Advertisement

ಹಡಿಲು ಬಿದ್ದ ಗದ್ದೆಯಲ್ಲಿ ಹಸಿರು ಬೆಳೆಯುವ ಯೋಜನೆ

11:49 PM Aug 22, 2019 | Sriram |

ಕುಂದಾಪುರ: ಭತ್ತದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ ಎಂಬ ಕೂಗಿನ ನಡುವೆ ಭತ್ತ ಬೆಳೆಗಾರರ ಒಕ್ಕೂಟವೊಂದು ಸದ್ದಿಲ್ಲದೇ ಭತ್ತದ ಬೆಳೆಗೆ ಪ್ರೋತ್ಸಾಹ ನೀಡುತ್ತಿದೆ. 1 ಸಾವಿರಕ್ಕೂ ಅಧಿಕ ಸದಸ್ಯರನ್ನೊಳಗೊಂಡ ಈ ಸಂಘವು ಭತ್ತದ ಬೆಳೆಗಾರರಿಗೆ ಆಶಾಕಿರಣವಾಗಿ ಗ್ರಾಮಾಂತರ ಪ್ರದೇಶದಲ್ಲಿ ತಂತ್ರಜ್ಞಾನದ ಮಾಹಿತಿ ನೀಡುತ್ತಾ ಆಧುನಿಕ ಕೃಷಿಗೆ ಎಲ್ಲ ರೀತಿಯಲ್ಲಿ ಸಹಕಾರಿ ಬಂಧುವಾಗಿ ಮಾರ್ಗದರ್ಶನ ಮಾಡುತ್ತಿದೆ. ಹಡಿಲುಬಿದ್ದ ಭೂಮಿಯಲ್ಲಿ ಇದೀಗ ಹೊಸದಾಗಿ ಒಕ್ಕೂಟ ವತಿಯಿಂದ ಪೂರ್ಣಶ್ರಮದಲ್ಲಿ ಭತ್ತ ಬೆಳೆಸಿ ಹಸಿರಾಗಿಸುವ ರೈತಸ್ನೇಹಿ ಯೋಜನೆ ಆರಂಭಿಸ ಲಾಗಿದೆ.

Advertisement

ಏನಿದು ಯೋಜನೆ?
ಯುವಜನತೆ ಉದ್ಯೋಗ ನಿಮಿತ್ತ ಪರವೂರಿ ನಲ್ಲಿದ್ದರೆ ಕೂಲಿಯಾಳುಗಳ ಸಮಸ್ಯೆ ಹಾಗೂ ವೃದ್ಧಾಪ್ಯದ ಸಮಸ್ಯೆಯಿಂದ ಗದ್ದೆಯಲ್ಲಿ ನಾಟಿ ಮಾಡಲು ಸಾಧ್ಯವಾಗದೇ ಸಾವಿರಾರು ಎಕರೆ ಭತ್ತದ ಗದ್ದೆ ಹಡಿಲು (ಪಾಳು) ಬಿದ್ದಿದೆ. ಇಂತಹ ಗದ್ದೆಯ ಮಾಲಕರು ಒಪ್ಪಿದರೆ ಒಕ್ಕೂಟದ ವತಿಯಿಂದ ಗದ್ದೆ ಹದಗೊಳಿಸಿ, ಉಳುಮೆ ಮಾಡಿ, ಭತ್ತ ಬೆಳೆಸಿಕೊಡಲಾಗುವುದು. ನಿರ್ದಿಷ್ಟ ಮೊತ್ತ ಪಾವತಿಸಿ ಪೂರ್ಣ ಬೆಳೆಯನ್ನು ಭೂಮಾಲಕ ಪಡೆಯುವ ಯೋಜನೆ ಇದಾಗಿದೆ.

