Advertisement

ಗಿಡಗಳ ಹುಚ್ಚು ಹಾಗೂ ತೋಟದ ಕನಸು

07:30 PM Aug 04, 2019 | mahesh |

ರಾಜ್ಯದ ವಿವಿಧ ಪ್ರದೇಶದ ತೋಟ ಸುತ್ತಾಡಿದರೆ ಕೃಷಿಯ ಅರಿವು ಸಾಧ್ಯ. ನೋಡಿದ ಸಸಿಗಳ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಸಂಗ್ರಹಿಸುತ್ತಾ ಹಸಿರು ಹುಚ್ಚು ನಮ್ಮೊಳಗೂ ಆವರಿಸುತ್ತದೆ. ನೆಡುವ, ಫ‌ಲ ಪಡೆಯುವ ಹಂಬಲ ಹೆಚ್ಚುತ್ತದೆ. ಬದುಕಿನ ಎಲ್ಲ ಒತ್ತಡ ಕಳಚಿಕೊಂಡು ತೋಟದಲ್ಲಿ ಮುಳುಗೇಳುವುದಕ್ಕಿಂತ ಪರಮಸುಖ ಬೇರೆ ಇದೆಯೇ?

Advertisement

ಜಲ ಸಂರಕ್ಷಣೆಯ ಕುರಿತು ಸ್ಲೆ„ಡ್‌ ಪ್ರದರ್ಶನ ನಡೆದಿತ್ತು. ಮಾತು ಮುಗಿಸಿದ ಬಳಿಕ, ಏನಾದರೂ ಪ್ರಶ್ನೆ ಕೇಳಬಹುದೆಂದು ಸಂಘಟಕರು ಸೂಚಿಸಿದರು. “ಭಾಷಣ ಚೆನ್ನಾಗಿದೆ, ನೀವು ಎಷ್ಟು ನೀರಿಂಗಿಸಿದ್ದೀರಿ?’ 70ರ ಹಿರಿಯರೊಬ್ಬರು ಪ್ರಶ್ನೆ ಎಸೆದರು. ಕದಂಬರು, ಹೊಯ್ಸಳರು, ಕಲ್ಯಾಣದ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಚಿತ್ರದುರ್ಗದ ನಾಯಕರು, ಆದಿಲ್‌ ಶಾಗಳ ಕೆರೆ ಕಾಯಕದ ಇತಿಹಾಸದ ವಿವರ ಹೇಳಿದ್ದೆ. ಶಾಸನ, ಅಧ್ಯಯನ ದಾಖಲೆ ಪ್ರದರ್ಶಿಸಿದ್ದೆ. ಆದರೆ ನೀರಿನ ಭಾಷಣ ಮಾಡುತ್ತಿದ್ದರೂ ಸ್ವತಃ ನೀರಿಂಗಿಸುವ ಕೆಲಸ ಮಾಡಿರಲಿಲ್ಲ! ನಾವು ಮಾಡದೇ ಬೇರೆಯವರಿಗೆ ಉಪದೇಶಿಸುವ ಕಷ್ಟ ಅರ್ಥವಾಯ್ತು. ಅದು 2001ನೇ ಇಸವಿ. ಮಾತಿನ ಉತ್ತರಕ್ಕಿಂತ ಮಾದರಿಗಳ ಮೂಲಕ ಮಾತಾಡುವ ಪ್ರಯತ್ನ ಆರಂಭವಾಯ್ತು. ಸೊಪ್ಪಿನ ಬೆಟ್ಟದಲ್ಲಿ ಎಕರೆಯಲ್ಲಿ 85- 90 ಲಕ್ಷ ಲೀಟರ್‌ ಮಳೆ ನೀರು ಬಿದ್ದು ಹಳ್ಳಕ್ಕೆ ಓಡುತ್ತಿತ್ತು. ಸುಮಾರು 14 ಎಕರೆ ಬೆಟ್ಟದೆತ್ತರದಲ್ಲಿ ನೀರಿಂಗಿಸುವ ಕೆಲಸ ಶುರುಮಾಡಿದೆ.

