Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ

12:47 AM Dec 19, 2019 | Lakshmi GovindaRaj |

ಬೆಂಗಳೂರು: “ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೇಶದಲ್ಲಿ ಕರ್ನಾಟಕವನ್ನು ಮೊದಲೆರಡು ಸ್ಥಾನಗಳಲ್ಲಿ ತೆಗೆದುಕೊಂಡು ಹೋಗುವ ಗುರಿ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ನಗರದ ಹೋಟೆಲ್‌ ಲಲಿತ್‌ ಅಶೋಕದಲ್ಲಿ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡ “ಪ್ರವಾಸೋದ್ಯಮ ನೀತಿ 2020-25′ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ದೇಶದಲ್ಲಿ ಪ್ರವಾಸೋದ್ಯಮದಲ್ಲಿ ಟಾಪ್‌ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಮುಂದಿನ ಆರು-ಏಳು ತಿಂಗಳಲ್ಲಿ ಆ ಕಾರ್ಯಪಡೆ ವರದಿ ಸಲ್ಲಿಸಲಿದೆ. ಅದನ್ನು ಆಧರಿಸಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಕಲ್ಪಿಸಲು ಬರುವ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಲಾಗುವುದು. 2019-20ನೇ ಸಾಲಿನ ಬಂಡವಾಳ ವೆಚ್ಚದಡಿ 105 ಕೋಟಿ ರೂ. ವೆಚ್ಚದಲ್ಲಿ 144 ನೂತನ ಕಾಮಗಾರಿಗಳು ಹಾಗೂ ಪ್ರವಾಸೋದ್ಯಮ ವಿಜನ್‌ಗ್ರೂಪ್‌ ಅಡಿ 149 ಕೋಟಿ ಅನುದಾನದಲ್ಲಿ ಒಟ್ಟು 33 ನೂತನ ಕಾಮಗಾರಿಗಳನ್ನು ನಡೆಸಲು ಅನುಮೋದನೆ ನೀಡಲಾಗಿದೆ ಎಂದರು.

ಪ್ರವಾಸೋದ್ಯಮಕ್ಕೆ ಹೊಸ ಪರಿಕಲ್ಪನೆ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ವಿದೇಶಗಳಿಗೆ ಹೋಲಿಸಿದರೆ ಸ್ವಾತಂತ್ರಾನಂತರ ಪ್ರವಾಸೋದ್ಯಮಕ್ಕೆ ನಮ್ಮ ಕೊಡುಗೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಹಂಪಿ, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ಎಲ್ಲವೂ ನಮ್ಮ ಪೂರ್ವಿಕರು ಬಿಟ್ಟು ಹೋಗಿದ್ದು. ಈ ಕೊಡುಗೆಯನ್ನು ಸಂರಕ್ಷಿಸುವುದರ ಜತೆಗೆ ಅಭಿವೃದ್ಧಿಪಡಿಸುವುದು ಹೇಗೆ?

ಯುವಪೀಳಿಗೆ ಏನು ಅಪೇಕ್ಷಿಸುತ್ತಿದೆ? ಮತ್ತಿತರ ಅಂಶಗಳ ಕುರಿತಾದ ಚರ್ಚೆ ಈ ಎರಡು ದಿನಗಳ ಕಾರ್ಯಾಗಾರದಲ್ಲಿ ನಡೆಯಲಿದೆ. ಈ ಮೂಲಕ ಪ್ರವಾಸೋದ್ಯಮಕ್ಕೆ ಹೊಸ ಪರಿಕಲ್ಪನೆ ನೀಡುವ ಉದ್ದೇಶ ಇದೆ ಎಂದರು. ಸುಧಾಮೂರ್ತಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್‌ ಕುಮಾರ್‌, ಕೆ.ಎನ್‌.ರಮೇಶ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

ಸ್ಥಾನಮಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ
ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳು ಬುಧವಾರವೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸ್ಥಾನಮಾನಕ್ಕಾಗಿ ಮನವಿ ಸಲ್ಲಿಸಿದರು. ಬಿಜೆಪಿ ನೂತನ ಶಾಸಕ ಆನಂದ್‌ ಸಿಂಗ್‌ ಅವರು ಬಿಎಸ್‌ವೈ ಅವರನ್ನು ಡಾಲರ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು. ತಮಗೆ ಸಚಿವ ಸ್ಥಾನದ ಜತೆಗೆ ಉತ್ತಮ ಖಾತೆ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೇ, ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆಯೂ ಕೋರಿದರು ಎನ್ನಲಾಗಿದೆ.

