Advertisement

ಹೊಂಡದಲ್ಲಿ ಗಿಡ ನೆಟ್ಟು, ಬೊಂಬೆ ನಿಲ್ಲಿಸಿ ಪ್ರತಿಭಟನೆ

11:36 AM Aug 01, 2018 | |

ನರಿಮೊಗರು : ಹೊಂಡ-ಗುಂಡಿಗಳಿಂದ ಕೂಡಿ ಸಂಚಾ ರಕ್ಕೆ ದುಸ್ತರವಾಗಿರುವ ಮುಕ್ರಂಪಾಡಿ  ಮುಂಡೂರು-ತಿಂಗಳಾಡಿ ರಸ್ತೆಯ ಪಂಜಳದಲ್ಲಿ ಹೊಂಡಕ್ಕೆ ಗಿಡಗಳನ್ನು ಇಟ್ಟು ಮಾನವ ಬೊಂಬೆಯನ್ನು ನಿಲ್ಲಿಸಿ ಸಾರ್ವಜನಿಕರು ಹಾಗೂ ರಿಕ್ಷಾ ಚಾಲಕರು ಅಣಕದ ಪ್ರತಿಭಟನೆ ನಡೆಸಿದರು.

Advertisement

ಮಳೆ ಬರುವ ವೇಳೆ ಹೊಂಡದಲ್ಲಿ ನೀರು ನಿಲ್ಲುವ ಕಾರಣ ಹೊಂಡಗಳ ಗಾತ್ರ ಗೊತ್ತಾಗದೆ ಕೆಲವೊಂದು ದ್ವಿಚಕ್ರ ವಾಹನಗಳು ಪಲ್ಟಿಯಾಗುವ ಘಟನೆಗಳು ದಿನ ನಿತ್ಯ ನಡೆಯುತ್ತಿವೆ. ಕಳೆದ ವರ್ಷ ಮಳೆಗಾಲ ಸಂದರ್ಭದಲ್ಲಿ ಇದೇ ಹೊಂಡಕ್ಕೆ ಬಿದ್ದು, ಚಾಲಕ, ಮಹಿಳೆಯೊಬ್ಬರು ಗಾಯಗೊಂಡಿದ್ದರು. ರಸ್ತೆಯ ದುರವಸ್ಥೆ ಕುರಿತು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ದುರಸ್ತಿ ಕಾರ್ಯ ನಡೆಸುತ್ತಿಲ್ಲ ಎಂದು ಆರೋಪಿಸಿ ಪಂಜಳ, ಮುಂಡೂರು ಹಾಗೂ ಕುರಿಯ ಭಾಗದ ರಿಕ್ಷಾ ಚಾಲಕರು ರಸ್ತೆ ಹೊಂಡದಲ್ಲಿ ಬಾಳೆಗಿಡವನ್ನು ನೆಟ್ಟು, ಗಿಡದ ಮಧ್ಯೆ ಮಾನವನ ಬೊಂಬೆ ನಿಲ್ಲಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ರಸ್ತೆಯಲ್ಲಿ ರಿಕ್ಷಾ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಎರಡು ವರ್ಷಗಳಿಂದ ನಾವು ನಿತ್ಯ ನರಕಯಾತನೆ ಅನುಭವಿಸುತ್ತಿದ್ದೇವೆ. ಹೊಂಡಕ್ಕೆ ಮಣ್ಣು ಹಾಕಿದರೆ ಮಳೆ ಬರುವ ವೇಳೆ ಅದು ಕೆಸರಾಗುತ್ತದೆ. ಜನಪ್ರತಿನಿಧಿಗಳ, ಇಲಾಖೆಯ ಅಧಿಕಾರಿಗಳ ಗಮನಹರಿಸಲು ಈ ರೀತಿಯ ಪ್ರತಿಭಟನೆಯನ್ನು ಮಾಡಿದ್ದೇವೆ ಎಂದು ರಿಕ್ಷಾ ಚಾಲಕ ಸಂತೋಷ್‌ ರೈ ಪಂಜಳ ಹೇಳಿದರು.

ಹೊಂಡಗಳು ನಿರ್ಮಾಣವಾದ ಕಾರಣ ರಸ್ತೆಯೇ ಇಲ್ಲದಂತಾಗಿದೆ. ನಾವು ಪ್ರತಿಭಟನೆ ನಡೆಸಬಹುದೇ ವಿನಃ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಇಲ್ಲಿನ ರಸ್ತೆಯನ್ನು ತತ್‌ಕ್ಷಣ ದುರಸ್ತಿ ಮಾಡಬೇಕು ಎಂದು ರಿಕ್ಷಾ ಚಾಲಕ ಬಶೀರ್‌ ಕುರಿಯ ಒತ್ತಾಯಿಸಿದ್ದಾರೆ.

