Advertisement

ಅಸಂಘಟಿತ ಕಾರ್ಮಿಕರ ನೆರವಿಗೆ ಯೋಜನೆ ಜಾರಿ

09:28 PM Dec 31, 2019 | Lakshmi GovindaRaj |

ಚಾಮರಾಜನಗರ: ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವೃದ್ಧಾಪ್ಯದ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್‌ ಎಂಬ ಮಹತ್ವಾಕಾಂಕ್ಷಿ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ.

Advertisement

ಜಿಲ್ಲೆಯಲ್ಲಿ ಸ್ವ-ಸಹಾಯ ಸಂಘದ ಸದಸ್ಯರು, ಕೃಷಿ ಕಾರ್ಮಿಕರು, ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕಾರ್ಮಿಕರು, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಇಟ್ಟಿಗೆ ಗೂಡು ಗೃಹ ಕಾರ್ಮಿಕರು, ಮೀನುಗಾರರು, ವ್ಯಾಪಾರಿಗಳು ಯೋಜನೆಯಡಿ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಯೋಜನೆ ಜಾರಿಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಈ ಉಪಯೋಗಿ ಯೋಜನೆಗಳ ಬಗ್ಗೆ ಜಿಲ್ಲೆಯ ಅಧಿಕಾರಿಗಳು ವ್ಯಾಪಕವಾಗಿ ಪ್ರಚಾರ ಕೈಗೊಂಡು ಕಾರ್ಮಿಕರು, ವ್ಯಾಪಾರಿಗಳು ಸ್ವಯಂ ಉದ್ಯೋಗಿಗಳು ಇದರ ಪ್ರಯೋಜನ ಪಡೆಯಲು ಅಧಿಕಾರಿಗಳು ವಿಶೇಷ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಮಾನ್‌ಧನ್‌ ಅತ್ಯಂತ ಉಪಯುಕ್ತ: ಜಿಲ್ಲೆಯ ಅಸಂಘಟಿತ ಕಾರ್ಮಿಕರ ಜೀವನ ಸಂಧ್ಯಾ ಕಾಲದಲ್ಲಿ ಪೋಷಿಸಲು ನೆರವಾಗುವ ವಂತಿಕೆ ಆಧಾರಿತ ಪಿಂಚಣಿ ಯೋಜನೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್‌ ಅತ್ಯಂತ ಉಪಯುಕ್ತವಾಗಿದೆ. ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದವರಾಗಿರಬೇಕು. 18ರಿಂದ 40ರ ವಯೋಮಿತಿಯೊಳಗಿರಬೇಕು. ಮಾಸಿಕ ಆದಾಯ 15 ಸಾವಿರ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ, ಇ.ಎಸ್‌.ಐ, ಪಿ.ಎಫ್ ಹಾಗೂ ಎನ್‌.ಪಿ.ಎಸ್‌. ಯೋಜನೆಯ ವ್ಯಾಪ್ತಿಗೊಳಪಟ್ಟಿಬಾರದು.

ಫ‌ಲಾನುಭವಿಗಳು ನೋಂದಾಯಿಸಿಕೊಳ್ಳಿ: ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಕಾಮನ್‌ ಸರ್ವೀಸ್‌ ಸೆಂಟರ್‌ (ಸಿ.ಎಸ್‌.ಸಿ) ಗಳಲ್ಲಿ ಪಿಂಚಣಿ ಯೋಜನೆಗೆ ಫ‌ಲಾನುಭವಿಗಳಾಗಿ ನೋಂದಾಯಿಸಬಹುದಾಗಿದೆ. ಅಲ್ಲದೆ, ಸಿ.ಎಸ್‌.ಸಿ ಗಳ ವಿವರಗಳು ಹತ್ತಿರದ ಎಲ್‌.ಐ.ಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇ.ಎಸ್‌.ಐ, ಕಾರ್ಪೊàರೇಷನ್‌, ಭವಿಷ್ಯ ನಿಧಿ ಸಂಘಟನೆಯ ಕಚೇರಿಗಳು, ಇಲಾಖೆಯ ವೆಬ್‌ ವಿಳಾಸಗಳಲ್ಲಿ ಪಡೆಯಬಹುದಾಗಿದೆ.

