ಹೊಳೆಹೊನ್ನೂರು: ಸರ್ಕಾರಿ ಶಾಲೆಯ ಜಾಗ ಕಬಳಿಸಲು ಗ್ರಾಪಂ ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಘಟನೆ ಭದ್ರಾವತಿ ತಾಲೂಕಿನ ಸನ್ಯಾಸಿ ಕೋಡಮಗ್ಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಸಮೀಪದ ಸನ್ಯಾಸಿ ಕೋಡಮಗ್ಗಿ ಗ್ರಾಮದ ಸರ್ವೇ ನಂ. 58 ರಲ್ಲಿ 6 ಎಕರೆ 12 ಗುಂಟೆ ಜಮೀನು ಗ್ರಾಮದ ಆಂಜನೇಯ ಸ್ವಾಮಿ ಮತ್ತು ತಿರುಮಲ ದೇವರ ಹೆಸರಿಗೆ ಖಾತೆ ಇದೆ. ಈ ಜಾಗವನ್ನು ಸುಮಾರು ನಲವತ್ತು ವರ್ಷಗಳ ಹಿಂದೆ ಅಂದರೆ 1984-85 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ 2 ಎಕರೆ 10 ಗುಂಟೆ ಜಾಗವನ್ನು ಮೀಸಲಿಟ್ಟು, ಗ್ರಾಪಂನಲ್ಲಿ ದಾಖಲೆ ಮಾಡಿ ಶಾಲಾ ಕಟ್ಟಡವನ್ನು ನಿರ್ಮಿಸಲಾಯಿತು. ಮುಂದುವರಿದು 1990-91ರಲ್ಲಿ ಪ್ರೌಢಶಾಲೆ ಮಂಜೂರಾಗಿ ಇದೇ 2 ಎಕರೆ 10 ಗುಂಟೆ ಜಾಗದಲ್ಲಿಯೇ ನಿರ್ಮಾಣ ಮಾಡಲಾಯಿತು.
ಪ್ರಸ್ತುತ ಈ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಉರ್ದು ಶಾಲೆಗಳು ನಡೆಯುತ್ತವೆ. ಜೊತೆಗೆ ಬಿಸಿ ಊಟದ ಎರಡು ಕಟ್ಟಡಗಳು ಇವೆ. ಇತ್ತೀಚೆಗೆ ಸಮುದಾಯ ಭವನ ನಿರ್ಮಾಣಕ್ಕೆಂದು 30×40 ವಿಸ್ತಿರ್ಣದ ಜಾಗವನ್ನು ನೀಡಿದ್ದು ಅದೂ ಕೂಡ ನಿರ್ಮಾಣ ಹಂತದಲ್ಲಿದೆ. ಈಗಿರುವಾಗ ಒಟ್ಟು ಜಾಗದ ಅರ್ದಕ್ಕಿಂತಲೂ ಹೆಚ್ಚು ಕಟ್ಟಡಗಳೇ ತುಂಬಿ ಹೋಗಿವೆ. ಸುಮಾರು 450 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು ಅವರಿಗೆ ಸರಿಯಾದ ಆಟದ ಮೈದಾನ ಲಭ್ಯವಾಗುತ್ತಿಲ್ಲ. ಜೊತೆಗೆ ಇಡೀ ಶಾಲಾ ಕಟ್ಟಡ ತಗ್ಗು ಪ್ರದೇಶದಲ್ಲಿದ್ದು ಮಳೆಗಾಲ ಆರಂಭವಾದರೆ ಮೈದಾನವೆಲ್ಲಾ ನೀರು ನಿಂತು ಹೊಂಡದಂತಾಗುತ್ತದೆ. ಅಲ್ಲದೆ ನೀರು ಹೆಚ್ಚಾಗಿ ಶಾಲಾ ಕೊಠಡಿಯೊಳಗೆ ನುಗ್ಗುತ್ತದೆ. ಇದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗುವುದನ್ನು ಕಂಡು ಕಳೆದ ಬಾರಿಯ ಗ್ರಾಪಂ ಆಡಳಿತ ಮಂಡಳಿ ಕೊಠಡಿಗಳ ಮುಂಬಾಗದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಿದೆ.
ಇಷ್ಟೆಲ್ಲಾ ಸಮಸ್ಯೆಗಳಿರುವ ಒಂದು ಸರ್ಕಾರಿ ಶಾಲೆಯನ್ನು ಉನ್ನತೀಕರಿಸುವ ಜವಾಬ್ದಾರಿ ಹೊಂದಬೇಕಾದ ಗ್ರಾಪಂ ಶಾಲೆಯ ಜಾಗವನ್ನೇ ಕಬಳಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಸನ್ಯಾಸಿ ಕೊಡಮಗ್ಗಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸುರೇಶ್ ಬಿ. ಆರೋಪಿಸಿದರು.
ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಜಮೀನನ್ನು ಅತಿಕ್ರಮಿಸುವುದು ಸರಿಯಾದ ಕ್ರಮವಲ್ಲ. ಆದರೂ ಗ್ರಾಮೀಣಭಿವೃದ್ಧಿ ಸಚಿವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಧಿಕಾರಿಗಳು ಮತ್ತು ಉಪವಿಭಾಗಾಧಿ ಕಾರಿಗಳು ಹಾಗೂ ತಹಶೀಲ್ದಾರ್ ಅವರು ಗ್ರಾಪಂ ಕಟ್ಟಡಕ್ಕೆ ನಿವೇಶನ ಮಂಜೂರು ಮಾಡಲು ಆದೇಶಿಸಲು ಮುಂದಾಗುತ್ತಿರುವುದರ ವಿರುದ್ಧ ಈಗಾಗಲೇ ನ್ಯಾಯಾಲಯದ ಮೊರೆ ಹೋಗಲಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದಿಂದ ಶಾಲೆಯ ಪರವಾಗಿ ತೀರ್ಪು ಲಭಿಸುವುದು ಎಂಬ ನಂಬಿಕೆ ಇದೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ವಿ. ಕಿರಣ್ ಹೇಳಿದರು.