ಬೇಲೂರು: ಸಾಂಕ್ರಾಮಿಕ ರೋಗಗಳ ಹತೋಟಿ ಮತ್ತು ತಡೆಗಟ್ಟಲು ಸಾರ್ವಜನಿಕರ ಪಾತ್ರ ಬಹು ಮುಖ್ಯವಾಗಿದೆ. ಆರೋಗ್ಯ ಇಲಾಖೆ ರೋಗಗಳ ನಿಯಂತ್ರಣಕ್ಕೆ ಹಲವರು ಯೋಜನೆ ರೂಪಿಸಿ ಅರಿವು ಮೂಡಿಸಿದ್ದರೂ ಜನರು ಪರಿಣಾಮಕಾರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ತಾಲೂಕಿನಲ್ಲಿ ಡೆಂಘೀ, ಚಿಕೂನ್‌ಗುನ್ಯಾ ಕಾಯಿಲೆಗಳು ಜನರಲ್ಲಿ ಹೆಚ್ಚು ಕಾಡುತ್ತವೆ ಈ ಕಾಯಿಲೆಗಳು ಹರಡದ ರೀತಿ ಮುಂಜಾಗ್ರತಾ ಕ್ರಮ ಹಾಗೂ ಯಾವ ರೀತಿ ತಡೆಗಟ್ಟಬೇಕು ಎಂಬುದನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯ ಪುರಸಭೆ ಸಿಬ್ಬಂದಿ ತಿಳಿವಳಿಕೆ ನೀಡಿದರು ಸಾರ್ವಜನಿಕರು ಈ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂದರು.
ಸ್ವಚ್ಛತೆಯ ಅರಿವು: ಜಿಲ್ಲೆಯ ಅರಸಿಕೆರೆ ಹಾಸನ ಮತ್ತು ಬೇಲೂರು ತಾಲೂಕುಗಳಲ್ಲಿ ಪ್ರಕರಣಗಳು ಹೆಚ್ಚಿದ್ದು, ಆರೋಗ್ಯ ಇಲಾಖೆ ಈಗಾಗಲೆ ಗ್ರಾಮ ಪಂಚಾಯಿತಿ ಪಿಡಿಒ ಪುರಸಭೆ ಮುಖ್ಯಾಧಿಕಾರಿಗಳ ಸಭೆ ನಡೆಸಿ ವಾರ್ಡ್‌ಗಳಲ್ಲಿ ಸ್ವಚ್ಛತೆ ಮತ್ತು ನೀರಿನ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದ್ದು ಅದರಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ, ಮನೆಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಸಿದ ಅವರು ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಡೆಂಘೀ ಪ್ರಕರಣಗಳು ಕಡಿಮೆ ಇದ್ದು ರೋಗ ನಿಯಂತ್ರಣಕ್ಕೆ ಸಾರ್ವಜನಿ ಕರು ಸ್ಪಂದಿಸಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳು ದಸ್ತಾನಿದ್ದು, ಸಾರ್ವಜನಿಕರು ಇದರ ಉಪಯೋಗಪಡೆಯಬೇಕು. ಬೇಲೂರು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಾ ಕೇಂದ್ರವನ್ನು ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಕಡ್ಡಾಯವಾಗಿ ತೆರೆಯುವಂತೆ ಸೂಚನೆ ನೀಡಿದರು.
ಮುಂಜಾಗ್ರತಾ ಕ್ರಮ: ಜಿಲ್ಲಾ ಕೀಟ ಶಾಸ್ತ್ರತಜ್ಞ ಡಾ.ರಾಕೇಶ್ ಕುಲಕರ್ಣಿ ಮಾತನಾಡಿ, ಬೇಲೂರು ತಾಲೂಕಿನ ಹುಣಸೇಕೆರೆ, ಮುದಿಗೆರೆ, ಗೆಂಡೆಹಳ್ಳಿ, ಬಂಟೇನಹಳ್ಳಿ, ಗಂಗೂರು, ದೊಡ್ಡ ಕೋಡಿಹಳ್ಳಿ ,ಕುಶಾವಾರ, ಅರೇಹಳ್ಳಿ ಗ್ರಾಮಗಳಲ್ಲಿ ಡೆಂಗೂ ಪ್ರಕರಣಗಳು ಕಂಡುಬಂದಿದ್ದು ಈಗಾಗಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ 19 ಡೆಂಘೀ 5 ಮಲೆರೀಯಾ ಪ್ರಕರಣಗಳು ಪತ್ತೆಯಾಗಿದೆ. ಮನೆಯ ಸುತ್ತ¤ನೀರು ನಿಲ್ಲದಂತೆ ಪರಿಸರ ಸ್ವಚ್ಛವಾಗಿಟ್ಟು ಸೊಳ್ಳೆಯ ತಾಣಗಳು ಬೆಳೆಯದಂತೆ ಎಚ್ಚರ ವಹಿಸಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು. ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್, ಆಡಳಿತಾಧಿಕಾರಿ ಡಾ. ನರಸೇಗೌಡ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಕೃಷ್ಣಪ್ಪ, ಉಷಾ ಇದ್ದರು.