 ಲಕ್ಷ ಗಿಡ ನೆಡುವ ಕಾರ್ಯಕ್ರಮವನ್ನ ವಿವಿಧ ತಾಲೂಕುಗಳ 165 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜುಲೈ 31 ರಿಂದ ಮುಂದಿನ ಮೂರು ವಾರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಏಕಕಾಲದಲ್ಲಿ 10 ಸಾವಿರ ಅತಿಕ್ರಮಣದಾರರು: ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಗಿಡ ನೆಡುವ ಕಾರ್ಯಕ್ರಮದಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ 3 ಕುಟುಂಬಗಳ ಅರಣ್ಯ ಅತಿಕ್ರಮಣದಾರರ ಸದಸ್ಯರು ಪಾಲ್ಗೊಳ್ಳುವಿಕೆಯಿಂದ ಏಕಕಾಲದಲ್ಲಿ ಜಿಲ್ಲಾದ್ಯಂತ 10 ಸಾವಿರ ಅರಣ್ಯ ಅತಿಕ್ರಮಣದಾರರ ಪಾಲ್ಗೊಳ್ಳುವಿಕೆಯು ಸಾಧ್ಯವಾಗಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಅರಣ್ಯ ಅತಿಕ್ರಮಣದಾರರ ಹೋರಾಟದ ಸಂಘಟನೆಯ ಪ್ರಧಾನ ಸಂಚಾಲಕ ಜಿ.ಎಮ್. ಶೆಟ್ಟಿ ಮಾತನಾಡಿ ಅರಣ್ಯವಾಸಿಗಳು ಭೂಮಿ ಹಕ್ಕಿನ ಹೋರಾಟಕ್ಕೆ ಮಾತ್ರ ಸೀಮಿತವಾಗದೇ, ಪರಿಸರ ಜಾಗೃತಿಗಾಗಿ ಹೋರಾಟಗಾರರ ವೇದಿಕೆಯು ಸನ್ನದ್ಧವಾಗಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ವಿವಿಧ ತಾಲೂಕು ಅಧ್ಯಕ್ಷರುಗಳಾದ ಭೀಮ್ಸಿ ವಾಲ್ಮೀಕಿ ಯಲ್ಲಾಪುರ, ರಮಾನಂದ ನಾಯ್ಕ ಅಂಕೋಲಾ, ಪಾಡುರಂಗ ನಾಯ್ಕ ಭಟ್ಕಳ, ರಿಜವಾನ್, ಯಾಕೂಬ್ ಬೆಟ್ಕುಳಿ, ಬಾಲಚಂದ್ರ ಶೆಟ್ಟಿ ಅಂಕೋಲಾ, ಸಾರಬಿ ಲತಿಫ್ ಕುಮಟ, ರಾಜೇಶ್ ಮಿತ್ರ ನಾಯ್ಕ ಅಂಕೋಲಾ, ಶಬೀರ್ ಕುಂದಗೋಡ, ಮಹಮ್ಮುದ್ ಸತ್ತಾರ್ ಉಪಸ್ಥಿತರಿದ್ದರು.