ಹಾಗೆಯೇ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್‌ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಉಪಚುನಾವಣೆಯಲ್ಲಿ ಗೆದ್ದವರಿಗಷ್ಟೇ ಸಚಿವ ಸ್ಥಾನ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಮಂಗಳವಾರ ರಾತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಹಿಂದೆ ನಡೆದ ಮಾತುಕತೆಯಂತೆ ಸೂಕ್ತ ಸ್ಥಾನಮಾನ ಕಲ್ಪಿಸಿ ಹಿತ ಕಾಪಾಡುವ ವಾಗ್ಧಾನ ಉಳಿಸಿಕೊಳ್ಳುವಂತೆ ವಿಶ್ವನಾಥ್‌ ಮನವಿ ಮಾಡಿದರು ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡಲು ತೊಂದರೆ ಇಲ್ಲ. ಆದರೆ ಉಪಚುನಾವಣೆಯಲ್ಲಿ ಪರಾಭವಗೊಂಡ ವರಿಗೆ ಸ್ಥಾನಮಾನ ಕಲ್ಪಿಸುವ ಬಗ್ಗೆ ಅಪಸ್ವರವಿದೆ. ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕರು ಸಚಿವ ಸ್ಥಾನಕ್ಕೆ ಒತ್ತಡ ಹೇರುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.

ಸಮನ್ವಯದಲ್ಲಿ ಸಮಿತಿ ಮೂಲಕ ಅಭಿವೃದ್ಧಿ: ಪ್ರವಾಸೋದ್ಯಮದ ಜತೆಗೆ ಸಂಬಂಧಪಟ್ಟ ಇಲಾಖೆಗಳ ಸಮನ್ವಯ ಸಮಿತಿ ರಚಿಸಿ, ಅದರಡಿ ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು ಎಂಬ ಅಭಿಪ್ರಾಯ ತಜ್ಞರಿಂದ ಕೇಳಿ ಬಂತು. ಪ್ರವಾಸೋದ್ಯಮ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ರವಿಚಂದರ್‌, ಒಂದು ಪ್ರವಾಸಿ ತಾಣಕ್ಕೆ ಮೂಲಸೌಕರ್ಯ ಕಲ್ಪಿಸುವುದು ಕೇವಲ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ್ದಲ್ಲ.

ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ, ಊಟ-ವಸತಿಗೆ ಹೋಟೆಲ್‌ ಉದ್ಯಮ, ಸ್ವಚ್ಛತೆಗೆ ಸ್ಥಳೀಯ ಸಂಸ್ಥೆ ಸೇರಿದಂತೆ ಇತರ ಇಲಾಖೆಗಳೂ ಬರುತ್ತವೆ. ಹಾಗಾಗಿ, ಅವೆಲ್ಲವುಗಳನ್ನು ಒಳಗೊಂಡ ಒಂದು ಉನ್ನತಾಧಿಕಾರ ಸಮಿತಿ ರಚಿಸಬೇಕು. ಅದರಡಿ ಅಭಿವೃದ್ಧಿ ರೂಪುರೇಷೆಗಳು ಸಿದ್ಧವಾಗಬೇಕು ಎಂದರು. ನಿವೃತ್ತ ಐಎಎಸ್‌ ಅಧಿಕಾರಿ ಸುಬೀರ್‌ ಹರಿಸಿಂಗ್‌ ಮಾತನಾಡಿ, ಪ್ರವಾಸೋದ್ಯಮಕ್ಕೆ ನೀಡುವ ಬಜೆಟ್‌ನಲ್ಲಿ ಗ್ರಾಮ ಪಂಚಾಯ್ತಿಗಳಿಗೂ ಹಣ ಮೀಸಲಿಡಬೇಕು.

