Advertisement

ಉತ್ತಮ ಸೇವೆಗೆ ಯೋಜನೆ ರೂಪಿಸಿ

06:58 AM Jan 18, 2019 | |

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಪಾಲಿಕೆಯಿಂದ ನೀಡುವ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರಾಯೋಗಿಕವಾಗಿ ಆಯ್ದ ವಾರ್ಡುಗಳಲ್ಲಿ ಕಾರ್ಯಾನುಷ್ಠಾನಕ್ಕೆ ತರಲು ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳಿ ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ್‌ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಪಾಲಿಕೆ ವ್ಯಾಪ್ರಿಯಲ್ಲಿ ಎಚ್.ಕೆ.ಆರ್‌.ಡಿ.ಬಿ ಅನುದಾನದಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಯ್ಕೆ ಮಾಡಿಕೊಂಡ ವಾರ್ಡುಗಳಲ್ಲಿ ರಸ್ತೆ ದುರಸ್ತಿ, ಕಸ ಸಂಗ್ರಹಣೆ, ಬೀದಿ ದೀಪ ನಿರ್ವಹಣೆ, ಕುಡಿಯುವ ನೀರಿನಂತ ಸೇವೆಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರ ನೆರವು ಪಡೆದು ಸೇವೆಗಳನ್ನು ಬಲಗೊಳಿಸಲು ಮುಂದಾಗಬೇಕು ಎಂದರು.

ಮಹಾನಗರ ಅಭಿವೃದ್ಧಿಗೆ ಎಚ್.ಕೆ.ಆರ್‌.ಡಿ.ಬಿ ನಿಧಿಯಿಂದ 2016-17 ಹಾಗೂ 2017-18ನೇ ಸಾಲಿನ ಮೈಕ್ರೋ ಅನುದಾನದಡಿ ಒಟ್ಟು 67 ಕಾಮಗಾರಿಗಳಿಗೆ 954.80 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಅದೇ ರೀತಿ ಮ್ಯಾಕ್ರೋ ಯೋಜನೆಯಡಿ 2014-15ನೇ ಸಾಲಿನಿಂದ 2017-18ನೇ ಸಾಲಿನ ವರೆಗೆ 300 ಕಾಮಗಾರಿಗಳಿಗೆ 15839.75 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.

ಕಾಮಗಾರಿ ಪೂರ್ಣಗೊಂಡ ಕೂಡಲೇ ಸಂಬಂಧಿಸಿದ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಸಿ ಭೌತಿಕ ಪ್ರಗತಿಯೊಂದಿಗೆ ಆರ್ಥಿಕ ಪ್ರಗತಿ ಸಾಧಿಸಬೇಕು. ದೊಡ್ಡ ಮೊತ್ತದ ಕಾಮಗಾರಿಗಳಲ್ಲಿ 20 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತದ ಕೆಲಸಗಳಾಗಿದ್ದಲ್ಲಿ ಅದಕ್ಕನುಗುಣವಾಗಿ ಭಾಗಶಃ ಅನುದಾನ ಗುತ್ತಿಗೆದಾರರಿಗೆ ಪಾವತಿ ಮಾಡಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು ವೈಯಕ್ತಿಕವಾಗಿ ಗಮನಹರಿಸಬೇಕು. ಶೀಘ್ರದಲ್ಲಿಯೇ ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಆಲಿಸಬೇಕು ಎಂದರು.

ಎಚ್.ಕೆ.ಆರ್‌.ಡಿ.ಬಿ ಅನುದಾನದಡಿ ಪಾಲಿಕೆ ಅಧಿಕಾರಿಗಳು ಪರಸ್ಪರ ಸಂವಹನಕ್ಕೆಂದೆ ವಾಕಿಟಾಕಿ, ವೈರಲೆಸ್‌ ಮೊಬೈಲ್‌ ವಾಕಿಟಾಕಿ ನೀಡಲಾಗಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಬೇಕು. ಪಾಲಿಕೆಯಿಂದ ಆಯ್ದ ಕಡೆ ಸ್ಥಾಪಿಸಲಾಗಿರುವ ಇ-ಟಾಯ್ಲೆಟ್ ಸ್ವಚ್ಛತೆಗೆ ಸಿಬ್ಬಂದಿ ನಿಯೋಜಿಸಬೇಕು.

Advertisement

ಪಾಲಿಕೆ ಉಪಯೋಗಕ್ಕೆಂದು ಏಳು ಕುಡಿಯುವ ನೀರು ಶುದ್ಧಿಕರಣ ಘಟಕ ಪೂರೈಸಲು ಮಂಡಳಿ ಆದೇಶಿಸಿದ್ದು, ಕೂಡಲೇ ಪಾಲಿಕೆ ಅಧಿಕಾರಿಗಳು ಘಟಕ ಅಳವಡಿಕೆಗೆ ಸೂಕ್ತ ಸ್ಥಳ ಗುರುತಿಸಿ ಸರಬರಾಜುದಾರರಿಗೆ ಮಾಹಿತಿ ನೀಡಬೇಕು ಎಂದರು.

ಪಾಲಿಕೆ ಆಯುಕ್ತ ಆರ್‌.ಎಸ್‌. ಪೆದ್ದಪ್ಪಯ್ಯ, ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಜಂಟಿ ಕಾರ್ಯದರ್ಶಿ ಬಸವರಾಜ, ಪಾಲಿಕೆಯ ಕಾರ್ಯನಿವಾಹಕ ಅಭಿಯಂತರರಾದ ಶಿವಣಗೌಡ ಪಾಟೀಲ, ರಂಗಯ್ಯ ಬಡಿಗೇರ, ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಿರಿಯ ಅಭಿಯಂತರರು ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next