Advertisement

33 ಆಮ್ಲಜನಕ ಘಟಕ ಸ್ಥಾಪಿಸುವ ಯೋಜನೆ

12:45 PM Jun 11, 2021 | Adarsha |

ಅಹ್ಮದ್‌ನಗರ: ಕೊರೊನಾ ಎರಡನೇ ಅಲೆಯಿಂದ ರೋಗಿಗಳ ತುರ್ತು ಚಿಕಿತ್ಸೆಗಾಗಿ ಅಗತ್ಯವಿದ್ದ ಆಮ್ಲಜನಕ ದೊರೆಯದ ಕಾರಣ ಜಿಲ್ಲಾ ವೈದ್ಯಕೀಯ ವಿಭಾಗವು ಅನೇಕ ಸಮಸ್ಯೆ ಎದುರಿಸಬೇಕಾಯಿತು. ಇದನ್ನು ಗಮನದಲ್ಲಿರಿಸಿದ ಸರಕಾರವು ಜಿಲ್ಲೆಯಲ್ಲಿ  ಮೂರನೇ ಅಲೆಯನ್ನು ಎದುರಿಸಲು ಎಲ್ಲ ರೀತಿಯ ಸಿದ್ದತೆಯಲ್ಲಿ ತೊಡಗಿದ್ದು, ಜಿಲ್ಲೆಯು ಆಮ್ಲಜನಕದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ.

Advertisement

ಜಿಲ್ಲೆಯಲ್ಲಿ ಈಗ 33 ಆಮ್ಲಜನಕ ಉತ್ಪಾದನ ಘಟಕ ಸ್ಥಾಪಿಸುವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಒಟ್ಟು 33 ಆಮ್ಲಜನಕ ಉತ್ಪಾದನ ಘಟಕಗಳ ಪೈಕಿ 16 ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೂಲಕ ಸ್ಥಾಪಿಸಲಾಗುತ್ತಿದೆ. ಕೆಲವು ಘಟಕಗಳನ್ನು ಖಾಸಗಿಯ ವಲಯಗಳ ವತಿಯಿಂದ  ಸ್ಥಾಪಿಸಲಾಗಿದೆ. ಜಿಲ್ಲಾ ಯೋಜನ ಸಮಿತಿಯ ನಿಧಿಯೊಂದಿಗೆ 14 ಯೋಜನೆಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೆಲವು ದಿನಗಳ ಹಿಂದೆ ವೈದ್ಯಕೀಯ ಆಮ್ಲಜನಕಕ್ಕಾಗಿ ಜಿಲ್ಲಾಡಳಿತ ಸಹಿತ ಖಾಸಗಿ ಆಸ್ಪತ್ರೆಗಳ ವ್ಯವಸ್ಥೆ ಹೆಚ್ಚಿನ ಪ್ರಯತ್ನ ಮಾಡಬೇಕಾಯಿತು.  ಬಳಿಕ ಒಂದೂವರೆ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಸನ್‌ ಮುಶ್ರಿಫ್‌ ಮತ್ತು ಕಲೆಕ್ಟರ್‌ ಡಾ| ರಾಜೇಂದ್ರ ಭೋಸ್ಲೆ ಅವರ ನೇತೃತ್ವದಲ್ಲಿ ಆಮ್ಲಜನಕ ಉತ್ಪಾದನೆಯಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳಲಾಯಿತು.

