Advertisement

ಪ್ರಾಚೀನ ಸಾಹಿತ್ಯ ತಲುಪಿಸಲು ಯೋಜನೆ

03:38 PM Nov 01, 2020 | Suhan S |

ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಸಿಗಬೇಕು ಎಂಬ ಕನ್ನಡಿಗರ ಬಹುದಿನಗಳ ಕೂಗಿಗೆ ಮೊದಲ ಭಾಗವಾಗಿ ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಶನಿವಾರದಿಂದ ನೆಲೆ ಕಂಡುಕೊಳ್ಳುವ ಹರ್ಷ ಒಂದೆಡೆ ಯಾದರೆ, ಹತ್ತು ಹಲವು ಹೊಸ ಯೋಜನೆ ಮೂಲಕ ಕೇಂದ್ರ ಮತ್ತಷ್ಟು ವಿಸ್ತರಿಸಿಕೊಳ್ಳಲಿದೆ.

Advertisement

ಹೌದು, ಕೇಂದ್ರದ ನೂತನ ಯೋಜನಾ ನಿರ್ದೇಶಕರ ನೇಮಕದ ನಂತರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸಾಹಿತ್ಯ, ಭಾಷೆ, ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಒಂದಷ್ಟು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಲು ಹಲವು ಯೋಜನೆ ಸಿದ್ಧಪಡಿಸಲಾಗಿದ್ದು, ಕರ್ನಾಟಕವನ್ನು ಭೌಗೋಳಿಕ ನಕಾಶೆಯಿಂದಾಚೆಗೆ ಸಾಂಸ್ಕೃತಿಕ ಎಲ್ಲೆಯಾಗಿಯೂ ರೂಪಿಸುವ ಮಹೋನ್ನತ ಕನಸನ್ನು ಕಟ್ಟಿಕೊಳ್ಳಲಾಗಿದೆ.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು 12 ವರ್ಷಗಳಾಗಿದ್ದರೂ ಸ್ವಂತ ನೆಲೆ ಕಂಡುಕೊಳ್ಳದೆ ಅಸಹಾಯಕ ಸ್ಥಿತಿ  ಯಲ್ಲಿದ್ದ ಕೇಂದ್ರ ಸದ್ಯಕ್ಕೆ ಹೊಸ ಯೋಜನೆ ಮೂಲಕ ಗರಬಿಚ್ಚಿಕೊಂಡಿದೆ. ಹಳೆಯ ಯೋಜನೆಗಳನ್ನು ಮುಂದುವರಿಸುತ್ತಾ ಪ್ರಾಚೀನ ಸಾಹಿತ್ಯವನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸಕ್ಕೆ ಸಜ್ಜಾಗಿದ್ದು, ಇದಕ್ಕಾಗಿ ಕಮ್ಮಟ, ಶಿಬಿರ, ಕಾರ್ಯಾಗಾರಗಳನ್ನು ಹೆಚ್ಚು ಹೆಚ್ಚು ನಡೆಸಲು ಉದ್ದೇಶಿಸಲಾಗಿದೆ.

ಈಗಾಗಲೆ ಹಳೆಯ ಆಕರ ಗ್ರಂಥಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಇದರ ಜೊತೆಗೆ ಕನ್ನಡ ಕೃತಿಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರ ಮಾಡಲಾಗುತ್ತಿದೆ. ಪ್ರಾಚೀನ ಕನ್ನಡ, ಹಳೆಗನ್ನಡ ಎಂಬುದು ವಿದ್ವತ್‌ ಪರಂಪರೆಯಾಗಿ ಉಳಿದಿದ್ದು, ಇದನ್ನು ಜನ ಪರಂಪರೆಯನ್ನಾಗಿ ಮಾಡುವತ್ತ ಚಿಂತಿಸಲಾಗಿದೆ. ಹೊಸ ತಲೆಮಾರಿಗೆ ಪ್ರಾಚೀನ ಸಾಹಿತ್ಯವನ್ನು ದಾಟಿಸಲು ರೆಡಿಯೋ, ದೂರದರ್ಶನ ಮತ್ತು ಪತ್ರಿಕೆಗಳನ್ನು ಬಳಸಿಕೊಂಡು ಹಳೆಗನ್ನಡ ಎಂಬುದು ಓದುವ ಮತ್ತು ಅಕ್ಷರದ ಭಾಷೆಯಷ್ಟೇ ಅಲ್ಲ ಮಾತನಾಡುವ ಭಾಷೆಯೂ ಹೌದು ಎಂಬುದನ್ನು ಮನವರಿಕೆ ಮಾಡಿಕೊಡುವುದು ಇದರ ಉದ್ದೇಶವಾಗಿದೆ.

