Advertisement

ಎಲ್ಲರ ಸಹಕಾರದಿಂದ ಯೋಜನೆಗಳು ಸಾಕಾರ

08:50 PM Jan 31, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಬೀಳ್ಕೊಡುಗೆ ಹಾಗೂ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಎಂ.ಆರ್‌.ರವಿ ಅವರನ್ನು ಸ್ವಾಗತಿಸಲಾಯಿತು. ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಬಿ.ಕಾವೇರಿ, ಚಾಮರಾಜನಗರಕ್ಕೆ ಬರುವ ಮುನ್ನ ಜಿಲ್ಲೆಯ ಬಗ್ಗೆ ಕೇಳಿದ್ದ ಎಲ್ಲಾ ನಕಾರಾತ್ಮಕ ಅಂಶಗಳು ಸುಳ್ಳು ಎಂಬುದನ್ನು ಇಲ್ಲಿ ಕೆಲಸ ನಿರ್ವಹಿದ ಅವಧಿಯಲ್ಲಿ ನಾನು ಮನಗಂಡಿದ್ದೇನೆ. ಇಲ್ಲಿನ ಜನರು ತೋರಿದ ಪ್ರೀತಿ, ಇದು ನನ್ನ ಜಿಲ್ಲೆ ಎಂಬ ಬಾಂಧವ್ಯ ಬೆಳೆಯುವಂತೆ ಮಾಡಿದೆ. ಇದಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದರು.

ಎಲ್ಲರಿಗೂ ಆಭಾರಿ: ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಇಲ್ಲಿನ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬ ಅಧಿಕಾರಿಯ ನಿರಂತರ ಪರಿಶ್ರಮ ಹಾಗೂ ಸಮನ್ವಯ ಕಾರಣವಾಗಿದೆ. ಅಲ್ಲದೆ, ನನ್ನ ಆಪ್ತ ಸಹಾಯಕರ ತಂಡ ಸದಾ ಕಾಲ ನನ್ನ ಎಲ್ಲಾ ಕೆಲಸಗಳಲ್ಲೂ, ಸಮಯದ ಗಡಿ ಹಾಕಿಕೊಳ್ಳದೇ ಕಾರ್ಯನಿರ್ವಹಿಸಿದ್ದಾರೆ. ಇದಕ್ಕಾಗಿ ನಾನು ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಭಾವುಕರಾದರು.

ಅಭಿವೃದ್ಧಿಗೆ ಆದ್ಯತೆ ನೀಡಿ: ಪ್ರತಿಯೊಬ್ಬ ಅಧಿಕಾರಿಯೂ, ಸರ್ಕಾರದ ಮುಖಪುಟವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರದ ಅಹಂ ತೋರದೇ, ಸಾಮಾನ್ಯ ಜನರನ್ನೂ ಪ್ರೀತಿಯಿಂದ ಕಾಣುವ, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಯಾವುದೇ ಒತ್ತಡಗಳಿಗೆ ಮಣಿಯದೇ, ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಾವು ಪಾರದರ್ಶಕವಾಗಿ ಕೆಲಸ ಮಾಡಿದೇ ಆದಲ್ಲಿ, ಎಂಥಹ ಸನ್ನಿವೇಶ ಎದುರಿಸಲು ಶಕ್ತರಾಗುತ್ತೇವೆ ಎಂದು ಕಿವಿಮಾತು ಹೇಳಿದರು.

ಎಲ್ಲಾ ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿ ಯೋಜನೆ ಕಾರ್ಯಗಳಿಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದ್ದಾರೆ. ಅದರಂತೆ ಇಲ್ಲಿನ ಸಂಘ-ಸಂಸ್ಥೆಗಳೂ ಸಂಪೂರ್ಣ ಸಹಕಾರ ನೀಡಿದ್ದಾರೆ. ಜಿಲ್ಲೆ ಶೈಕ್ಷಣಿಕವಾಗಿ ಮತ್ತಷ್ಟು ಉತ್ತುಂಗಕ್ಕೇರಬೇಕು. ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕು ಎಂಬುದೇ ನನ್ನ ಆಶಯ ಎಂದು ತಿಳಿಸಿದರು.

