ಬೆಂಗಳೂರು: ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರ ಅಧ್ಯಕ್ಷತೆಯಲ್ಲಿ ಬಂಜಾರ ಆರ್ಥಿಕ ಮತ್ತು ಸಾಂಸ್ಕೃತಿಕ ಉತ್ತೇಜನ ಕೇಂದ್ರ (ಕೌಶಲ್ಯ ಪಾರ್ಕ್)ದ ಯೋಜನೆ ಪ್ರಗತಿ ಸಭೆ ನಡೆಯಿತು.
ಭಾನುವಾರ ನಗರದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕತಾಂ ಅನಿನಿ ವ್ಯವಸ್ಥಾಪಕ ನಿರ್ದೇಶಕ ಚಂದ್ರನಾಯ್ಕ, ಕಂದಾಯ ಗ್ರಾಮ ಕೋಶದ ನಿರ್ದೇಶಕ ಹೀರಾನಾಯ್ಕ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಕಿರಣ್ ಕುಮಾರ್ ಶೆಟಕರ್, ಗುಲ್ಬರ್ಗಾ ಕೆ.ಬಿ.ಎನ್. ವಿಶ್ವವಿದ್ಯಾನಿಲಯದ ಸಹ ಉಪ ಕುಲಪತಿ ಪ್ರೊ.ವಿರೂಪಾಕ್ಷಯ್ಯ, ಕತಾಂಅನಿನಿ, ಕಾರ್ಯಪಾಲಕ ಅಭಿಯಂತರರು ಕೆ.ಟಿ. ನಾಗರಾಜು, ಯೋಜನಾ ಸಲಹೆಗಾರ ಕೆ.ಎನ್.ಪೂಜಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಸತೀಶ್ ಕುಮಾರ್ ಭಾಗವಹಿಸಿದ್ದರು.
ಸಭೆಯನ್ನು ಕುರಿತು ಮಾತನಾಡಿದ ಸಂಸದರು ಬಂಜಾರ ಆರ್ಥಿಕ ಮತ್ತು ಸಾಂಸ್ಕೃತಿಕ ಉತ್ತೇಜನ ಕೇಂದ್ರ (ಕೌಶಲ್ಯ ಪಾರ್ಕ್) ಯೋಜನೆಗೆ 2015-16ನೇ ಸಾಲಿನಲ್ಲಿ 6.0 ಕೋಟಿ ರೂ. ಮಂಜೂರಾಗಿತ್ತು. ಮಂಜೂರಾದ ಅನುದಾನದಲ್ಲಿ ಬಂಜಾರರ ಪಾರಂಪರಿಕ ಕಸೂತಿ ಕಲೆಯನ್ನು ಉಳಿಸಿ ಬೆಳೆಸಲು ಹಾಗೂ ಆ ಭಾಗದ ಮಹಿಳೆಯರ ಸಬಲೀಕರಣ ಮತ್ತು ನಿರುದ್ಯೋಗ ನಿರ್ಮೂಲನೆಗಾಗಿ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಬೋರಂಪಲ್ಲಿ ಬಳಿಯಿರುವ ಲಾಲ್‌ಧರಿ ಪ್ರದೇಶದಲ್ಲಿ ಕೌಶಲ್ಯ ಪಾರ್ಕ್ ಸ್ಥಾಪಿಸಲಾಗಿದೆ.
ಈ ಕೇಂದ್ರದಲ್ಲಿ ವಿವಿಧ ಕೌಶಲ್ಯ ಚಟುವಟಿಕೆಗಳನ್ನು ರೂಪಿಸಿ ಕಾರ್ಯಾನುಷ್ಠಾನಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇಲ್ಲಿ ನಿರಂತರವಾಗಿ ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ಉತ್ತೇಜನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಈಗಾಗಲೇ ಚಾಲನೆಯಲ್ಲಿರುವ ವಿವಿಧ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಸೂಚಿಸಿದರು.
ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ: ಲಾಲ್‌ಧರಿ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ರೂಪಿಸುವಲ್ಲಿ ಕ್ರಿಯಾಯೋಜನೆ ತಯಾರಿಸುವುದು, ಬಂಜಾರ ಕಸೂತಿ ಕಲೆಯ ತರಬೇತಿ ನೀಡಿ ಪುನಶ್ಚೇತನಗೊಳಿಸುವುದು, ಸಿದ್ಧ ಉಡುಪುಗಳ ಮಾರಾಟ ಕೇಂದ್ರ, ಔಷಧ ಗಿಡಮೂಲಿಕಗಳ ಸಸ್ಯವನ ನಿರ್ಮಾಣ, ಮಧ್ಯ ವರ್ಜನ ಕೇಂದ್ರ, ಆಧ್ಯಾತ್ಮಿಕ ಕೇಂದ್ರ, ಗೋ ಸಂರಕ್ಷಣಾ ಕೇಂದ್ರ ಮುಂತಾದ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಪ್ರಾರಂಭಿಸಿ ಪೂರ್ಣಗೊಳಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಅಲ್ಲದೆ, ಬಂಜಾರರಲ್ಲಿ ವಲಸೆ ಪ್ರವೃತಿ ತಡೆಗಟ್ಟಲು ಮತ್ತು ಬಡತನ ನಿರ್ಮೂಲನೆ ಮಾಡಲು ನಿರುದ್ಯೋಗಿ ಯುವಕ, ಯುವತಿಯರಿಗೆ ಕೌಶಲ್ಯ ತರಬೇತಿಗಳನ್ನು ಒದಗಿಸುವುದು. ಈ ಕೇಂದ್ರದಲ್ಲಿ ಕಸೂತಿ ಕಲೆ ತರಬೇತಿ ಪಡೆದ ಮಹಿಳೆಯರು ತಮ್ಮ ಗ್ರಾಮಗಳಿಗೆ ತೆರಳಿ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು, ಸದರಿ ಕೇಂದ್ರದಿಂದ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ನಂತರ ಅವುಗಳನ್ನು ಸಿದ್ಧ ವಸ್ತುಗಳನ್ನಾಗಿ ಮಾಡಿ ಅದೇ ಕೇಂದ್ರದಲ್ಲಿ ಮಾರಾಟ ಮಾಡಿ ಆದಾಯ ಗಳಿಸುವುದು. ಸಿದ್ಧಪಡಿಸಿದ ಸಾಮಗ್ರಿಗಳಿಗೆ ಕೇಂದ್ರದಲ್ಲಿ ಆಧುನಿಕ ವಿನ್ಯಾಸಗೊಳಿಸಿ ವಿದೇಶಗಳಲ್ಲಿ ಸೂಕ್ತ ಮಾರುಕಟ್ಟೆ ಕಲ್ಪಿಸುವುದರ ಮೂಲಕ ಪ್ರಚಾರ ಪಡಿಸುವ ಬಗ್ಗೆಯೂ ಚರ್ಚಿಸಲಾಯಿತು.