ನಿತ್ಯ 60 ಮೆಟ್ರಿಕ್‌ ಟನ್‌ ಆಮ್ಲಜನಕ ಅಗತ್ಯ

ಕೊರೊನಾ ಎರಡನೇ ಅಲೆ ಅವಧಿಯಲ್ಲಿ ಅಹ್ಮದ್‌ನಗರ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ದೈನಂದಿನ 30 ಮೆಟ್ರಿಕ್‌ ಟನ್‌ ಅಮ್ಲಜನಕದ ಅಗತ್ಯವಿರುತ್ತಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 30ರಿಂದ 35 ಮೆಟ್ರಿಕ್‌ ಟನ್‌ ಅಗತ್ಯವಿತ್ತು. ಸಮಯಕ್ಕೆ ಆಮ್ಲಜನಕ ಲಭ್ಯವಿಲ್ಲದಿದ್ದರೆ ಸಾವಿನ ಅಪಾಯವಿತ್ತು. ಆದರೆ ಜಿಲ್ಲಾಡಳಿತ ಮತ್ತು ಖಾಸಗಿ ಆಸ್ಪತ್ರೆಗಳು ಅದನ್ನು ನಿಭಾಯಿಸುವಲ್ಲಿ ಯಶಸ್ಸು ಕಂಡವು.

Advertisement

ಮುಂದಿನ ಅವಧಿಯಲ್ಲಿ ಈ ರೀತಿಯ ಸಮಸ್ಯೆ ಉಂಟಾಗಬಾರದೆಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಮುಶ್ರಿಫ್‌ ಅವರು ಜಿಲ್ಲಾ ಯೋಜನಾ ಸಮಿತಿಯ ಮೂಲಕ 49.84 ಕೋಟಿ ರೂ.ಗಳನ್ನು ಆಮ್ಲಜನಕ ಉತ್ಪಾದನೆ ಯೋಜನೆಗೆ ನೀಡಿದ್ದಾರೆ. ಈ ಮೂಲಕ ಪ್ರತಿ ತಾಲೂಕಿನಲ್ಲಿ ಒಂದರಂತೆ ಜಿಲ್ಲೆಯಲ್ಲಿ 14 ಸ್ಥಳಗಳಲ್ಲಿ ಆಮ್ಲಜನಕ ಉತ್ಪಾದಿಸುವ ಘಟಕ ಸ್ಥಾಪಿಸುವ ಯೋಜನೆಗಳನ್ನು ಮಾಡಲಾಗುತ್ತಿದ್ದು, ಅವುಗಳಲ್ಲಿ ರಾಹುರಿ ತಾಲೂಕಿನ ವಂಬೊರಿಯ ಗ್ರಾಮೀಣ ಆಸ್ಪತ್ರೆಯಲಿ , ಕರ್ಜತ್‌ ಮತ್ತು ಪಥಾರ್ಡಿಯಲ್ಲಿ ಉಪ-ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲಾಗುತ್ತಿದೆ.

ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಈ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಈ ಯೋಜನೆಯಿಂದ ವೈದ್ಯಕೀಯ ವಲಯಕ್ಕೆ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ಒದಗುವುದು ಎಂದು ಜಿಲ್ಲಾ ಯೋಜನಾ ಅಧಿಕಾರಿ ನಿಲೇಶ್‌ ಭದಾನೆ ಮಾಹಿತಿ ನೀಡಿದ್ದಾರೆ.

ಎಲ್ಲ ಸ್ಥಳಗಳಲ್ಲಿ ಉತ್ಪಾದನೆ ಜತೆಗೆ ಅಲ್ಲಿನ ಸಿಲಿಂಡರ್‌ಗಳಿಗೆ ತುಂಬಲು ವ್ಯವಸ್ಥೆ ಮಾಡಲಾಗಿದೆ. ಯೋಜನ ಸ್ಥಳದಲ್ಲಿ ಶಾಶ್ವತ ವಿದ್ಯುತ್‌ ಸರಬರಾಜು ಖಚಿತಪಡಿಸಿ ಕೊಳ್ಳಲು ಶಾಸಕರ ಸಹಯೋಗದೊಂದಿಗೆ ಜನರೇಟರ್‌ ಸ್ಥಾಪಿಸಲಾಗಿದೆ. ಆಮ್ಲಜನಕ ಲಭ್ಯವಿ ರುವುದರಿಂದ ಎಲ್ಲ ಗ್ರಾಮೀಣ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು ಶೇ. 25ರಷ್ಟು ಹೆಚ್ಚಿಸಲು ಜಿಲ್ಲಾಡಳಿತ ಪ್ರಸ್ತಾವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next