ಅನುಭವದ ಪಾಠ ಕಲಿತು…
ಪ್ರತಿ ವರ್ಷ ನಾಲ್ಕೈದು ಸಾವಿರ ರುಪಾಯಿ ವಿನಿಯೋಗಿಸುತ್ತಾ ಜಲ ಸಂರಕ್ಷಣೆ ಆರಂಭಿಸಿದೆ. ಇಂಗುಗುಂಡಿಯ ಹೊಸ ಮಣ್ಣಿಗೆ ಸಸಿ ಹಚ್ಚಿದೆ. ಗೇರು, ಮಾವು, ಮುರುಗಲು, ಉಪ್ಪಾಗೆ, ರಾಮಪತ್ರೆ, ಬಿದಿರು, ದಾಲಿcನ್ನಿ, ಅಪ್ಪೆಮಿಡಿ, ಎಕನಾಯಕ, ಹಲಸು ಮುಂತಾಗಿ ಸಸಿ ನಾಟಿಯಾಯ್ತು. ನೆಲ- ಜಲ ಸಂರಕ್ಷಣೆಯ ಕಾಯಕದಿಂದ ಸಸ್ಯಗಳು ಬೆಳೆಯತೊಡಗಿದವು. ಅಡುಗೆ, ಔಷಧ, ಹಣ್ಣುಹಂಪಲು, ಬಿದಿರು… ಹೀಗೆ, ವರ್ಷಕ್ಕೆ 365 ಸಸಿಗಳನ್ನು ಜೂನ್‌ ಆರಂಭದಲ್ಲಿ ನೆಡುವ ಆಸಕ್ತಿ ಉದಯಿಸಿತು. ಈ ಕಾಯಕಕ್ಕೆ ಈಗ 18 ವರ್ಷಗಳಾಗಿವೆ. ಗೆದ್ದಲು ಹಾವಳಿಯಿಂದ ಆರಂಭದಲ್ಲಿ ಕೆಲವು ಗಿಡಗಳು ಸತ್ತಿವೆ. ಗೆಲ್ಲುವ, ಸೋಲುವ ಅನುಭವದಿಂದ ಪಾಠ ಕಲಿಯುತ್ತ ನೆಡುವುದು ಮುಂದುವರಿದಿದೆ. ಕೃಷಿ ಪ್ರವಾಸದಲ್ಲಿ ರಾಜ್ಯದ ವಿವಿಧ ಸಾಧಕರ ತೋಟ ವೀಕ್ಷಿಸಿದಾಗ ಅರಿವು ವಿಸ್ತಾರವಾಯ್ತು.