ಪೂರ್ಣ ಅಭಿವೃದ್ಧಿಯೇ ಆಗಿಲ್ಲ
ಬಹುಪಯೋಗಿಯಾಗಿರುವ ಈ ರಸ್ತೆಯನ್ನು ಗ್ರಾಮ ಸಡಕ್‌ ಯೋಜನೆಯಲ್ಲಿ ಸುಮಾರು 8 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ನೂರಾರು ಮಂದಿ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಅತಿ ಆವಶ್ಯವಾದ ಈ ರಸ್ತೆ ವರ್ಷ ದಿಂದ ವರ್ಷಕ್ಕೆ ಹದಗೆಡುತ್ತಾ ಬಂದಿತ್ತು. ಸುಮಾರು 5 ಬಾರಿ ಹೊಂಡ ಮುುಚ್ಚು ವ ಕಾಮಗಾರಿ ನಡೆಸಿದ್ದು ಬಿಟ್ಟರೆ ಪೂರ್ಣ ಅಭಿವೃದ್ಧಿಯನ್ನೇ ನಡೆಸಿಲ್ಲ. ಜನಪ್ರತಿನಿಧಿಗಳು, ಅಧಿಕಾರಿ ಈ ರಸ್ತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

Advertisement

ಶ್ರಮದಾನದಿಂದ ಹೊಂಡ ಮುಚ್ಚಿದ್ದರು
ಕಳೆದ ವರ್ಷ ತಾ.ಪಂ. ಅನುದಾನದಿಂದ ರಸ್ತೆಯ ಹೊಂಡ ಮುಚ್ಚುವ ಕಾರ್ಯ ನಡೆಸಲಾಗಿತ್ತು. ಆದರೆ ಈ ವರ್ಷ ಅದೇ ಸ್ಥಿತಿ ನಿರ್ಮಾಣವಾಗಿದೆ. ಹಲವು ಸಾರ್ವಜನಿಕರು, ವಾಹನ ಚಾಲಕರು ಸ್ವತಃ ತಾವೇ ಮುಂದೆ ಬಂದು ಶ್ರಮದಾನದ ಮೂಲಕ ಹೊಂಡ ಮುಚ್ಚುವ ಕಾರ್ಯ ನಡೆಸಿದ್ದಾರೆ. ಆದರೆ ಶಾಶ್ವತ ಕಾಮಗಾರಿಯಿಂದ ಮಾತ್ರ ರಸ್ತೆ ಸುಸ್ಥಿತಿಗೆ ಬರಲು ಸಾಧ್ಯ.

ಸಮಸ್ಯೆಯ ಅರಿವಾಗೋದ್ಯಾವಾಗ?
ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಲು ಸಾಧ್ಯವಿಲ್ಲದಷ್ಟು ಹದಗೆಟ್ಟಿದೆ. ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಸಾಗುತ್ತಿದ್ದರೂ ಅವರಿಗೂ ಜನರ ಸಮಸ್ಯೆ ಅರ್ಥವಾಗುತ್ತಿಲ್ಲ. ಅವರಿಗೆ ಸಮಸ್ಯೆಯ ಅರಿವು ಆಗೋದ್ಯಾವಾಗ? ನೂರಾರು ಮಂದಿ ರಸ್ತೆ ಅವ್ಯವಸ್ಥೆಯ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕು.
 - ನವೀನ್‌ ರೈ ಪಂಜಳ, ಸ್ಥಳೀಯ ನಿವಾಸಿ

ಮನವಿಗೂ ಸ್ಪಂದನೆ ಇಲ್ಲ
ರಸ್ತೆಯನ್ನು ಶಾಶ್ವತವಾಗಿ ಪ್ರಯೋಜನವಾಗುವಂತೆ ದುರಸ್ತಿಗೊಳಿಸಲು ಎರಡು ವರ್ಷಗಳಿಂದ ಸ್ಥಳೀಯರು ಜನಪ್ರತಿನಿಧಿಗಳಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಆದರೆ ಮನವಿಗೆ ಯಾವುದೇ ಇಲಾಖೆ ಅಥವಾ ಜನಪ್ರತಿನಿಧಿಗಳಿಂದ ಸ್ಪಂದನೆ ದೊರಕಿಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಈ ಬಾರಿಯ ಮಳೆಗಾಲದಲ್ಲಿ ರಸ್ತೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ಅಲ್ಲಲ್ಲಿ ಹೊಂಡ ಗುಂಡಿಗಳಾಗಿ ಸಂಚಾರಕ್ಕೆ ಅಯೋಗ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next