ಬೆಂಗಳೂರು: 500, 1000 ಮುಖಬೆಲೆಯ ನೋಟು ಬದಲಾವಣೆ ಪ್ರಕ್ರಿಯೆಯನ್ನು ದಿಢೀರ್ ರದ್ದುಪಡಿಸಿದ್ದನ್ನು ವಿರೋಧಿಸಿ ನೃಪ್ತತುಂಗ ರಸ್ತೆಯಲ್ಲಿರುವ ಆರ್‌ಬಿಐ ಪ್ರಾದೇಶಿಕ ಕಚೇರಿ ಎದುರು ಸೋಮವಾರ ಸಾರ್ವಜನಿಕರು ಪ್ರತಿಭಟನೆಗಿಳಿದ ಪರಿಣಾಮ ಕೆಲ ಹೊತ್ತು ಬಿಗುವಿನ ವಾತಾವರಣ ನೆಲೆಸಿತ್ತು.
ಗರಿಷ್ಠ ಮೌಲ್ಯದ ನೋಟುಗಳು ರದ್ದುಗೊಂಡ ಬಳಿಕ ಕೇಂದ್ರ ಸರ್ಕಾರವು ಆರ್‌ಬಿಐ ಶಾಖೆಗಳಲ್ಲಿ ನೋಟುಗಳ ಬದಲಾವಣೆಗೆ ಮಾ.31 ವರೆಗೆ ಗಡುವು ನೀಡಿದೆ. ಅದರಂತೆ ನೋಟು ಬದಲಾವಣೆ ಸಂಬಂಧ ಶನಿವಾರ ಕೂಡ ಆರ್‌ಬಿಐ ಕಚೇರಿ ಬಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಆದರೆ, ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ನೋಟು ಬದಲಾವಣೆಗೆ ಸ್ಥಗಿತಗೊಳಿಸಲಾಗಿದೆ ಎಂದು ಆರ್‌ಬಿಐ ಕೇಂದ್ರ ಕಚೇರಿಯು ಫ್ಯಾಕ್ಸ್ ಸಂದೇಶ ಕಳುಹಿಸಿತು. ಹೀಗಾಗಿ ಅಧಿಕಾರಿಗಳು, ಹಳೆ 500 ಮತ್ತು 1000 ಮುಖಬೆಲೆಯ ನೋಟುಗಳ ಸ್ವೀಕಾರವನ್ನು ನಿಲ್ಲಿಸಿದರು.
ಆರ್‌ಬಿಐ ದಿಢೀರ್ ತನ್ನ ನಿರ್ಧಾರ ಬದಲಿಸಿದ್ದು ಗೊಂದಲಕ್ಕೆ ಕಾರಣವಾಗಿದೆ. ಏಕಾಏಕಿ ತನ್ನ ನಿರ್ಧಾರ ಬದಲಿಸಿದ ಆರ್‌ಬಿಐ ಕೇಂದ್ರ ಕಚೇರಿಯು, ಬೆಂಗಳೂರು ಕೈ ಬಿಟ್ಟು ಚೆನ್ನೈ ಸೇರಿದಂತೆ ದೇಶದ ಆಯ್ದ ಐದು ಆರ್‌ಬಿಐ ಪ್ರಾದೇಶಿಕ ಕಚೇರಿಗಳಲ್ಲಿ ಮಾತ್ರವಷ್ಟೇ ರದ್ದುಗೊಂಡ ನೋಟುಗಳ ಬದಲಾವಣೆಗೆ ಅವಕಾಶ ನೀಡಿದೆ. ಇದರಿಂದ ಬೆಂಗಳೂರಿಗರು ಚೆನ್ನೈ ಆರ್‌ಬಿಐಗೆ ತೆರಳಿ ನೋಟು ಬದಲಾಯಿಸಿಕೊಳ್ಳಬೇಕಿದೆ ಎಂದು ಮೂಲಗಳು ಹೇಳಿವೆ.ಇದರಿಂದ ಕೆರಳಿದ ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧರಣಿಗೆ ಮುಂದಾದರು.
ಅಲ್ಲದೆ, ಕೆಲವರು ಬ್ಯಾಂಕ್ ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಹೊತ್ತು ಬ್ಯಾಂಕ್ ಮುಂದೆ ಗೊಂದಲ ವಾತಾವರಣ ನೆಲೆಸಿತು. ಅಷ್ಟರಲ್ಲಿ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರಿಸಿದಾಗ ಆರ್‌ಬಿಐ ಆದೇಶ ಪ್ರತಿ ನೀಡಿದ ಅಧಿಕಾರಿಗಳು ಪರಿಸ್ಥಿತಿ ವಿವರಿಸಿದರು.
ಈ ಆದೇಶ ಪ್ರತಿಯನ್ನು ಸಾರ್ವಜನಿಕರಿಗೆ ತೋರಿಸಿದ ಪೊಲೀಸರು, ಹಿರಿಯ ಅಧಿಕಾರಿಗಳ ಸೂಚನೆಯನ್ನು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಪಾಲಿಸಬೇಕಿದೆ ಎಂದು ವಾಸ್ತವ ಸಂಗತಿ ಮನವರಿಕೆ ಮಾಡಿಕೊಟ್ಟ ಬಳಿಕ ಪರಿಸ್ಥಿತಿ ಶಾಂತವಾಯಿತು ಎಂದು ತಿಳಿದು ಬಂದಿದೆ.