ಕನ್ನಡ ಸಾಹಿತ್ಯವನ್ನು ಸಾಹಿತ್ಯವನ್ನಾಗಿ ನೋಡುವುದಷ್ಟೇ ಅಲ್ಲದೇ ಸಾಹಿತ್ಯದಲ್ಲಿ ಅಡಕವಾಗಿರುವ ಜ್ಞಾನ, ಕಲೆ ಹಾಗೂ ಸಂಸ್ಕೃತಿಯ ಪರಂಪರೆಯನ್ನು ಪುನರಚನೆ ಮಾಡಿ ಹೊಸ ಆಯಾಮ ನೀಡುವುದು ಮತ್ತು ದಾಖಲೀಕರಣ ಮಾಡಲು  ಕೇಂದ್ರ ಚಿಂತನೆ ನಡೆಸಿದೆ. ಜೊತೆಗೆ 30 ಜಿಲ್ಲೆಯಲ್ಲಿನ ಪ್ರಾದೇಶಿಕ ಭಾಷೆ, ಜೀವನ ಕ್ರಮ, ಸಂಸ್ಕೃತಿ, ಕಲೆ ಗುರುತಿಸಿ ಭೌಗೋಳಿಕ ಗಡಿಯಿಂದಾಚೆಗೆ ಸಾಂಸ್ಕೃತಿಕ ನಕಾಶೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಒಟ್ಟಾರೆ ಪ್ರಾಚೀನ ಸಾಹಿತ್ಯ, ಹಳಗನ್ನಡ ಹಾಗೂ ನಡುಗನ್ನಡದಲ್ಲಿರುವ ಸಾಹಿತ್ಯ ಮರು ಓದಿಗೆ ವೇದಿಕೆ ಸೃಷ್ಟಿಸಲು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಅಡಿಪಾಯ ಹಾಕುತ್ತಿರುವುದು ಕನ್ನಡಿಗರಲ್ಲಿ ಹೊಸ ಭರವಸೆ ಮೂಡಿಸಿದೆ.

Advertisement

ಅನುಭವ ಮಂಟಪ :  ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಂಗ್ರಹಿಸಿದ ಹಸ್ತಪ್ರತಿ, ಶಾಸನ, ತಾಳೆಗರಿಯನ್ನು ಓದಿ, ತಿಳಿಯುವುದಕ್ಕಾಗಿ ಅನುಭವ ಮಂಟಪ ಕಾರ್ಯಕ್ರಮದ ಮೂಲಕ ವಿಶೇಷ ಕಾರ್ಯಾಗಾರ, ಚರ್ಚೆ ಹಾಗೂ ಗೋಷ್ಠಿ ಏರ್ಪಡಿಸಲು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಚಿಂತನೆ ನಡೆಸಿದೆ.

ವಿದ್ವಾಂಸರ ಕುರಿತು ಸಾಕ್ಷ್ಯಚಿತ್ರ :  ಕನ್ನಡ ನೆಲದಲ್ಲಿ ಮುನ್ನೆಲೆಗೆ ಬಾರದೇ ಅದೆಷ್ಟೋ ಮಂದಿ ಸಾಹಿತಿಗಳು, ಬರಹಗಾರರು ಕಣ್ಮರೆಯಾಗಿದ್ದಾರೆ. ಅದಕ್ಕಾಗಿ ಕನ್ನಡ ವಿದ್ವಾಂಸರ ಕುರಿತು ಸಾಕ್ಷ್ಯಚಿತ್ರ ಮಾಡಿ ದಾಖಲೀ ಕರಣ ಮಾಡುವುದು ಮತ್ತು ವಿದ್ವಾಂಸರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಚಿಂತಿಸಲಾಗಿದೆ.

ಕನ್ನಡ ಜಂಗಮ :  ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಹಲವು ಭಾಗಗಳಲ್ಲಿ ಹುದುಗಿರುವ ಹಸ್ತಪ್ರತಿ, ಶಾಸನ, ವಿಶೇಷ ಕೆತ್ತನೆಗಳನ್ನು ಸಂಗ್ರಹ ಮಾಡುವ ಸಲುವಾಗಿ ಕನ್ನಡ ಜಂಗಮ ಎಂಬ ಯೋಜನೆ ಸಿದ್ಧಪಡಿಸಿ ಶೈಕ್ಷಣಿಕ ಸಿಬ್ಬಂದಿಯನ್ನು ನೇಮಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಬೆಳಕಿಗೆ ಬಾರದ ಸಂಗತಿಗಳನ್ನು ದಾಖಲಿಸುವುದು ಮತ್ತು ಹೊಸ ತಲೆಮಾರಿಗೆ ದಾಟಿಸುವ ಕೆಲಸ ಮಾಡುವುದಾಗಿದೆ.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಈವರೆಗೆ ಸಾಕಷ್ಟು ಕೆಲಸಗಳು ಆಗಿವೆ. ಆದರೆ ಇದ್ಯಾವುದು ಡಾಕ್ಯುಮೆಂಟ್‌ ಆಗಿಲ್ಲ. ಅದನ್ನು ಕ್ರೋಢೀಕರಿಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಪ್ರಯತ್ನ ನಡೆಯುತ್ತಿದೆ. ನಾನು ಹಾಗೂ ನಿರ್ದೇಶಕರು ಈಗಷ್ಟೇ ಅಧಿಕಾರಕ್ಕೆ ಬಂದಿದ್ದು, ಹತ್ತು ಹಲವು ಯೋಜನೆ ರೂಪಿಸಿದ್ದೇವೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕೆಲ ಹಾಗೂ ಪರಂಪರೆಗೆ ಕೇಂದ್ರ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದೆ.  -ಪ್ರೊ.ಬಿ.ಶಿವರಾಮ ಶೆಟ್ಟಿ, ಯೋಜನಾ ನಿರ್ದೇಶಕ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next