Advertisement

ಕಾರ್ಮಿಕರು ಆರಂಭಿಕ ವಂತಿಕೆ ಮೊತ್ತ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ, ಪಾಸ್‌ ಪುಸ್ತಕದಂತಹ ದಾಖಲೆಗಳೊಂದಿಗೆ ಸಾಮಾನ್ಯ ಸೇವಾ ಕೇಂದ್ರಗಳಿಗೆ ಹಾಜರಾಗಿ ನೊಂದಣಿ ಮಾಡಿಸಬಹುದು. ಮೊಬೈಲ್‌, ಹ್ಯಾಂಡ್‌ಸೆಟ್‌ನೊಂದಿಗೆ ನಾಮನಿರ್ದೇಶಿತರ ವಿವರಗಳನ್ನು ತರಬೇಕು. ಆರಂಭಿಕ ವಂತಿಕೆಯನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ. ತದನಂತರ ಮಾಸಿಕ ವಂತಿಕೆಯನ್ನು ಫ‌ಲಾನುಭವಿಗಳ ಖಾತೆಯಿಂದ ಆಟೋ ಡೆಬಿಟ್‌ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ.

60 ವರ್ಷದ ಬಳಿಕ ಮಾಸಿಕ ಪಿಂಚಣಿ: ಯೋಜನೆಯಡಿ ಫ‌ಲಾನುಭವಿಗಳು ಪಾವತಿಸುವ ವಂತಿಕೆಗೆ ಸಮಾನಾಂತರವಾಗಿ ಕೇಂದ್ರ ಸರ್ಕಾರವು ಸಹ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸಲಿದೆ. ಫ‌ಲಾನುಭವಿ 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3 ಸಾವಿರ ರೂ. ಕನಿಷ್ಠ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಲಿದ್ದಾರೆ. ಉದಾಹರಣೆಗೆ 18 ವರ್ಷ ವಯಸ್ಸಿನ ಫ‌ಲಾನುಭವಿ 55 ರೂ.ಗಳ ಮಾಸಿಕ ವಂತಿಕೆಯನ್ನು ಪಾವತಿಸಬೇಕಾಗುತ್ತದೆ.

ಕೇಂದ್ರ ಸರ್ಕಾರವು ಸಹ 55 ರೂ. ಮಾಸಿಕ ವಂತಿಕೆಯನ್ನು ಪಾವತಿಸಲಿದೆ. ಒಟ್ಟಾರೆ 110 ರೂ. ಪಾವತಿಸಿದಂತಾಗುತ್ತದೆ. 60 ವರ್ಷ ಪೂರ್ಣಗೊಂಡ ಬಳಿಕ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಯೋಜನೆಗೆ ನೊಂದಾಯಿಸಿದವರು 10 ವರ್ಷದೊಳಗೆ ಯೋಜನೆಯಿಂದ ಹೊರ ಹೋದಲ್ಲಿ, ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರಿಗಿಸಲಾಗುತ್ತದೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ

ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವುದು ಹೆಚ್ಚಿರುತ್ತದೋ ಅದನ್ನು ಪಾವತಿಸಲಾಗುತ್ತದೆ. ನಿರಂತರವಾಗಿ ವಂತಿಕೆ ಪಾವತಿಸಿ 60 ವರ್ಷದ ಒಳಗೆ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗ ನ್ಯೂನತೆಯಿಂದ ವಂತಿಗೆ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಫ‌ಲಾನುಭವಿಯ ಪತ್ನಿ ಅಥವಾ ಪತಿ ನಂತರ ಈ ಯೋಜನೆಗೆ ಸೇರಬಹುದಾಗಿದ್ದು, ವಂತಿಗೆ ಪಾವತಿಸಿ ಮುಂದುವರೆಯಬಹುದಾಗಿದೆ. ಅಥವಾ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿರುತ್ತಾರೆ.

