Advertisement

ರೈತರಿಗಾಗಿ ವಿಭಿನ್ನ ಯೋಜನೆ ರೂಪಿಸಿ

06:42 AM Jun 10, 2019 | Team Udayavani |

ದೊಡ್ಡಬಳ್ಳಾಪುರ: ಕೃಷಿ ಇಲಾಖೆ, ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಅಂಕಿ-ಅಂಶಗಳನ್ನು ನೀಡುವುದಕ್ಕೆ ಸೀಮಿತಗೊಳ್ಳದೆ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಬೇಕು ಎಂದು ತಾಪಂ ಸದಸ್ಯ ಸುನಿಲ್‌ಕುಮಾರ್‌ ಸಲಹೆ ನೀಡಿದರು. ನಗರದ ತಾಲೂಕು ಪಂಚಾಯಿತಿ ನವೀಕರಣಗೊಂಡ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

Advertisement

ರೈತರಿಗೆ ಸಲಹೆ, ಸೂಚನೆ ನೀಡಿ: ಕೃಷಿ ಇಲಾಖೆ ಅಧಿಕಾರಿಗಳು ರೈತರ ಬೆಳವಣಿಗೆಗೆ ಶ್ರಮಿಸಬೇಕಿದೆ. ಸರ್ಕಾರಿ ಯೋಜನೆಗಳ ಅನುಷ್ಠಾನ, ವಿತರಣೆಯಂತಹ ಅಂಕಿ ಅಂಶ ನೀಡುವುದಕ್ಕೆ ಸೀಮಿತವಾಗಬಾರದು. ವಿಭಿನ್ನ ರೀತಿಯ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ, ಸೂಚನೆ ನೀಡಬೇಕಿದೆ. ಬರದಿಂದ ರೈತರು ಕಂಗೆಟ್ಟಿದ್ದು, ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆ ಸುರಿಯುತ್ತಿದೆ.

ಈ ನಿಟ್ಟಿನಲ್ಲಿ ಮಣ್ಣಿನಲ್ಲಿ ಯಾವ ಬೆಳೆ ಬೆಳೆದರೆ ಅನುಕೂಲ ಎಂಬುದನ್ನು ರೈತರಿಗೆ ತಿಳಿಸಿಕೊಡಬೇಕು. ರೈತರು ಒಂದೇ ಬೆಳೆಯನ್ನು ಬೆಳೆಯುವುದರಿಂದಿ ಭೂಮಿಯ ಸಾರ ನಶಿಸಿ, ಉತ್ತಮ ಬೆಳೆ ದೊರಕದೆ ನಷ್ಟಕ್ಕೆ ಒಳಗಾಗುತ್ತಿದೆ. ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಿ, ಅಂಥವುಗಳನ್ನು ತಪ್ಪಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಅಕ್ರಮ ದಾಖಲು ತಪ್ಪಿಸಿ: ಸದಸ್ಯ ಶಂಕರಪ್ಪ ಮಾತನಾಡಿ, ಸರ್ಕಾರದಿಂದ ಅನುಮತಿ ದೊರೆಯದಿದ್ದರೂ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕಿದೆ. ಖಾಸಗಿ ಶಾಲೆಗಳಲ್ಲಿ ನೀಡುವಂತೆ ಮಕ್ಕಳ ಸಾಧನೆಗೆ ಪ್ರೋತ್ಸಾಹ, ಉತ್ತಮ ಅಂಕಗಳಿಸಿದ ಮಕ್ಕಳ ಫೋಟೋಗಳನ್ನು ಬ್ಯಾನರ್‌ ಮಾಡಿ ಹಾಕಿಸುವುದೂ ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳಿಗೂ ಪ್ರೋತ್ಸಾಹ ನೀಡಬೇಕಿದೆ ಎಂದರು.

ಶಿಕ್ಷಕರು ಶಾಲೆಯಿಂದ ಹೊರಗುಳಿದರೆ ಕಠಿಣ ಕ್ರಮ: ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಾತನಾಡಿ, ಶಾಲೆ ವೇಳೆ ಹೊರಗುಳಿಯುವಂತಹ ಶಿಕ್ಷಕರ ವಿರುದ್ಧ ಇಲಾಖೆ ಕಠಿಣ ಕ್ರಮಕೈಗೊಳ್ಳಲು ಸಿದ್ಧವಿದೆ. ಈಗಾಗಲೇ ಈ ರೀತಿ ಮಾಡುತ್ತಿದ್ದ ಇಬ್ಬರು ಶಿಕ್ಷಕರ ಸಂಬಳ ಕಡಿತ ಗೊಳಿಸಿ ಎಚ್ಚರಿಕೆ ನೀಡಲಾಗಿದೆ.

Advertisement

ಇಂತಹ ಘಟನೆಗಳು ಕಂಡು ಬಂದಲ್ಲಿ ದೂರು ನೀಡಬೇಕು ಎಂದು ಮನವಿ ಮಾಡಿದರು. ತಾಲೂಕಿನ ಆರಂಭಿಸಲಾಗಿರುವ ಕರ್ನಾಟಕ ಪಬ್ಲಿಕ್‌ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೋಷಕರಿಂದ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ವಿದ್ಯಾರ್ಥಿಗಳ ಮಿತಿಯನ್ನು 30ಕ್ಕೆ ನಿಗದಿಗೊಳಿಸಲಾಗಿದೆ. ಮಿತಿ ಹೆಚ್ಚಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.