Advertisement

ಕಾವೇರಿ ದಕ್ಷ, ಪ್ರಾಮಾಣಿಕ ಅಧಿಕಾರಿ: ಶಾಸಕ ಎನ್‌.ಮಹೇಶ್‌ ಮಾತನಾಡಿ, ಬಿ.ಬಿ.ಕಾವೇರಿ ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿ. ನೆರೆ ಪ್ರವಾಹ ಹಾಗೂ ಸುಳ್ವಾಡಿ ವಿಷಪ್ರಸಾದ ಪ್ರಕರಣ ವೇಳೆ ಅವರು ತೋರಿದ ಕಾರ್ಯಕ್ಷಮತೆ ನಿಜಕ್ಕೂ ಮಾದರಿ. ನೆರೆ ಪ್ರವಾಹ ಸಮಯದಲ್ಲಿಯಾರೂ ಬೆರಳು ತೋರಿಸದ ರೀತಿಯಲ್ಲಿ ಕಾರ್ಯ ಮಾಡಿದ್ದರು. ಅಂತೆಯೇ ಸುಳ್ವಾಡಿ ಪ್ರಕರಣದಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ಮಾಡಿ ಕೊಡುವಲ್ಲಿ ಹಗಲಿರುಳೆನ್ನದೇ ಶ್ರಮಿಸಿದ್ದರು ಎಂದು ಪ್ರಶಂಸಿದರು.

ಜನಪರ ಕೆಲಸದಿಂದ ಜನಪ್ರಿಯ: ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಮಾತನಾಡಿ, ಜನಪರ ಕೆಲಸ ಮಾಡಿದವರು ಜನಪ್ರಿಯರಾಗುತ್ತಾರೆ ಎನ್ನುವುದಕ್ಕೆ ಬಿ.ಬಿ.ಕಾವೇರಿ ಅವರು ಪ್ರಾಶಸ್ತ ನಿದರ್ಶನ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತೆ ಅವರು ತಮ್ಮ ಕೆಲಸಗಳ ಮೂಲಕವೇ ಜನರನ್ನು ತಲುಪಿದ್ದಾರೆ. ಪ್ರತಿಯೊಬ್ಬರ ನೋವಿಗೆ ಸ್ಪಂದಿಸುವ ಗುಣ ಈ ಮಣ್ಣಿನಲ್ಲಿದೆ. ಒಬ ಅಧಿಕಾರಿ ಉತ್ತಮ ಕೆಲಸ ಮಾಡಿದರೆ, ಎಷ್ಟರ ಮಟ್ಟಿಗೆ ಜನಪ್ರೀತಿ ಗಳಿಸಬಹುದು ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿ. ನನಗೂ ಈ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಅದೇರೀತಿ ಸಾಕಷ್ಟು ಕನಸುಗಳ ಜತೆ ನಾನು ಇಲ್ಲಿಗೆ ಬಂದಿದ್ದೇನೆ. ಅದಕ್ಕೆ ರೆಕ್ಕೆ ಮೂಡಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ತಮ್ಮ ವಿಚಾರ, ನಿಲುವುಗಳಲ್ಲಿ ಸ್ಪಷ್ಟತೆ: ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಮಾತನಾಡಿ, ಬಿ.ಬಿ.ಕಾವೇರಿ ಅವರು ತಮ್ಮ ವಿಚಾರ ಹಾಗೂ ನಿಲುವುಗಳಲ್ಲಿ ಸದಾ ಸ್ಪಷ್ಟತೆಯನ್ನು ಹೊಂದಿದ್ದರು. ಎಂಥಹದೇ ವಿಷಯ ಹಾಗೂ ಸನ್ನಿವೇಶಗಳನ್ನು ತಾಳ್ಮೆಯಿಂದ ಪರಾಮರ್ಶಿಸುವ ಗುಣ ಅವರಲ್ಲಿತ್ತು. ಸಾಮಾನ್ಯರ ಜನರ ಸಬಲೀಕರಣವೇ ಅವರ ಧ್ಯೇಯವಾಗಿತ್ತು. ಅದರಂತೆ ಅವರು ಕಾರ್ಯನಿರ್ವಹಿಸಿದರು ಎಂದರು.