ಫ‌ಲಾನುಭವಿಗೆ ಕಾಲಕಾಲಕ್ಕೆ ಮಾಹಿತಿ: ಪಿಂಚಣಿ ಆರಂಭಗೊಂಡ ನಂತರ ಫ‌ಲಾನುಭವಿ ಮೃತಪಟ್ಟಲ್ಲಿ ಅವರ ಪತ್ನಿ ಅಥವಾ ಪತಿ ಮಾತ್ರ ಪಿಂಚಣಿಯ ಶೇ.50ರಷ್ಟನ್ನು ಪಡೆಯಬಹುದಾಗಿದೆ. ಯೋಜನೆಯು ವಿದ್ಯುನ್ಮಾನ ಆಧಾರಿತವಾಗಿದ್ದು, ಎಸ್‌.ಎಂ.ಎಸ್‌. ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫ‌ಲಾನುಭವಿಗೆ ಕಾಲಕಾಲಕ್ಕೆ ತಿಳಿಸಲಾಗುತ್ತದೆ. ಪಿಂಚಣಿ ಯೋಜನೆಯ ನೋಂದಣಿ ಹಾಗೂ ವಿವರಗಳಿಗೆ ಸಾಮಾನ್ಯ ಸೇವಾ ಕೇಂದ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಚೇರಿ, ಎಲ್‌.ಐ.ಸಿ ಶಾಖಾ ಕಚೇರಿ, ಇ.ಪಿ.ಎಫ್.ಒ, ಇ.ಎಸ್‌.ಐ.ಸಿ. ಕಚೇರಿಗಳು, ವೆಬ್‌ ವಿಳಾಸ //locator.csccloud.in ಹಾಗೂ www.licindia.in ಶುಲ್ಕ ರಹಿತ ಸಂಖ್ಯೆ 1800-267-6888 ಸಂಪರ್ಕಿಸಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿ ಗೀತಾ ತಿಳಿಸಿದರು.

ಸಾಮಾನ್ಯ ಸೇವಾ ಕೇಂದ್ರಗಳು, ಕಾರ್ಮಿಕ ಇಲಾಖೆ ಇನ್ನಿತರ ಕಡೆ ಫ‌ಲಾನುಭವಿಗಳ ನೋಂದಣಿಗಾಗಿ ಅನುಕೂಲ ಮಾಡಿಕೊಡಲಾಗಿದೆ. ಇಂತಹ ಕೇಂದ್ರಗಳು, ಕಚೇರಿಗಳಲ್ಲಿ ಕಾರ್ಮಿಕರು ವ್ಯಾಪಾರಿಗಳಿಗೆ ಉತ್ತಮ ಸೇವೆ ನೀಡಬೇಕು. ಯೋಜನೆಯ ಪರಿಪೂರ್ಣ ಮಾಹಿತಿ ಒದಗಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಪಿಂಚಣಿ ಯೋಜನೆಯನ್ನು ಅರ್ಹರೆಲ್ಲರೂ ಪಡೆಯುವಂತಾಗಬೇಕು.
-ಬಿ.ಬಿ. ಕಾವೇರಿ, ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಸಂಘಗಳು, ಕಾರ್ಮಿಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳು ಅಸಂಘಟಿತ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಒದಗಿಸುವ ನೂತನ ಮಹತ್ವಾಕಾಂಕ್ಷಿ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಸಲು ಶ್ರಮಿಸಬೇಕು.
-ಕೆ. ಗೀತಾ, ಜಿಲ್ಲಾ ಕಾರ್ಮಿಕ ಹಿರಿಯ ನಿರೀಕ್ಷಕಿ

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next