ಯಾವುದು ಈ ಒಕ್ಕೂಟ?
ಕಿರಿಮಂಜೇಶ್ವರ ಗ್ರಾಮದ ನಾಗೂರಿನಲ್ಲಿ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಇದೆ. ನಬಾರ್ಡ್‌ನ 9 ಲಕ್ಷ ರೂ. ಅನುದಾನ; ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ನ ಸಿಬಂದಿಯ ಜಂಟಿ ಸಹಭಾಗಿತ್ವದಲ್ಲಿ 2014ರಲ್ಲಿ ಆರಂಭವಾಗಿದ್ದು ರೈತರೇ ರೈತರಿಗಾಗಿ ರೈತರಿ ಗೋಸ್ಕರ ಮುನ್ನಡೆಸಿಕೊಂಡು ಹೋಗುವ ಒಕ್ಕೂಟ. ಕಾರ್ಯಕಾರಿ ಮಂಡಳಿಯಲ್ಲಿ ಭತ್ತದ ಬೆಳೆಗಾರರಿಗಷ್ಟೇ ಆದ್ಯತೆ.ಉದ್ದೇಶ ಭತ್ತದ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ರೈತರನ್ನು ಸಂಘಟಿಸಿ ಅವರಲ್ಲಿ ಉತ್ಸಾಹ ಮೂಡಿಸಿ ಭತ್ತದ ಉತ್ಪಾದನೆ ಹೆಚ್ಚಿಸಿ ಬೆಳೆಗಾರ ರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದೇ ಒಕ್ಕೂಟ ಸ್ಥಾಪನೆಯ ಉದ್ದೇಶ. ಸಂಸ್ಕರಣೆ , ದಾಸ್ತಾನಿಗೆ ವ್ಯವಸ್ಥೆ ಮಾಡಿ, ರೈತರಿಗೆ ಅನುಕೂಲ ಮಾಡಿ ಕೊಡುವುದರ ಜತೆಗೆ ಆರ್ಥಿಕ ಸಹಕಾರ, ಆಧುನಿಕ ಯಾಂತ್ರೀಕರಣ, ತಾಂತ್ರಿಕ ಮಾಹಿತಿ ಯನ್ನೂ ನೀಡಲಾಗುತ್ತಿದೆ.

ಕಾರ್ಯವೈಖರಿ
ಭತ್ತದ ಗದ್ದೆ ಗುರುತಿಸುವುದು, ರೈತರನ್ನು ಪ್ರೋತ್ಸಾಹಿಸುವುದು, ಕಳೆ ತೆಗೆಯುವುದು, ಉಳುವುದು, ನಾಟಿ ಮಾಡುವುದು, ಕಟಾವು ಮಾಡುವ ಯಂತ್ರ ಬಳಕೆ ಕುರಿತು ಮಾಹಿತಿ ಮಾರ್ಗದರ್ಶನ ನೀಡಲಾಗುತ್ತದೆ. ಇದರಿಂದಾಗಿ ಕೂಲಿ ಸಮಸ್ಯೆಯಿಂದ ವಿಮುಖ ರಾಗಿದ್ದ ಬೆಳೆಗಾರರು ಈಗ ಭತ್ತದ ಬೆಳೆಯ ಕಡೆ ಮುಖ ಮಾಡಿದ್ದಾರೆ. ಉಚಿತವಾಗಿ ಮಣ್ಣು ಪರೀಕ್ಷೆ ಮಾಡಿ ಪ್ರಮಾಣಪತ್ರ ನೀಡಲಾಗುತ್ತದೆ. ಸಾಗಾಟ ವೆಚ್ಚ ಇಲ್ಲದೇ ಮನೆ ಬಾಗಿಲಿಗೆ ಹೋಗಿ ಬೆಳೆಯನ್ನು ಮಿಲ್ಲಿನ ದರದಲ್ಲಿ ಖರೀದಿಸ ಲಾಗುತ್ತದೆ. ಗುಣಮಟ್ಟದ ಅಕ್ಕಿ ತಯಾರಿಸಿ ರೈತರಿಗೆ ಮಾರುಕಟ್ಟೆ ಮಾಡಿಕೊಡಲಾಗಿದೆ. ಕುಂದಾಪುರ ನಗರ, ಬೈಂದೂರು ನಗರದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಅಕ್ಕಿ ವಿತರಿಸಲಾಗುತ್ತದೆ. ರೈತರಿಗೆ ಅಧ್ಯಯನ ಪ್ರವಾಸ, ಪ್ರಾತ್ಯಕ್ಷಿಕೆ, ಗ್ರಾಹಕ ಮಾರಾಟಗಾರರ ಸಮಾವೇಶ, ಸರಕಾರಿ ಇಲಾಖೆಗಳ ಸೌಲಭ್ಯ ಒದಗಿಸುವ ಮೂಲಕ ನೆರವಾಗುತ್ತಿದೆ.

