Advertisement

ಕಾಯಕಲ್ಪ ರೂಪಿಸಲು ಯೋಜನೆ

05:12 PM Jul 04, 2020 | Suhan S |

ಕಾರವಾರ: ಜಿಲ್ಲಾ ಕೇಂದ್ರ ಕಾರವಾರ ನಗರಕ್ಕೆ ಕಾಯಕಲ್ಪ ಕಲ್ಪಿಸಲು ಪಾರ್ಕಿಂಗ್‌ ವ್ಯವಸ್ಥೆ ರೂಪಿಸಿ ಜನರ ಮುಂದೆ ಇಡಲಾಗಿದೆ. ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ಇನ್ನೂ ಉತ್ತಮ ಸಲಹೆಗಳಿದ್ದರೆ 7 ದಿನಗಳಲ್ಲಿ ನೀಡಬಹುದು ಎಂದು ಕಾರವಾರ ಉಪ ವಿಭಾಗದ ಸಹಾಯಕ ಕಮಿಷನರ್‌ ಪ್ರಿಯಂಕಾ ಎಂ. ಹೇಳಿದರು.

Advertisement

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೈಸೂರು ಬಿಟ್ಟರೆ, ಕಾರವಾರದಲ್ಲಿ ಅತ್ಯಂತ ಅಗಲವಾದ ರಸ್ತೆಗಳಿವೆ. ಇದೊಂದು ಮಾದರಿ ನಗರ. ಅದನ್ನು ವ್ಯವಸ್ಥಿತವಾಗಿ ಬಳಸಲು ಸಾರ್ವಜನಿಕರು ಮುಂದೆ ಬರಬೇಕು ಎಂದರು. ಕಾರವಾರದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 80 ಲಕ್ಷ ರೂ. ವ್ಯಯಿಸಿ ಕೋಣೆನಾಲದ ಹೂಳು ಸೇರಿದಂತೆ ನಗರದ ಬಹುತೇಕ ವಾರ್ಡ್‌ಗಳ ಚರಂಡಿ ಹೂಳೆತ್ತಲಾಗಿದೆ. ಅತ್ಯಂತ ತುರ್ತು ಕೆಲಸ ಮಾಡಲಾಗಿದೆ ಎಂದರು.

ನಗರದ ಬೀದಿ ದೀಪಗಳ ವಿದ್ಯುತ್‌ ವೆಚ್ಚ ಹಾಗೂ ನಿರ್ವಹಣೆ ಪ್ರತಿ ತಿಂಗಳು 30 ಲಕ್ಷ ರೂ ಬರುತ್ತಿದೆ. ಕುಡಿಯುವ ನೀರಿನ ತೆರಿಗೆ 6 ಲಕ್ಷ ರೂ. ಸಂಗ್ರಹವಾದರೆ, ಖರ್ಚು 9 ಲಕ್ಷ ರೂ. ಬರುತ್ತಿದೆ ಎಂದು ವಿವರಿಸಿದರು. ನಗರಸಭೆ ಸರ್ಕಾರದ ಅನುದಾನವಿಲ್ಲದೇ 3 ತಿಂಗಳು ಸ್ವಯಂ ನಿರ್ವಹಣೆ ಮಾಡುವಷ್ಟು ಪ್ರಬಲವಾಗಿದೆ. ಆದರೆ ಇಡೀ ವರ್ಷ ತನ್ನ ಕಾಲಮೇಲೆ ತಾನು ನಿಲ್ಲುವಷ್ಟು ಸಬಲವಾಗಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಅನುದಾನದ ಅಗತ್ಯವಿದೆ ಎಂದರು.

ತೆರಿಗೆ ವಸೂಲಿಯಲ್ಲಿ ಸಾಧನೆ ಮಾಡಲಾಗಿದೆ. ಆದರೆ ಸುಸ್ಥಿರ ವಾಗಬೇಕಾದರೆ ಪಾರ್ಕಿಂಗ್‌ ವ್ಯವಸ್ಥೆ ರೂಪಿಸಿ ಬರುವ ದಿನಗಳಲ್ಲಿ ಶುಲ್ಕವನ್ನು ಆಕರಿಸುವ ಬಗ್ಗೆ ಯೋಚಿಸಬಹುದು ಎಂದರು. ನಗರದಲ್ಲಿ 10 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಟೆಂಡರ್‌ ಕರೆದು ಕೆಲಸ ಪ್ರಾರಂಭವಾಗುವ ಹಂತದಲ್ಲಿ ಕೋವಿಡ್‌ ಕಾಲಿಟ್ಟಿತು. ಕಾರ್ಮಿಕರ ಕೊರತೆ ಒಂದೆಡೆಯಾದರೆ, ಕೆಲವು ಕಾಮಗಾರಿ ಮಾಡಲು ಗುತ್ತಿಗೆದಾರರು ಸಹ ಹಿಂದೇಟು ಹಾಕಿದರು. ಸರ್ಕಾರದಿಂದ ಸಹ ಅನುದಾನ ಬರುವುದು ನಿಂತು ಹೋಗಿದೆ. ಮಳೆಗಾಲದ ನಂತರ ಅನುದಾನ ಬಂದರೆ ಯೋಜಿಸಿದ 63 ಕಾಮಗಾರಿಗಳು ಆಗಲಿವೆ ಎಂದು ನಗರಸಭೆ ಮುಖ್ಯ ಎಂಜಿನಿಯರ್‌ ಆರ್‌.ಪಿ. ನಾಯ್ಕ ಹೇಳಿದರು.

ನಗರಸಭೆ ಆಸ್ತಿಗಳನ್ನು ಮರಳಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಅತಿಕ್ರಮಣ ತೆರವು ಮಾಡುವ ಯೋಚನೆ ಸಹ ಇದೆ. ಅತ್ಯುತ್ತಮ ಮೀನು ಮಾರುಕಟ್ಟೆ ನಿರ್ಮಾಣ ಮುಗಿದಿದೆ. ನಗರದಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ಹರಣಕ್ಕೆ ಟೆಂಡರ್‌ ಕರೆಯಲಾಗಿದೆ. ನಾಸಿಕ್‌ ಸಂಸ್ಥೆಯವರಿಗೆ ಟೆಂಡರ್‌ ಆಗಿದೆ. ಕೋವಿಡ್‌ ಕಾರಣ ಅವರು ಬಂದಿಲ್ಲ. ಒಂದು ನಾಯಿಯ ಸಂತಾನ ಶಕ್ತಿ ಹರಣಕ್ಕೆ 1200 ರೂ.ವೆಚ್ಚವಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next