Advertisement
ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರಬೇಕಾದರೆ ಅಲ್ಲಿ ಅಗತ್ಯ ಸೌಲಭ್ಯಗಳು ಇರಬೇಕು. ಈ ನಿಟ್ಟಿನಲ್ಲಿ ಶಾಲೆ ಶಿಕ್ಷಕ ಮಂಡಳಿ, ಶಾಲಾ ಸುಧಾರಣಾ ಸಮಿತಿ ಪ್ರಯತ್ನ ಮಾಡುತ್ತಿದ್ದರೂ ಅದು ಸಾಕಾಗುತ್ತಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಸಹಕಾರ ಬಹಳ ಮುಖ್ಯ ಎಂಬ ಅಭಿಪ್ರಾಯ ಎಲ್ಲರಲ್ಲಿದೆ. ಮಕ್ಕಳ, ಶಿಕ್ಷಕರ ಹಾಗೂ ಪಾಲಕರ ಮನವಿಗೆ ಸ್ಪಂದಿಸಿರುವ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಕ್ಷೇತ್ರದಲ್ಲಿ 3 ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.
Related Articles
Advertisement
ರಾಯಬಾಗ ತಾಲೂಕಿನ ನಿಪನಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ 8ರಿಂದ 10ರವರೆಗೆ ತರಗತಿಗಳಿದ್ದು ಒಟ್ಟು 292 ವಿದ್ಯಾರ್ಥಿಗಳಿದ್ದಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಕೊಠಡಿಗಳಿಲ್ಲ. ಹೀಗಾಗಿ ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇದಲ್ಲದೇ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲು ಸಹ ಉದ್ದೇಶಿಸಲಾಗಿದೆ. ಪ್ರೌಢಶಾಲೆ ಶಿಕ್ಷಕ ಮಂಡಳಿ ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಶಾಸಕರು ಅಂದಾಜು 50.50 ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಇದರಲ್ಲಿ ಎರಡು ಕೊಠಡಿಗಳು, ಕಾಂಪೌಂಡ್ ನಿರ್ಮಾಣ, ಆಟದ ಮೈದಾನದ ಸಮತಟ್ಟು, ಸೈಕಲ್ ಸ್ಟ್ಯಾಡ್ ಹಾಗೂ ಪೇವರ್ಸ್ ಅಳವಡಿಕೆ ಸೇರಿವೆ.
ಕರ್ನಾಟಕ ಪಬ್ಲಿಕ್ ಸ್ಕೂಲ್: 40.20 ಲಕ್ಷ
ರಾಯಬಾಗ ಪಟ್ಟದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ 1ರಿಂದ 12ನೇ ತರಗತಿ ಹೊಂದಿದ್ದು 749 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲಿ ಎಲ್ಲ ಸೌಲಭ್ಯಗಳು ಇಲ್ಲ. ಸರ್ಕಾರಿ ಶಾಲೆ ಸಮಸ್ಯೆಗಳ ಕೊರಗಿನಿಂದ ಹೊರಬರಬೇಕು. ಇದು ಉಳಿದ ಶಾಲೆಗಳಿಗೆ ಮಾದರಿಯಾಗಬೇಕು ಎಂದು ಇಲ್ಲಿನ ಶಿಕ್ಷಕ ವರ್ಗ ಪ್ರಯತ್ನ ಮಾಡುತ್ತಲೇ ಇದೆ. ಮುಖ್ಯವಾಗಿ ಶಾಲೆಯಲ್ಲಿ ಶೌಚಾಲಯ, ಕೊಠಡಿಗಳು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ. 1ರಿಂದ 12ನೇ ತರಗತಿವರೆಗಿನ ಈ ಶಾಲೆಯಲ್ಲಿ ಬಾಲಕ ಹಾಗೂ ಬಾಲಕಿಯರು ಓದುತ್ತಿದ್ದಾರೆ. ಹೀಗಾಗಿ ಶಾಲೆಗೆ ಶೌಚಾಲಯದ ಅಗತ್ಯತೆ ಬಹಳ ಇದೆ. ಇದಲ್ಲದೇ ಎರಡು ಕೊಠಡಿಗಳು ಬೇಕು ಎಂದು ಶಿಕ್ಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಆಟದ ಮೈದಾನದ ಸಮತಟ್ಟು, ಸ್ಮಾರ್ಟ್ ಕ್ಲಾಸ್, ಸೈಕಲ್ ಸ್ಟ್ಯಾಡ್ ಬೇಡಿಕೆ ಸಹ ಇದೆ.
ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈಗ ಗ್ರಾಪಂ ಬಂದಿರುವುದರಿಂದ ಎಲ್ಲವೂ ವಿಳಂಬವಾಗಿದೆ. ಚುನಾವಣೆ ಮುಗಿದ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಣ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು. ಹಣ ಬಂದ ಕೂಡಲೇ ಅಗತ್ಯ ಕಾಮಗಾರಿಗೆ ಕ್ರಮ ವಹಿಸಲಾಗುತ್ತದೆ
ದುರ್ಯೋಧನ ಐಹೊಳೆ, ಶಾಸಕರು, ರಾಯಬಾಗ
ಕೇಶವ ಆದಿ