ಕೃಷಿತಜ್ಞರ ಜತೆ ಒಡನಾಟ
ತೋಟಗಾರಿಕಾ ನರ್ಸರಿಗಳನ್ನು ಸುತ್ತಾಡಿದ ಬಳಿಕ ಹೊಸ ಹೊಸ ಸಸ್ಯಗಳ ಪರಿಚಯವಾಯ್ತು. ಮೂಡಬಿದ್ರೆಯ ಸೋನ್ಸ್‌ರ ಹಣ್ಣಿನ ತೋಟ, ರಿಪ್ಪನ್‌ಪೇಟೆಯ ಅನಂತಮೂರ್ತಿಯವರ ಹಲಸು-ಮಾವಿನ ತೋಟ, ವಿಶ್ವದ ಉಷ್ಣವಲಯದ ವಿವಿಧ ದೇಶದ 250ಕ್ಕೂ ಹೆಚ್ಚು ಹಣ್ಣಿನ ಸಸ್ಯ ಬೆಳೆಸಿದ ಅನಿಲ್‌ ಬಳಂಜರು, ಔಷಧ ಸಸ್ಯ ಬೆಳೆಸಿದ ಮೂಲಿಕಾತಜ್ಞ ವೆಂಕಟ್ರಾಮ ದೈತೋಟ, ಚೇರ್ಕಾಡಿಯಲ್ಲಿ ಔಷಧ ಸಸ್ಯ ಬೆಳೆಸಿದ ಎ.ಎಮ್‌.ರಾವ್‌, ಅನ್ನಪೂರ್ಣ ನರ್ಸರಿ, ಇಂದ್ರಪ್ರಸ್ಥದ ಎ. ಪಿ. ಚಂದ್ರಶೇಖರ್‌ ಮುಂತಾದ ನೂರಾರು ಜನರ ಒಡನಾಟ ಸಸ್ಯ ಪಾಠ ಕಲಿಸಿತು. ಹೊಸ ಹೊಸ ಸಸಿ ಹುಡುಕುವವರು, ಕಸಿ ಕಟ್ಟುವವರು, ಕೃಷಿ ಆಸಕ್ತರ ಸಂಪರ್ಕ ಬೆಳೆಸುವ ಪ್ರೀತಿ ಪೋಷಿಸಲು ಸಹಾಯಕ. ಮಾವಿನ ಮಿಡಿ ಪ್ರದರ್ಶನ, ಹಲಸಿನ ಮೇಳ, ಅಡವಿ ಅಡುಗೆ ಕಾರ್ಯಕ್ರಮ ಸಂಘಟಿಸಿದಾಗಂತೂ ಬಳಕೆಯ ಹಲವು ಮುಖಗಳು ಅರ್ಥವಾದವು.

ಗಿಡ ಬೆಳೆಸುವ ಖುಷಿ
ಸ್ವಂತ ಅನುಭವದ ಪ್ರಕಾರ 15- 20 ವರ್ಷಗಳ ಹಿಂದೆ ಸಸ್ಯ ಸಂಗ್ರಹ ಕಷ್ಟವಿತ್ತು. ಈಗ ಹೆಚ್ಚು ಅನುಕೂಲವಿದೆ. ತೋಟಗಾರಿಕಾ ನರ್ಸರಿಗಳ ಸ್ವರೂಪ ಬದಲಾಗಿದೆ. ಹೊಸ ಹೊಸ ಹಣ್ಣಿನ ಸಸ್ಯಗಳನ್ನು ಪರಿಚಯಿಸುವ ಪೈಪೋಟಿ ಕಾಣಿಸುತ್ತಿದೆ. ಕೇರಳ, ತುಳುನಾಡು ಮಾರ್ಗವಾಗಿ ವಿಶ್ವದ ಬೇರೆ ಬೇರೆ ದೇಶದ ಸಸ್ಯಗಳು ಕರ್ನಾಟಕಕ್ಕೆ ಬರುತ್ತಿವೆ. ಕಾಡು, ಅರಣ್ಯ ನರ್ಸರಿ ಸುತ್ತಾಟಗಳಲ್ಲಿ ನೂರಾರು ಜಾತಿಯ ಸಸ್ಯ ಸಂಗ್ರಹಿಸಬಹುದು. ಬೆಳೆ ಬರುತ್ತದೆಯೇ? ಮಾರುಕಟ್ಟೆ ಇದೆಯೇ? ಲಾಭ ಎಷ್ಟಾಗಬಹುದು? ಪ್ರಶ್ನೆಗಳನ್ನು ಬದಿಗಿಟ್ಟು ನೆಡುವ ಹುಚ್ಚು ಹಲವು ಯುವ ಕೃಷಿಕರಲ್ಲಿ ಆವರಿಸಿದೆ. ಖರ್ಚು ಮಾಡುವ ಹಣ, ಆದಾಯ ಹೋಲಿಸುವ ಮನಸ್ಥಿತಿಯಿಂದ ಮನಸ್ಸು ದೂರ ಬಂದು, ಬೆಳೆಸುವ ಖುಷಿ ಹಾಗೂ ಗಿಡಗಳ ಆರೈಕೆ ಹೊಸ ಲೋಕಕ್ಕೆ ಕರೆದೊಯ್ಯುತ್ತಿವೆ. ಒಂದು ಸಸಿ ನೆಟ್ಟು ಹಿಂದೆ 15-20 ವರ್ಷ ಫ‌ಲಕ್ಕೆ ಕಾಯುತ್ತಿದ್ದೆವು. ಬದಲಾದ ತಾಂತ್ರಿಕತೆ, ಸಸ್ಯ ಕೃಷಿ ಮಾಹಿತಿ ವಿನಿಮಯ ಅವಕಾಶದಿಂದ ಒಬ್ಬರಿಂದ ಒಬ್ಬರು ಕಲಿಯಲು ಸಾಧ್ಯವಾಗಿ ಇಂದು ಬೇಗ ಫ‌ಲ ದೊರೆಯುತ್ತಿದೆ. ಮಾಹಿತಿ ಸಂಪರ್ಕ ಸಾಧನಗಳು ಜಗತ್ತನ್ನು ಹತ್ತಿರ ಬೆಸೆದು ಹಸಿರು ಹಿತೈಷಿಯಾಗಿವೆ.

