ಮಹಾನಗರ, ಸೆ. 26: ದ.ಕ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಾರ್ಯೋನ್ಮುಖವಾಗಿದೆ. ಆಯ್ದ ಸ್ಥಳಗಳಲ್ಲಿ ಜಿಲ್ಲೆಯ ಸಮಗ್ರ ಸಂಸ್ಕೃತಿಯನ್ನು ಬಿಂಬಿಸುವ ಹೋರ್ಡಿಂಗ್‌ಗಳು, ಪ್ರವಾಸಿ ತಾಣಗಳನ್ನು ಸೂಚಿಸುವ ಸೈನೇಜ್‌ಗಳ ಅಳವಡಿಕೆ 12 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿದೆ.
ಇಲ್ಲಿ ಪ್ರವಾಸೋದ್ಯಮದ ಮುಖ್ಯ ಆಕ ರ್ಷಣೆ ಬೀಚ್, ಧಾರ್ಮಿಕ ಕ್ಷೇತ್ರಗಳು. ಐದು ಬೀಚ್‌ಗಳನ್ನು ಹೊಂದಿರುವ ಇಲ್ಲಿ ಬೀಚ್ ಪ್ರವಾಸೋದ್ಯಮಕ್ಕೆ ಆಕರ್ಷಿಸಲು ಸೈನೇಜ್‌ಗಳ ಅಳವಡಿಕೆ ನಡೆಯುತ್ತಿದೆ. ಧಾರ್ಮಿಕ ಪ್ರವಾಸೋದ್ಯಮ ಉತ್ತೇಜನ ದಲ್ಲಿಯೂ ಇವು ಪ್ರಾಮುಖ್ಯ ಪಡೆಯಲಿವೆ. ಪಣಂಬೂರು ಬೀಚ್ ಬಳಿ, ಕೆಐಒಸಿಎಲ್ ಜಂಕ್ಷನ್ ಬಳಿ, ಸಂಕೊಳಿಗೆಯಿಂದ ಉಚ್ಚಿಲಕ್ಕೆ ತಿರುಗುವ ರಸ್ತೆ ಜಂಕ್ಷನ್ ಬಳಿ, ಮುಕ್ಕಾದಿಂದ ಸಸಿಹಿತ್ಲು ಕಡಲ ತೀರಕ್ಕೆ ತಿರುಗುವ ರಸ್ತೆ ಜಂಕ್ಷನ್ ಬಳಿ ಸೈನೇಜ್ ಅಳವಡಿಕೆಯಾಗಲಿದೆ.
ಧಾರ್ಮಿಕ ಪ್ರವಾಸೋದ್ಯಮಕ್ಕೆ ಸೈನೇಜ್ :
ಪಿಲಿಕುಳ, ಮೂಡುಬಿದಿರೆ ಬಸದಿ, ಪೊಳಲಿ ದೇಗುಲಗಳ ದೂರ, ವೈಶಿಷ್ಟ್ಯದ ಬಗ್ಗೆ ವಾಮಂಜೂರು ಜಂಕ್ಷನ್‌ನಲ್ಲಿ, ಕಟೀಲು ದೇವಸ್ಥಾನ, ಹೊರನಾಡು, ಬೆಳುವಾಯಿಯ ಸಮ್ಮಿಲನ ಬಟರ್ ಫ್ಲೈ ಪಾರ್ಕ್, ನೆಲ್ಲಿತೀರ್ಥಗಳ ಬಗ್ಗೆ ಮೂರು ಕಾವೇರಿ ಜಂಕ್ಷನ್‌ನಲ್ಲಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಬಗ್ಗೆ ನೆಲ್ಯಾಡಿ ಪೆರಿಯಶಾಂತಿ ರಸ್ತೆಯಲ್ಲಿ ಹಾಗೂ ಗುಂಡ್ಯ ಜಂಕ್ಷನ್‌ನಲ್ಲಿ, ಮೂಡುಬಿದಿರೆ ಬಸದಿ, ವೇಣೂರು ಬಾಹುಬಲಿ ಬಸದಿ, ಶ್ರೀ ಕ್ಷೇತ್ರ ಧರ್ಮಸ್ಥಳಗಳ ಬಗ್ಗೆ ಮೂಡುಬಿದಿರೆ ಸಾವಿರ ಕಂಬದ ಬಸದಿ ಬಳಿ ಸೈನೇಜ್ ಅಳವಡಿಕೆಯಾಗಲಿದೆ.
ಐದು ಕಡೆ ಸುರಕ್ಷತೆ ಸೈನೇಜ್ : ಪ್ರವಾಸಿಗರಿಗೆ ಸುರಕ್ಷೆಯ ಎಚ್ಚರಿಕೆ ನೀಡಲು ಐದು ಬೀಚ್‌ಗಳ ಸನಿಹದಲ್ಲಿ ಸುರಕ್ಷ ಸೈನೇಜ್ ಅಳವಡಿಕೆಯಾಗಲಿದೆ. ಬೀಚ್‌ಗಿಳಿಯುವ ಸಂದರ್ಭ ಮತ್ತು ಸ್ನಾನ ಮಾಡುವಾಗ ಅನುಸರಿಸಬೇಕಾದ ನಿಯಮ, ಆಳಕ್ಕಿಳಿಯದಂತೆ ಸೂಚನೆ, ಮಳೆಗಾಲದ ಮುನ್ನೆಚ್ಚರಿಕೆ ಇದರಲ್ಲಿ ಇರಲಿದೆ.
12 ಲಕ್ಷ ರೂ. ವೆಚ್ಚದಲ್ಲಿ ಹೋರ್ಡಿಂಗ್ಸ್ ಸೈನೇಜ್ ಅಳವಡಿಕೆ ನಡೆಯುತ್ತಿದೆ. ಸೈನೇಜ್ ಅಳವಡಿಕೆ ಮುಂದಿನ 15 ದಿನಗಳೊಳಗೆ ಮುಗಿಯಬಹುದು.
-ಸುಧೀರ್ ಗೌಡ, ದ.ಕ. ಪ್ರವಾಸೋದ್ಯಮ ಇಲಾಖೆ ಸಮಾಲೋಚಕ
-ವಿಶೇಷ ವರದಿ