Advertisement

ನಿರ್ವಹಣೆಯಿಲ್ಲದೆ ಸೊರಗಿದ ಗಿಡ

05:39 AM Mar 18, 2019 | Team Udayavani |

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಡಿವೈಡರ್‌ಗಳಲ್ಲಿ ಒಟ್ಟಾರೆಯಾಗಿ ಸುಮಾರು 29 ಸಾವಿರದಷ್ಟು ಗಿಡಗಳನ್ನು ನೆಟ್ಟಿದ್ದು, ಒಂದು ಗಿಡದ ನಿರ್ವಹಣೆಗೆ ಸುಮಾರು 39 ರೂ. ಖರ್ಚು ದಾಖಲೆಗಳಲ್ಲಿ  ತೋರಿಸಲಾಗುತ್ತಿದೆ. ಆದರೆ, ಸದ್ಯ ನಗರದ ಅನೇಕ ಕಡೆಗಳಲ್ಲಿನ ಡಿವೈಡರ್‌ ಗಳಲ್ಲಿ ನೆಟ್ಟಂತಹ ಗಿಡಗಳು ಸೊರಗಿ ಹೋಗಿದ್ದು, ಅದಕ್ಕೆ ನೀರೆರೆಯುವರಾರು ಎಂಬ ಪ್ರಶ್ನೆ ಉದ್ಭವಿಸಿದೆ.

Advertisement

ಪರಿಸರ ಉಳಿಸಿ, ಬೆಳೆಸಿ ಎಂಬುವುದಾಗಿ ಮಹಾನಗರ ಪಾಲಿಕೆ ಹೇಳುತ್ತಿದ್ದು, ವರ್ಷದಲ್ಲಿ ಒಂದು ದಿನ ವನಮಹೋತ್ಸವ ಆಚರಿಸಿ, ಪರಿಸರ ಸಂರಕ್ಷಣೆಯ ಮಹತ್ವ ಪಸರಿಸುತ್ತಿದೆ. ಆದರೆ, ಬಳಿಕ ನೆಟ್ಟ ಗಿಡಗಳನ್ನು ಸರಿಯಾದ ರೀತಿಯಲ್ಲಿ ಪೋಷಿಸುವ ಗೋಜಿಗೆ ಹೋಗುತ್ತಿಲ್ಲ. ಪಾಲಿಕೆಯ ಮೂಲಗಳ ಪ್ರಕಾರ ನಗರದಲ್ಲಿ ಒಂದು ಟ್ಯಾಂಕರ್‌ ಮುಖೇನ ಎರಡು ದಿನಕ್ಕೊಮ್ಮೆ ಡಿವೈಡರ್‌ಗಳಲ್ಲಿನ ಗಿಡಗಳಿಗೆ ನೀರು ಹಾಕಲಾಗುತ್ತಿತ್ತು. ಆದರೆ ಕೆಲವು ದಿನಗಳಿಂದ ಟ್ಯಾಂಕರ್‌ ಚಾಲಕ ಅನ್ಯ ಕೆಲಸದ ನಿಮಿತ್ತ ತೆರಳಿದ್ದು, ಈ ಕಾರಣದಿಂದ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಬಿಸಿಲಿನ ತಾಪಕ್ಕೆ ಗಿಡಗಳು ಒಣಗುತ್ತಿದೆ.

ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ-ಕುಂಟಿಕಾನ ದೇರೆಬೈಲು ಡಿವೈಡರ್‌, ಸರ್ಕ್ನೂಟ್‌ ಹೌಸ್‌ನಿಂದ-ಕೆಪಿಟಿ ಮರಕಡ ಡಿವೈಡರ್‌ವರೆಗೆ, ಕ್ಲಾಕ್‌ಟವರ್‌ ನಿಂದ-ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ವೃತ್ತ, ಎ.ಬಿ. ಶೆಟ್ಟಿ ವೃತ್ತದಿಂದ-ಪಾಂಡೇಶ್ವರ, ಲೇಡಿಹಿಲ್‌ ಸರ್ಕಲ್‌ ರಸ್ತೆಯಿಂದ-ಉರ್ವ ಮಾರುಕಟ್ಟೆ ರಸ್ತೆ ವಿಭಾಜಕಗಳಲ್ಲಿ ಪಾಲಿಕೆಯು ಗಿಡಗಳನ್ನು ನೆಟ್ಟಿದೆ.