ಈ ವೇಳೆ ವಿವಿಧ ಇಲಾಖೆಗಳು ಹಾಗೂ ಸಂಘ- ಸಂಸ್ಥೆಗಳ ವತಿಯಿಂದ ಬಿ.ಬಿ.ಕಾವೇರಿ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ನೂತನ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಅವರಿಗೂ ಹೂ ಗುತ್ಛ ನೀಡಿ ಸ್ವಾಗತ ಕೋರಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಜಿಪಂ ಸಿಇಒ ಬಿ.ಎಚ್‌. ನಾರಾಯಣರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖೀತಾ. ಎಂ. ಚಿನ್ನಸ್ವಾಮಿ ಉಪಸ್ಥಿತರಿದ್ದರು.

ಬಿ.ಬಿ.ಕಾವೇರಿ ಅವರು ದಕ್ಷ ನಾಯಕತ್ವಕ್ಕೆ ಉತ್ತಮ ಉದಾಹರಣೆ. ಎಲ್ಲಾ ಸನ್ನಿವೇಶಗಳನ್ನು ಪೂರ್ವಾಗ್ರಹ ರಹಿತವಾಗಿ ವಿಶ್ಲೇಷಿಸಿ, ಅಗತ್ಯಕ್ರಮ ಕೈಗೊಳ್ಳುವ ಗುಣ ಅವರಲ್ಲಿ ಕಂಡಿದ್ದೇನೆ. ಯುವ ಅಧಿಕಾರಿಗಳಿಗೆ ಕಲಿಯುವ ಅವಕಾಶ ನೀಡಿ, ಮಾರ್ಗದರ್ಶನ ನೀಡುವಅವರ ನಡೆ ನಿಜಕ್ಕೂ ಅನುಕರಣೀಯ.
– ಬಿ.ಎಚ್‌. ನಾರಾಯಣರಾವ್‌, ಜಿಪಂ ಸಿಇಒ

ಪ್ರತಿಯೊಬ್ಬ ಮಹಿಳೆಗೂ ಬಿ. ಬಿ. ಕಾವೇರಿ ಮೇಡಂ ಪ್ರೇರಣಾದಾಯರಾಗಿದ್ದಾರೆ. ಉತ್ತಮ ಮಾರ್ಗದರ್ಶನ ಮೂಲಕ ನಮ್ಮಂಥ ಹೊಸಬರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಅವರಿಂದ ಕಲಿಯಬೇಕಿರುವುದು ಬಹಳವಿದೆ. ಅವರ ಆಡಳಿತ ರೀತಿ ಎಲ್ಲರಿಗೂ ದಾರಿದೀಪ.
-ನಿಖೀತಾ. ಎಂ. ಚಿನ್ನಸ್ವಾಮಿ, ಉಪವಿಭಾಗಾಧಿಕಾರಿ, ಕೊಳ್ಳೇಗಾಲ

ಪ್ರತಿಯೊಬ್ಬರನ್ನೂ ಒಂದೇ ರೀತಿ ಕಾಣುತ್ತಿದ್ದರು. ಚುನಾವಣೆ ಸಂದರ್ಭಗಳಲ್ಲಿ ಯಾವುದೇ ಲೋಪದೋಷಗಳಾಗದ ರೀತಿಯಲ್ಲಿ, ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಿದ್ದರು. ಎಲ್ಲಾ ಕೆಲಸಗಳಲ್ಲೂ ಸಂಪೂರ್ಣತೆ ಸಾಧಿಸುವುದು ಅವರ ನಿಲುವಾಗಿತ್ತು.
-ವೃಷಬೇಂದ್ರಕುಮಾರ್‌, ಉಪನಿರ್ದೇಶಕರು, ರೇಷ್ಮೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next