ಹುಣಸೂರು: ಮೈಸೂರು, ಕಲಬುರಗಿ, ಬೆಳಗಾವಿ, ಬೆಂಗಳೂರು ಸೇರಿದಂತೆ ನಾಲ್ಕು ವಿಭಾಗದಲ್ಲಿ ಸಾಲ ಮೇಳ ನಡೆಸಿ ರೈತರಿಗೆ ಅನುಕೂಲ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಾಲ ವಿತರಣೆಯಲ್ಲಿ ಲೋಪ ಕಂಡುಬಂದಲ್ಲಿ ಆಯಾ ವ್ಯಾಪ್ತಿಯ ಜಂಟಿ ನಿಬಂಧಕರನ್ನೇ ಹೊಣೆ ಮಾಡಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ತಾಲೂಕಿನ ಆಶಾಕಾರ್ಯಕರ್ತರಿಗೆ 3 ಸಾವಿರ ರೂ, ಪ್ರೋತ್ಸಾಹ ಧನದ ಚೆಕ್ ಹಾಗೂ ಎಂ.ಡಿ.ಸಿ.ಸಿ ಬ್ಯಾಂಕ್‌ನಿಂದ ರೈತರಿಗೆ ಚೆಕ್ ವಿತರಿಸಿ ಮಾತನಾಡಿ, ಸಿಎಂ ಸೂಚನೆಯಂತೆ ರಾಜ್ಯದ 42,532 ಮಂದಿ ಆಶಾ ಕಾರ್ಯಕರ್ತರಿಗೆ ಸಹಕಾರ ಇಲಾಖೆ ಮೂಲಕ ಪ್ರೋತ್ಸಾಹ ಧನ ವಿತರಿಸಿರುವ ಹೆಮ್ಮೆ ತಮಗಿದೆ. ಗುಲ್ಬರ್ಗದಲ್ಲಿ ಇನ್ನು 374 ಮಂದಿಗೆ ಪ್ರೋತ್ಸಾಹಧನ ವಿತರಿಸಿದರೆ ಇಡೀ ರಾಜ್ಯದ ಆಶಾ ಕಾರ್ಯಕರ್ತರಿಗೆ ವಿತರಿಸಿದಂತಾಗಲಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಿರುವ ಎಲ್ಲಾ ಡಿ.ಸಿ.ಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟಗಳನ್ನು ಅಭಿನಂದಿಸಿದರು. ಆಶಾ ಕಾರ್ಯಕರ್ತರ ಸಹಕಾರ ಬ್ಯಾಂಕ್ ರಚಿಸಿ, ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಸಂಘಗಳಿಗೆ ಸಾಲ ನೀಡಿ: ಡಿ.ಸಿ.ಸಿ ಬ್ಯಾಂಕ್ ಗಳು 119 ಸಕ್ಕರೆ ಕಾರ್ಖಾನೆಗಳಿಗೆ 5529 ಕೋಟಿ ರೂ. ನೀಡಿದೆ. ಆದರೆ, ವಸೂಲಾತಿ ಆಗಿಲ್ಲ. ಅದೇ ರೈತರು-ಸ್ವಸಹಾಯ ಸಂಘ ಗಳಿಗೆ ಸಾಲದ ಹಣ ಕೊಟ್ಟರೆ, ಅವರಿಂದ ಶೇ.100ರಷ್ಟು ಹಣ ಮರುಪಾವತಿಯಾಗುತ್ತದೆ. ಹೀಗಾಗಿ ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಇತರ ಕ್ಷೇತ್ರಗಳಿಗಾಗಿ ಸಾಲ ಕೊಟ್ಟರೆ ಸಾಲ ಮರುಪಾವತಿಯಾಗುವುದಲ್ಲದೆ, ಬ್ಯಾಂಕುಗಳು ಅಭಿವೃದ್ಧಿಯಾಗಲಿದೆ ಎಂದು ಸಲಹೆ ನೀಡಿದರು.
20 ಸಾವಿರ ಕೋಟಿ ಸಾಲದ ಗುರಿ: ಕಳೆದ ವರ್ಷ 13,500 ಕೋಟಿ, ಪ್ರಸಕ್ತ ಸಾಲಿನಲ್ಲಿ 14,500 ಕೋಟಿ ರೂ.ಸಾಲ ನೀಡಿದ್ದು, ಮುಂದಿನ ವರ್ಷ ಹೊಸ ರೈತರನ್ನು ಗುರುತಿಸಿ ಸಾಲ ನೀಡುವ ಉದ್ದೇಶದಿಂದ 20 ಸಾವಿರ ಕೋಟಿ ರೂ ಸಾಲ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಇಚ್ಛಾಶಕ್ತಿಯಿಂದ ಕಾರ್ಯಕ್ರಮ ಯಶಸ್ವಿ: ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗುತ್ತದೆ ಎಂಬುದಕ್ಕೆ ಸಚಿವ ಸೋಮಶೇಖರ್‌ಅವರೇ ಸಾಕ್ಷಿ. ಆಶಾ ಮಾದರಿಯಲ್ಲಿ ಆರೋಗ್ಯ, ಅಂಗನವಾಡಿ ಕಾರ್ಯಕರ್ತರಿಗೂ ಪ್ರೋತ್ಸಾಹಧನ ವಿತರಿಸಬೇಕು ಎಂದು ಆಶಿಸಿ. ತಾಲೂಕಿನ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಬೇಕಿದೆ. ನಗರದ ಒಳ ಚರಂಡಿ ವ್ಯವಸ್ಥೆಗೆ ಅನುದಾನ ಬಿಡುಗಡೆಯಾಗಬೇಕು. ಮನೆಗಳು ಮಂಜೂರು ಮಾಡಬೇಕು. ತಾಲೂಕು ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಕೆಡಿಪಿ ಸಭೆ ನಡೆಸುವ ಮೂಲಕ ಹೊಸತನ ಮೆರೆಯಬೇಕು. ದಸರಾದಿಂದಾಗಿ ಮೂರು ತಿಂಗಳ ಕಾಲ ಯಾವುದೇ ಕೆಲಸ ನಡೆಯಲ್ಲ. ಹೀಗಾಗಿ ಪ್ರತ್ಯೇಕ ದಸರಾ ಪ್ರಾಧಿಕಾರ ರಚಿಸಬೇಕು ಎಂದು ಮನವಿ ಮಾಡಿದರು. ಸಂಸದ ಪ್ರತಾಪ್ ಸಿಂಹ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ. ಹರೀಶ್‌ಗೌಡ ಮಾತನಾಡಿದರು. ಜಿಲ್ಲಾಧಿಕಾರಿ ಶರತ್, ಎ.ಸಿ.ವೀಣಾ, ತಹಶೀಲ್ದಾರ್ ಬಸವರಾಜ್, ಎಪಿಎಂಸಿ ಅಧ್ಯಕ್ಷ ಸುಭಾಷ್, ಮೈಮುಲ್ ನಿರ್ದೇಶಕರಾದ ಕುಮಾರ್,ನಾಗಪ್ರಸಾದ್, ಡಿಸಿಸಿ ಬ್ಯಾಂಕ್ ಎಂ.ಡಿ. ಹಿರಣ್ಣಯ್ಯ ಹಾಜರಿದ್ದರು.