ಅದರಿಂದ ಸ್ಥಳೀಯ ಪ್ರವಾಸಿ ತಾಣದ ಸ್ವಚ್ಛತೆ ಮತ್ತಿತರ ನಿರ್ವಹಣೆಗೆ ಅದು ಬಳಕೆ ಆಗಬೇಕು ಎಂದರು. ನಗರ ವಾಸ್ತುಶಿಲ್ಪಿ ನರೇಶ್‌ ನರಸಿಂಹನ್‌, ನಗರದ ಮೈಸೂರು ಮಹಾರಾಜರ ಅರಮನೆಯಿಂದ ಕೆ.ಆರ್‌.ರಸ್ತೆ-ಅವೆನ್ಯು ರಸ್ತೆ ಮೂಲಕ ಹಾದು ಟಿಪ್ಪು ಅರಮನೆಗೆ ತೆರಳುವ ಮಾರ್ಗದಲ್ಲಿಯೇ 28 ಪಾರಂಪರಿಕ ಕಟ್ಟಡಗಳು ಬರುತ್ತವೆ. ಈ ಮಾರ್ಗದ ನಾಲ್ಕು ಸಾವಿರ ಎಕರೆ ಸುತ್ತ ವೀಕ್ಷಿಸಿದರೆ 50ಕ್ಕೂ ಅಧಿಕ ಪಾರಂಪರಿಕ ಕಟ್ಟಡಗಳು ಬರುತ್ತವೆ. ಹಾಗಾಗಿ, ಅವುಗಳ ಸುಸ್ಥಿರ ಅಭಿವೃದ್ಧಿ ಆಗಬೇಕು. ಆ ಮಾರ್ಗವನ್ನು “ಸುವರ್ಣ ಮಾರ್ಗ’ವಾಗಿ ನಿರ್ಮಿಸಬೇಕು ಎಂದು ಸಲಹೆ ಮಾಡಿದರು.

ನೂತನ ಪ್ರವಾಸೋದ್ಯಮ ನೀತಿಯ ಗುರಿ
-ರಾಜ್ಯ ಪ್ರವಾಸೋದ್ಯಮದ ಜಿಎಸ್‌ಡಿಪಿಯನ್ನು ಶೇ.14ರಿಂದ 20ಕ್ಕೆ ಹೆಚ್ಚಳ
-65 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ.
-15 ಸಾವಿರ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ.
-50 ಸಾವಿರ ಕೊಠಡಿಗಳ ನಿರ್ಮಾಣ.
-18.6 ಲಕ್ಷ ಜನರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ನೀಡುವುದು.

ನಾನು ಈ ಹಿಂದೆ ಆಸ್ಟ್ರೇಲಿಯಕ್ಕೆ ಹೋದಾಗ, ಸಮುದ್ರ ತೀರದಲ್ಲಿರುವ ಪೆಂಗ್ವಿನ್‌ ಪಕ್ಷಿಗಳ ವೀಕ್ಷಣೆಗಾಗಿಯೇ ಹತ್ತು ತಾಸು ಕಳೆಯಬೇಕಾಯಿತು. ಆದರೆ, ಅಲ್ಲಿಗಿಂತ ಹಲವು ಪಟ್ಟು ಪ್ರಕೃತಿ ಮತ್ತು ಪ್ರಾಣಿ ಸಂಪತ್ತು ನಮ್ಮಲ್ಲಿದೆ. ಪಾರಂಪರಿಕ ಕಟ್ಟಡಗಳು, ಐತಿಹಾಸಿಕ ದೇವಾಲಯಗಳು ಇವೆ. ಅವುಗಳನ್ನು ಸಂರಕ್ಷಿಸಿ, ಮೂಲಸೌಕರ್ಯದೊಂದಿಗೆ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಆಗಬೇಕಾಗಿದೆ.
-ಆರ್‌.ಅಶೋಕ್‌, ಕಂದಾಯ ಮತ್ತು ಪೌರಾಡಳಿತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next