Advertisement

ಐಪಿಎಲ್‌ 2021ಕ್ಕೆ ಆಯೋಜನೆ ?

10:28 AM Apr 01, 2020 | Sriram |

ಹೊಸದಿಲ್ಲಿ: ಕೋವಿಡ್‌ 19 ವೈರಸ್‌ನಿಂದ ಮುಂದೂಡಲ್ಪಟ್ಟಿರುವ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) 13ನೇ ಆವೃತ್ತಿ ಟಿ20 ಕೂಟ 2021ಕ್ಕೆ ನಡೆಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

Advertisement

ಟೋಕಿಯೊ ಒಲಿಂಪಿಕ್‌ ಕೂಟವನ್ನು ಸಂಘಟಕರು ರದ್ದು ಮಾಡಿಲ್ಲ, ಬದಲಾಗಿ ಅದೇ ಕೂಟವನ್ನು 2021ಕ್ಕೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ಹಾಗೆಯೇ ಐಪಿಎಲ್‌
13ನೇ ಆವೃತ್ತಿ ಕೂಡ 2021ಕ್ಕೆ ಮುಂದೂಡಲ್ಪಡಲಿದೆ, ರದ್ದುಗೊಳ್ಳುವುದಿಲ್ಲ ಎಂದು ಆಂಗ್ಲ ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ.

ವೇಳಾಪಟ್ಟಿ ಪ್ರಕಾರ ಐಪಿಎಲ್‌ ಮಾ. 29ಕ್ಕೆ ಆರಂಭವಾಗಬೇಕಿತ್ತು. ಆದರೆ ಕೋವಿಡ್‌ 19 ವೈರಸ್‌ನಿಂದಾಗಿ ಕೂಟವನ್ನು ಆಯೋಜಿಸುವ ಬಗ್ಗೆ ಎ.15ರ ಅನಂತರ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಕೂಟವನ್ನು ಆಯೋಜಿಸುವುದು ಅಸಾಧ್ಯ ಹೀಗಿದ್ದರೂ ಮೇ ಮೊದಲ ವಾರದಲ್ಲಿ ವಾತಾವರಣ ತಿಳಿಗೊಂಡರೆ ದಿನಕ್ಕೆರಡು ಪಂದ್ಯದಂತೆ ಆಡಿಸಿ ಐಪಿಎಲ್‌ ನಡೆಸಬಹುದು ಎಂಬುದು ಸಂಘಟಕರ ಲೆಕ್ಕಾಚಾರವಾಗಿತ್ತು. ಆದರೆ ಇದಕ್ಕೆ ಅವಕಾಶ ಸಿಗುವುದೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಕೋವಿಡ್‌ 19 ಕಾರಣ ಲಾಕ್‌ಡೌನ್‌ ಇರುವುದ ರಿಂದ ವಿದೇಶಿ ಆಟಗಾರರಿಗೆ ಕೂಟದಲ್ಲಿ ಭಾಗ ವಹಿಸಲು ಭಾರತದ ವೀಸಾ ಸಿಗುವ ಸಾಧ್ಯತೆ ಇಲ್ಲ. ಆನಂತರವೂ ಎಲ್ಲವು ಸರಿಯಾಗಲಿದೆ ಎಂದು ಈಗಲೇ ಹೇಳುವುದು ಕಷ್ಟವಾಗುತ್ತದೆ, ಹೀಗಾಗಿ ಈ ಎಲ್ಲ ಕಾರಣಗಳಿಂದಾಗಿ ಐಪಿಎಲ್‌ ಮುಂದೂಡುವುದು ಅನಿವಾರ್ಯ ಎನ್ನಲಾಗಿದೆ.

ಬೃಹತ್‌ ಹರಾಜು ಇಲ್ಲ?
ಐಪಿಎಲ್‌ ಮುಂದೂಡಿಕೆ ಆದರೆ ಮುಂದಿನ ವರ್ಷ ನಡೆಯಲಿರುವ ಐಪಿಎಲ್‌ ಬೃಹತ್‌ ಆಟಗಾರರ ಹರಾಜು ಕೂಡ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಏಷ್ಯಾ ಕಪ್‌ ಟಿ20 ಕೂಡ ನಡೆಯಲ್ಲ !
ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಆಯೋಜಿಸುವ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಕೂಟ ಕೋವಿಡ್‌ 19 ವೈರಸ್‌ನಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಮುಂದಿನ 6 ತಿಂಗಳು ವಿಶ್ವದಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯುವುದು ಅಸಾಧ್ಯ, ಹೀಗಾಗಿ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್‌ ನಡೆಯುವುದು ಅನುಮಾನ ಎಂದು ಬಿಸಿಸಿಐನ ಸದಸ್ಯರೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next