Advertisement

ಪ್ರಕೃತಿ ಮತ್ತು ಬೆರಗು
ತೋಟದ ಜಬೋಟಿಕಾಬಾ, ಮಿರ್ಯಾಕಲ್‌ ಫ್ರೂಟ್‌, ಅಭಿಯು, ಸಂತಾಲ್‌, ರಾಂಬೂಟಾನ್‌, ಮ್ಯಾಂಗೋಸ್ಟಿನ್‌, ಪೀ ನಟ್‌ ಬಟರ್‌ , ಸಿಂಗಾಪುರ ಚೆರ್ರಿ, ಫಿಂಗರ್‌ ಲೆಮೆನ್‌, ಮಾಪರಂಗ್‌, ಬನಾನ ಸಪೋಟ, ಬರಾಬ, ಪೇರಳೆ, ಕಿತ್ತಳೆ, ಮೂಸುಂಬೆ, ನೇರಳೆ, ಮಾವು, ಮುರುಗಲು, ಹಲಸು, ಚಿಕ್ಕು, ಬಾರೆ ಮುಂತಾಗಿ ನೂರಾರು ಸಸ್ಯ ಜಾತಿಗಳು ಒಟ್ಟಿಗೆ ತೋಟದಲ್ಲಿ ಬೆಳೆಸಿದಾಗ ಯೋಚನೆಯ ರೀತಿಯೂ ಬದಲಾಗುತ್ತವೆ. ಶಾಲೆ ಸೇರಿದ ಹೊಸ ಮಕ್ಕಳಂತೆ ವಿಶೇಷ ಕಲರವ ಕೇಳಿಸುತ್ತದೆ. ನಮ್ಮ ನೆಲದಲ್ಲಿ ಬೇರೆ ಬೇರೆ ದೇಶಗಳ ಸಸ್ಯಗಳು ಪರಸ್ಪರ ಅಕ್ಕಪಕ್ಕ ಒಂದಕ್ಕೊಂದು ಹೊಂದಿಕೊಂಡು ಬದುಕಿ ಬಾಳುವ ಭಾಷೆ ಬೆರಗಿನದು.
ಜ್ಞಾನ ಹಂಚುತ್ತ, ಪಡೆಯುತ್ತ ಅರಿವು ವಿಸ್ತಾರದಲ್ಲಿ ಮನಸ್ಸು ಅರಳುತ್ತದೆ. ನೆರಳು, ಬಿಸಿಲು, ಗಾಳಿ, ಜವುಗು, ಮಳೆ, ಮಣ್ಣಿಗೆ ಯೋಗ್ಯ ಆರೈಕೆಯಲ್ಲಿ ಹಸಿರು ಪಯಣ ಸಾಗುತ್ತದೆ. ವನವಾಸಿಯಂತೆ ದಿನದ ಕೆಲ ಹೊತ್ತು ಗಿಡಗಳ ಜೊತೆ ಕಳೆಯಬಹುದು. ಆರೋಗ್ಯ, ನೆಮ್ಮದಿಯಿಂದ ಕಾಡು ತೋಟದಲ್ಲಿ ಖುಷಿಯ ದಿವ್ಯ ದರ್ಶನ ಅನುಭವಿಸಬಹುದು.