ಪಾಲಿಕೆಯು ನೆಟ್ಟಂತಹ ಸಾವಿರಾರು ಗಿಡಗಳ ಪೈಕಿ ಹೆಚ್ಚಿನ ಗಿಡಗಳು ನೀರಿನ ಕೊರತೆ ಅನುಭವಿಸುತ್ತಿದೆ. ಕೆಲವು ಗಿಡಗಳು ಸತ್ತು ಹೋಗಿವೆ. ಅದರಲ್ಲಿಯೂ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ-ಕುಂಟಿಕಾನ ದೇರೆಬೈಲು ಡಿವೈಡರ್‌ಗಳಲ್ಲಿ ನೆಟ್ಟಂತಹ ಹೆಚ್ಚಿನ ಗಿಡಗಳು ನೀರಿಲ್ಲದೆ, ಒಣಗಿದೆ. ನಗರದ ಟೌನ್‌ಹಾಲ್‌ ಮುಂಭಾಗ ಕ್ಲಾಕ್‌ಟವರ್‌ ವೃತದವರೆಗೆ ನೆಟ್ಟ ಗಿಡಗಳಲ್ಲಿ ಕೆಲವೊಂದು ಸಾವನ್ನಪ್ಪಿವೆ. ಸತ್ತಂತಹ ಗಿಡಗಳನ್ನು ತೆಗೆದು ಆ ಪ್ರದೇಶದಲ್ಲಿ ಬೇರೆ ಗಿಡಗಳನ್ನು ನೆಡಲು ಪಾಲಿಕೆ ಆಸಕ್ತಿ ತೋರುತ್ತಿಲ್ಲ. ಒಂದು ಗಿಡದಿಂದ ಮತ್ತೂಂದು ಗಿಡಗಳ ನಡುವೆ ಸಮಾನ ಅಂತರವಿಲ್ಲ. ಕೆಲವೆಡೆ ಗಿಡಗಳ ನಡುವೆ ಹುಲ್ಲು ಬೆಳೆದಿದ್ದು, ಸಮರ್ಪಕ ನಿರ್ವಹಣೆಯಿಲ್ಲದೆ ಗಿಡಗಳು ಸೊರಗುತ್ತಿದೆ.

ಒಂದು ಗಿಡ ನೆಡಲು 22 ರೂ. ಖರ್ಚು
ಪಾಲಿಕೆ ವತಿಯಿಂದ ನಗರದ ರಸ್ತೆ ವಿಭಾಜಕಗಳಲ್ಲಿ ಕರವೀರ, ಬೋಲನ್‌ ವಿಲ್ಲ, ಅರೆಲಿಯಾ ಗಿಡಗಳನ್ನು ನೆಡಲಾಗಿದೆ. ಒಂದು ಗಿಡ ನೆಡಲು ಸುಮಾರು 22 ರೂ. ಖರ್ಚು ಮಾಡುತ್ತಿದೆ. ಇಷ್ಟೊಂದು ಖರ್ಚು ಮಾಡಿ ಗಿಡ್ಡ ನೆಟ್ಟರೂ ಸೂಕ್ತ ನಿರ್ವಹಣೆ ಮಾಡಿದಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

Advertisement

ಜಂಕ್ಷನ್‌ ಬಾಕ್ಸ್‌  ಕಾಟ
ಪಾಲಿಕೆಯು ಡಿವೈಡರ್‌ಗಳ ಮಧ್ಯೆ ಗಿಡಗಳನ್ನು ನೆಟ್ಟಿದ್ದರೆ ಅಲ್ಲೇ ಪಕ್ಕದಲ್ಲಿಯೇ ಬೀದಿ ದೀಪಗಳ ನಿರ್ವಹಣೆಯ ಜಂಕ್ಷನ್‌ ಬಾಕ್ಸ್‌ಗಳಿವೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಡಿವೈಡರ್‌ ನಲ್ಲಿರುವ ಕೆಲವೊಂದು ಜಂಕ್ಷನ್‌ ಬಾಕ್ಸ್‌ಗಳ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಅಪಾಯವನ್ನು ಸೂಚಿಸುತ್ತಿದೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next