ಹೊಸನಗರ: ಹಲವು ವರಗಳಿಂದ ನನೆಗುದಿಗೆ ಬಿದ್ದಿರುವ ಈ ಭಾಗದ ಮುಳುಗಡೆ ಸಂತ್ರಸ್ಥರ ಸಮಸ್ಯೆ ನಿವಾರಣೆ ಮಾಡುವುದು ಜೆಡಿಎಸ್ ಪಕ್ಷದ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ತಾಲೂಕಿನ ಬಿದನೂರು ನಗರದಲ್ಲಿ ನಡೆದ ಜೆಡಿಎಸ್ ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ ಪರ ಮತ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೈಗೊಂಡ 4 ಜಲವಿದ್ಯುತ್ ಯೋಜನೆಯಿಂದಾಗಿ ಭೂಮಿ ಕಳೆದುಕೊಂಡ ರೈತರು ಇನ್ನೂ ನರಕ ಸದೃಶ ಜೀವನ ನಡೆಸುತ್ತಿದ್ದಾರೆ. ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಉದ್ಯೋಗ, ಪರಿಹಾರ ಸಿಕ್ಕಿಲ್ಲ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆ ನಿವಾರಣೆಗೆ ಸಮಗ್ರ ಯೋಜನೆ ಜಾರಿಗೆ ತರಲಾಗುವುದು ಎಂದರು.
ರೈತರ ಸಾಲ ಮನ್ನಾ: ರೈತರು ಸಾಲ ಬಾಧೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ರೈತ ಸಾಲ ಮಾಡದಂತೆ ಸಮಗ್ರ ಯೋಜನೆ ಜಾರಿ ಆಗಬೇಕಾದ ಅವಶ್ಯಕತೆ ಇದೆ. ಇದನ್ನು ಅರಿತ ನಾವು ರೈತರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದೇವೆ. ಈ ಸೂಕ್ಷ್ಮಅರಿತ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರೈತರ, ಸ್ತ್ರೀ ಶಕ್ತಿ ಸಂಘದ ಸದಸ್ಯರ ಸಾಲ ಮನ್ನಾ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದೆ. ಅಂದು ಅಧಿಕಾರ ಇದ್ದಾಗ ರೈತರ ಸಮಸ್ಯೆ ಆಲಿಸದ ಬಿಜೆಪಿ ಇಂದು ರೈತರ ಸಂಕಷ್ಟವನ್ನು ಗುತ್ತಿಗೆ ಪಡೆದವರಂತೆ ನಾಟಕ ಆಡುತ್ತಿದೆ ಎಂದರು.
ಲೂಟಿಯಲ್ಲಿ ಪೈಪೋಟಿ: ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿ ಸಮಾನವಾಗಿ ರಾಜ್ಯದ ಬೊಕ್ಕಸ ಲೂಟಿ ನಡೆಸಿದೆ. ಜನರ ತೆರಿಗೆ ಹಣವನ್ನು ಪೈಪೋಟಿಗೆ ಬಿದ್ದವರಂತೆ ಕೊಳ್ಳೆ ಹೊಡೆಯಲು ಅಂದಾಜು ಹಾಕಿರುವ ಈ ಪಕ್ಷಗಳು ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದರು.
ನಾನು ಏಕಾಂಗಿ: ನಮ್ಮ ಪಕ್ಷದಲ್ಲಿ ನಾನು ಏಕಾಂಗಿ ನಾಯಕ. ಎಲ್ಲ ಕ್ಷೇತ್ರದಲ್ಲಿಯೂ ನನ್ನನ್ನು ಕರೆಯುತ್ತಾರೆ. ದಿನಕ್ಕೆ 9-10 ಕಾರ್ಯಕ್ರಮ ಭಾಗವಹಿಸುತ್ತೇನೆ. ನಮ್ಮಲ್ಲಿ ಚಿತ್ರ ನಟರಿಲ್ಲ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬರುತ್ತಿಲ್ಲ. ನಾನೋಬ್ಬನೇ ರಾಜ್ಯ ಸುತ್ತುತ್ತಿದ್ದೇನೆ ಎಂದರು.
ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ ಮಾತನಾಡಿ, ಯುವ ಸಮುದಾಯ ಜೆಡಿಎಸ್ ಪರವಾಗಿದೆ. ನಗರ ಹೋಬಳಿ ಪಕ್ಷದ
ಭದ್ರಕೋಟೆಯಾಗಿದೆ. ಎಚ್.ಡಿ. ಕುಮಾರಸ್ವಾಮಿ ನಾಯಕತ್ವ ಮೆಚ್ಚಿದ ಮತದಾರ ನಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸೊರಬ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ, ಸಾಗರ ಅಭ್ಯರ್ಥಿ ಗಿರೀಶ ಗೌಡ, ಶಿಮೂಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾದರ್, ಪ್ರಮುಖರಾದ ವಾಟಗೋಡು ಸುರೇಶ್, ಶ್ರೀಕಾಂತ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸುಮಾ, ಹಾಲಗದ್ದೆ ಉಮೇಶ್, ಅಮೀರ್ ಹಂಜಾ ಮತ್ತಿತರರು ಇದ್ದರು.