ಅಂಕಿಅಂಶ
1,011 ಸದಸ್ಯರಿದ್ದು ಕಳೆದ ವರ್ಷವರೆಗೆ 1,320 ಎಕರೆಯಲ್ಲಿ ಶ್ರೀಪದ್ಧತಿಯಲ್ಲಿ ಭತ್ತ ಬೆಳೆಯಲಾಗಿದೆ. ಹೆಚ್ಚುವರಿಯಾಗಿ 42 ಎಕರೆ ಸೇರ್ಪಡೆಯಾಗಿತ್ತು. ಈ ವರ್ಷ 640 ಎಕರೆಯಲ್ಲಿ ಶ್ರೀಪದ್ಧತಿ ಬೆಳೆದಿದ್ದು ಬೆಳೆಗಾರರ ಅತಿ ಉತ್ಸಾಹಕ್ಕೆ ಉದಾಹರಣೆಯಾಗಿದೆ. ಕಳೆದ ವರ್ಷ 462 ರೈತರ ಗದ್ದೆಯ ಮಣ್ಣು ಪರೀಕ್ಷೆ ಮಾಡಲಾಗಿದ್ದು ಈ ವರ್ಷ 150 ಮಂದಿಯ ಮಣ್ಣು ಪರೀಕ್ಷೆ ಕೋಲಾರದ ಆರ್‌ಸಿಎಫ್‌ ಸಂಸ್ಥೆಯಿಂದ ಉಚಿತವಾಗಿ ಮಾಡಿಸಲಾಗಿದೆ. 413 ಎಕರೆ ಪ್ರದೇಶದಲ್ಲಿ ಯಂತ್ರನಾಟಿ ಮಾಡಲಾಗಿದ್ದು ರೈತರಿಂದ 220 ಟನ್‌ ಭತ್ತ ಖರೀದಿಸಲಾಗಿದೆ. 62 ಟನ್‌ ಅಕ್ಕಿಯನ್ನು ಮಾರುಕಟ್ಟೆಗೆ ನೀಡಲಾಗಿದೆ. 215 ಟನ್‌ ರಸಗೊಬ್ಬರ ಇತ್ಯಾದಿ ಕೃಷಿ ಬಳಕೆಗೆ ನೀಡಲಾಗಿದೆ. ಈ ವರ್ಷ ಕೃಷಿ ಇಲಾಖೆ ಅಂಕಿಅಂಶಗಳ ಪ್ರಕಾರ ಕುಂದಾಪುರ ತಾಲೂಕಿನಲ್ಲಿ 9,525 ಹೆಕ್ಟೇರ್‌ ಭತ್ತ ಬೆಳೆಯಲಾಗಿದೆ. ಕೃಷಿ ಯಂತ್ರೋಪಕರಣಗಳನ್ನು ರಾಜ್ಯ ಸರಕಾರ ಹಾಗೂ ಯೋಜನೆಯ ಸಿಎಚ್‌ಎಸ್‌ಸಿ ಕೇಂದ್ರದ ಮೂಲಕ ನೀಡಲಾಗುತ್ತಿದೆ ಎನ್ನುತ್ತಾರೆ ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ ಸಂತೋಷ್‌ ನಾಯ್ಕ.

Advertisement

ಆಸಕ್ತಿ ಹೆಚ್ಚಿದೆ
ಒಕ್ಕೂಟವು ಕಳೆದ 5 ವರ್ಷಗಳಿಂದ ಗ್ರಾಮ ಮಟ್ಟದಲ್ಲಿ ಭತ್ತದ ಕೃಷಿಗೆ ಉತ್ತೇಜನ ನೀಡುತ್ತಿದ್ದು ರೈತರಿಗೆ ಭತ್ತ ಕೃಷಿಯಲ್ಲಿ ಆಸಕ್ತಿ ಮೂಡಿದೆ.
-ಚಂದ್ರ ಪೂಜಾರಿ, ಅಧ್ಯಕ್ಷರು, ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ

ಹೊಸ ಯೋಜನೆ
ಒಕ್ಕೂಟವು ರೈತರಿಗೆ ಆಧುನಿಕ ಕೃಷಿ ಉಪಕರಣಗಳ ಬಳಕೆಯ ಮಾಹಿತಿ, ಸಿಎಚ್‌ಎಸ್‌ಸಿ ಮೂಲಕ ಬಾಡಿಗೆಗೆ ಯಂತ್ರ ಪೂರೈಕೆ ಮಾಡುತ್ತದೆ. ಈಗ ಹೊಸದಾಗಿ ಹಡಿಲುಬಿದ್ದ ಭೂಮಿಯಲ್ಲಿ ಒಕ್ಕೂಟದ ವತಿಯಿಂದ ಕೃಷಿ ಮಾಡಲಾಗುತ್ತಿದೆ.
-ಸಂತೋಷ್‌ ನಾಯ್ಕ, ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ

ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ
ಒಕ್ಕೂಟದ ಮಾರ್ಗದರ್ಶನದೊಂದಿಗೆ ನಾವು ಯಂತ್ರನಾಟಿ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವಂತಾಗಿದೆ.
-ಚೇತನ್‌ ಕುಮಾರ್‌ ಕೊಡೇರಿ,
ಯುವ ಕೃಷಿಕರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next