ಮಡಿಕೇರಿ: ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ಕೇವಲ ಪಠ್ಯ ಕಲಿಕೆಗೆ ಮಾತ್ರ ಸೀಮಿತಗೊಳಿಸದೆ, ಉಜ್ವಲ ಭವಿಷ್ಯದ ಕಡೆ ಯೋಜನೆ ರೂಪಿಸುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೂ ಗಮನಹರಿಸುವುದು ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ರಾಜೇಂದ್ರ ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಆಡಳಿತದಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಹೆಚ್ಚಿನ ಒಲವು ತೋರಬೇಕು ಎಂದರು.
ಕುಡಿದು ವಾಹನ ಚಾಲನೆ ಮಾಡುವುದರಿಂದ ಮನೆಯವರಿಗೆ ಹಾಗೂ ಸಮಾಜಕ್ಕಾಗುವ ನಷ್ಟದ ಕುರಿತು ವಿವರಿಸಿದ ಎಸ್‌ಪಿ ರಾಜೇಂದ್ರ ಪ್ರಸಾದ್, ವರ್ಷಕ್ಕೆ 10 ಸಾವಿರ ಜನ ರಸ್ತೆ ಅಫಘಾತದಿಂದ ಸಾವನ್ನಪ್ಪುತ್ತಿದ್ದು, ಅವರಲ್ಲಿ ಬಹುತೇಕರು ಯುವಕರೇ ಆಗಿದ್ದಾರೆ. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ವಾಹನ ಚಾಲನೆ ಮಾಡುವಾಗ ಎಚ್ಚರದಿಂದ ಚಾಲನೆ ಮಾಡಬೇಕು ಹಾಗೂ ರಸ್ತೆಯಲ್ಲಿ ವೀಲಿಂಗ್ ಸಾಹಸ ಮಾಡದಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ರೋಟರಿ ಗವರ್ನರ್ ರೊಟೇರಿಯನ್ ಸುರೇಶ್ ಚಂಗಪ್ಪ, ವಿದ್ಯಾರ್ಥಿ ಗಳು ನಿರಂತರ ಪ್ರಯತ್ನವನ್ನು ಮುಂದುವರಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದರು. ಯಾವುದೇ ಯಶಸ್ವಿ ಸಾಧಕರು ಒಂದೇ ದಿನದಲ್ಲಿ ಸಾಧನೆ ಮಾಡಿಲ್ಲ, ಬದಲಾಗಿ ಅವರ ಯಶಸ್ಸಿನ ಹಿಂದೆ ವರ್ಷಾನುಗಟ್ಟಲೆ ಪ್ರಯತ್ನವಿದೆ. ಈ ನಿಟ್ಟಿನಲ್ಲಿ ಯಾವುದೇ ಕಾರ್ಯವನ್ನು ಪ್ರಾಮಾಣಿಕವಾಗಿ ಸುಪ್ತ ಮನಸ್ಸಿನಿಂದ ಮಾಡಿದರೆ, ಯಶಸ್ಸು ಕೈಹಿಡಿಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪೊ›ಫೆಸರ್ ಕೆ.ಎಂ. ಲೋಕೇಶ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧಿವಂತಿಕೆಗೆ ಮಾತ್ರ ಪ್ರಾಶಸ್ತÂವಿದ್ದು, ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಕಲಿಕೆಗೆ ವಿನಿಯೋಗಿಸಿ ಪ್ರತಿಭಾವಂತರಾಗಬೇಕು ಮತ್ತು ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಸಾಮರ್ಥ್ಯ ಹಾಗೂ ಸಾಧನೆಯ ವರದಿಯನ್ನು ಪ್ರಾಂಶುಪಾಲೆ ಡಾ| ಪಾರ್ವತಿ ಅಪ್ಪಯ್ಯ ಅವರು ಮಂಡಿಸಿದರು. ಪ್ರಾಧ್ಯಾಪಕ ಡಾ| ಶ್ರೀಧರ ಹೆಗಡೆ, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಉತ್ತಮ ಅಂಕ ಪಡೆದ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾಥಿಗಳಿಗೆ ಇದೇ ಸಂದರ್ಭ ಪ್ರಶಸ್ತಿ ವಿತರಿಸಲಾಯಿತು. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ಎನ್‌ಸಿಸಿ ಕೆಡೆಟ್‌ಗಳನ್ನು ಸಮ್ಮಾನಿಸಲಾಯಿತು.