ಸಸ್ಯಾಸಕ್ತರ ಸಂಗದಲ್ಲಿ…
ಮಾರುಕಟ್ಟೆಗೆ ಹೋಗಿ ಕೇಳಿದಷ್ಟು ಹಣ ತೆತ್ತು ಖರೀದಿಸುವ ಸಂದರ್ಭಕ್ಕೂ ನಾವೇ ಬೆಳೆಸಿದ ಫ‌ಲ ಕೊಯ್ಯುವುದಕ್ಕೂ ವ್ಯತ್ಯಾಸವಿದೆ. ಕೆಲವು ಫ‌ಲಗಳು ನಾವು ಬೆಳೆಸಿದರಷ್ಟೇ ತಿನ್ನಲು ಸಾಧ್ಯ. ಹುಳಿ ಅಮಟೆಯೋ, ಕಹಿ ಹಾಗಲವೋ ಫ‌ಲ ದೊರಕುವ ಸಂಭ್ರಮದಲ್ಲಿ ಸಿಹಿ ಸುಖವಿದೆ. ಸಸಿ ಬೆಳೆಸುವ ಹುಚ್ಚು ಶುರುವಾದರೆ ಸಸ್ಯಾಸಕ್ತ ಗೆಳೆಯರ ಬಳಗ ಹತ್ತಿರವಾಗುತ್ತದೆ. ಪರಸ್ಪರ ಎದುರಾದಾಗ ಮನುಷ್ಯ ವಿಚಾರಗಳಿಗಿಂತ ಮರದ ಸಂಗತಿಗಳು ಮುಖ್ಯವಾಗುತ್ತವೆ. ಕಾಡಿನ ಮರ, ಗಿಡಗಳು ಮಾತಾಡುತ್ತವೆಂಬ ಪರಿಕಲ್ಪನೆಯಲ್ಲಿ ಪರಿಸರ ಶಿಕ್ಷಣದ ಒಂದು ಆಟ ಆಡಿಸುತ್ತಿದ್ದೆ. ಜನಪದ, ಇತಿಹಾಸ, ವಿಜ್ಞಾನ, ಬಳಕೆ ವಿಜ್ಞಾನ ವಿವರಿಸುತ್ತ ಮರಗಳ ಕಥೆ ಹೇಳುತ್ತ ಸಸ್ಯ ಪರಿಚಯಿಸುವ ವಿಶೇಷ ಮಾರ್ಗವಿದು. ಮರದ ಕಥೆ ಆಲಿಸಿದ ಬಳಿಕ ಪುಟಾಣಿಗಳು ಅವು ಮಾತಾಡುವ ಭಾಷೆ ಯಾವುದೆಂದು ಮುಗªವಾಗಿ ಕೇಳಿದ್ದಾರೆ. ಯಾವತ್ತೂ ಸಸ್ಯ ಭಾಷೆ ನೆಟ್ಟವರಿಗೆ ಆಪ್ತವಾಗಿ ಅರ್ಥವಾಗುತ್ತದೆ. ಚಿಗುರು, ಮೊಗ್ಗು, ಹೂ, ಗಂಧ, ಬಣ್ಣ, ಸ್ವಾದಗಳಲ್ಲಿ ಸಂಭ್ರಮಿಸುತ್ತಾರೆ. ಹೊಸ ಹೊಸ ಪುಸ್ತಕ ಓದುವಂತೆ ಗಿಡಗಳ ಒಡನಾಟದಲ್ಲಿ ಕಲಿಯುವುದು ಬಹಳವಿದೆ.

 -ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next