ಬೀದರ: ಶಾಲೆಗಳಲ್ಲಿ ಖಾಲಿ ಇರುವ ಸ್ಥಳಗಳಲ್ಲಿ, ಕಾಂಪೌಂಡ್‌ಗಳ ಸುತ್ತಮುತ್ತಲಿನ ಜಾಗಗಳಲ್ಲಿ ಶಾಲೆಯಲ್ಲಿ ಓದುವ ಮಕ್ಕಳ ಹೆಸರಲ್ಲಿ ಸಸಿ ನಾಟಿ ಮಾಡಿ ಅವುಗಳ ಪಾಲನೆ ಪೋಷಣೆ ಜವಾಬ್ದಾರಿಗಳನ್ನು ಮಕ್ಕಳಿಗೆ ನೀಡಿದರೆ ಪರಿಸರ ಸಂರಕ್ಷಿಸಬಹುದು ಎಂದು ಶಾಸಕ ಬಂಡೆಪ್ಪ
ಖಾಶೆಂಪುರ್ ಹೇಳಿದರು.
ಬೀದರ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ (ಪಿ) ಗ್ರಾಮದ ಪಾರ್ಮ್ ಹೌಸ್‌ನಲ್ಲಿ ಪ್ರಾದೇಶಿಕ ಅರಣ್ಯ ವಲಯ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ನಡೆದ ವನ ಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಟ್ಟು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಗಿಡಮರಗಳನ್ನು ಬೆಳಸುವ ಉತ್ಸಾಹ, ಆಸಕ್ತಿ ಇರುತ್ತದೆ. ಅವರಿಗೆ ವಿದ್ಯಾಭ್ಯಾಸದ ಜೊತೆಗೆ ಪರಿಸರ ಉಳಿಸಿ ಬೆಳೆಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ತಿಳಿಸಬೇಕು. ಮಕ್ಕಳು ತಾವು ನೆಟ್ಟ ಸಸಿಗಳನ್ನು ತಾವೇ ಬೆಳೆಸುವ ಕೆಲಸ ಮಾಡಿದ್ದೇ ಆದರೆ ಅದಕ್ಕಿಂತ ಉತ್ತಮ ಕೆಲಸ ಇನ್ನೊಂದು ಇಲ್ಲ. ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.
ಬರಡು ಭೂಮಿ, ಬಂಜರು ಭೂಮಿಗಳಲ್ಲಿ ಭೂಮಿಯ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅರಣ್ಯ ಇಲಾಖೆಯವರು ಗಿಡಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ. ಅನೇಕ ಕಡೆಗಳಲ್ಲಿ ಸಾವಿರಾರು ಎಕರೆ ಬಂಜರು ಭೂಮಿ, ಬರಡು ಭೂಮಿ ಇದೆ. ಅಂತಹ ಸ್ಥಳಗಳನ್ನು ಗುರುತಿಸಿ ಅಲ್ಲಿ ಗಿಡಮರಗಳನ್ನು ಬೆಳಸುವ ಕೆಲಸ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿ ಪ್ರವೀಣ ಮೋರೆ, ರೋಟರಿ ಕ್ಲಬ್ ಅಧ್ಯಕ್ಷ ಅವಶೆಟ್ಟಿ ಪಾಟೀಲ, ಇಂಜಿನಿಯರ್ ರವಿ ಮೂಲಗೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಇನ್ನರ್ ವ್ಹೀಲ್ ಕ್ಲಬ್‌ನ ಮಂಜುಳಾ ಮೂಲಗೆ ಸೇರಿದಂತೆ ಅನೇಕರಿದ್ದರು.