ಜಾನುವಾರು ಮೇವು ಸಾಕಷ್ಟಿದೆ: ಪಶು ಇಲಾಖೆ ಸಹಾಯ ನಿರ್ದೇಶಕ ಡಾ.ರಾಜೇಂದ್ರ ಮಾತನಾಡಿ, ತಾಲೂಕಿನಲ್ಲಿ 12 ವಾರಗಳಷ್ಟು ಮೇವಿನ ಲಭ್ಯತೆ ಇದೆ. ಬರದ ಹಿನ್ನಲೆ ಪಶು ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ತಾಲೂಕಿನ 5 ಹೋಬಳಿಗಳಲ್ಲಿ 1,431 ರೈತರಿಗೆ 38 ಟನ್‌ 540 ಕೆಜಿ ಮೇವನ್ನು ವಿತರಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಉಚಿತ ಜಾನುವಾರು ವಿಮೆ ಈ ವರ್ಷವು ಮುಂದುವರಿದಿದೆ. ಆಕಸ್ಮಿಕವಾಗಿ ಸಾವನ್ನಪ್ಪುವ‌ ಜಾನುವಾರುಗಳಿಗೆ 10 ಸಾವಿರ ರೂ. ಧನ ಸಹಾಯ ಸೌಲಭ್ಯವಿದ್ದು, ರೈತರು ಸ್ಥಳೀಯ ಪಶು ಇಲಾಖೆ ವೈದ್ಯರನ್ನು ಸಂಪರ್ಕಿಸಬೇಕು ಎಂದರು.

ಮೇವು ವಿತರಣೆ ಸಮರ್ಪಕವಾಗಿ ಆಗಿಲ್ಲ: ತಾಲೂಕಿನಲ್ಲಿ ಮೇವಿನ ವಿತರಣೆ ಸಮರ್ಪಕವಾಗಿ ಆಗಿಲ್ಲ. ರೈತರಿಗೆ, ಜನಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ಇಲ್ಲವಾಗಿದೆ. ಬರದ ಬೇಗೆಯಿಂದ ಮೇವಿನ ಕೊರತೆ ಎದುರಿಸುತ್ತಿರುವ ವೇಳೆ ಇಲಾಖೆ ಹೋಬಳಿ ಕೇಂದ್ರದಲ್ಲಿ ಬೇಕಾಬಿಟ್ಟಿ ಮೇವು ವಿತರಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಾಂತರ ವಿಭಾಗದ ಎಇಇ ಬದಲಿಗೆ ಸೂಚನೆ: ಕಳೆದ ಕೆಲ ದಿನಗಳಿಂದ ಮಳೆ,ಗಾಳಿಯಿಂದಾಗಿ ವಿದ್ಯುತ್‌ ತಂತಿಗಳು ತುಂಡಾಗಿ ಅಥವಾ ಮರಗಿಡಗಳು ಬಿದ್ದು ವಿದ್ಯುತ್‌ ಕಡಿತ ಉಂಟಾದರೆ,ದೊಡ್ಡಬಳ್ಳಾಪುರ ಗ್ರಾಮಾಂತರ ವಿಭಾಗದ‌ ಬೆಸ್ಕಾಂ ಸಹಾಯಕ ಕಾರ್ಯಪಾಲ ಅಭಿಯಂತರ ಅವರ ಬೇಜವಬ್ದಾರಿಯಿಂದಾಗಿ ಹಲವು ಗ್ರಾಮಗಳು ಕಳೆದ 5 ದಿನಗಳಿಂದ ಕತ್ತಲಲ್ಲಿ ಕಳೆಯುವಂತಾಗಿದೆ.

ಮಳೆ ಬಂದಾಗ ವಿದ್ಯುತ್‌ ಕಡಿತ ಸಹಜ ಆದರೆ ಸಣ್ಣ ಪ್ರಮಾಣದ ಮಳೆ ಆರಂಭವಾದ ಕೂಡಲೇ ಇಡಿ ರಾತ್ರಿ ಕತ್ತಲಲ್ಲಿ ಜನತೆ ನರಳುತ್ತಿದ್ದಾರೆ.ಕೂಡಲೇ ಗ್ರಾಮಾಂತರ ವಿಭಾಗದ ಎಇಇ ಅವರನ್ನು ತೆರವುಗೊಳಿಸಿ ನಗರ ವಿಭಾಗದ ಎಇಇ ಸುಂದರೇಶ್‌ ನಾಯಕ್‌ ಅವರಿಗೆ ಹೆಚ್ಚುವರಿಯಾಗಿ ವಹಿಸಬೇಕಿದೆ ಎಂದು ಒತ್ತಾಯಿಸಿದರು.

ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ: ತಾಲೂಕು ಆರೋಗ್ಯಾಧಿಕಾರಿ ಶರ್ಮಿಳಾ ಹೆಗಡೆ ಮಾಹಿತಿ ನೀಡಿ, ತಾಲೂಕಿನಲ್ಲಿ ಚಿಕಿತ್ಸೆ ನೀಡುತ್ತಿರುವ ನಕಲಿ ಹಾಗೂ ಆಯುರ್ವೆದದ ಹೆಸರಲ್ಲಿ ಇಂಗ್ಲೀಷ್‌ ಪದ್ಧತಿಯ ಚಿಕಿತ್ಸೆ ನೀಡುವ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತಿದ್ದು, ಕ್ಲಿನಿಕ್‌ಗಳನ್ನು ಮುಚ್ಚಿಸಲಾಗುತ್ತಿದೆ. ದೊಡ್ಡಬೆಳವಂಗಲದಲ್ಲಿ ಮೂರು ಕ್ಲಿನಿಕ್‌ ಮಾಲಿಕರ ಮೇಲೆ ಎಫ್‌ಐಅರ್‌ ದಾಖಲಿಸಲಾಗಿದ್ದರೂ, ಚಿಕಿತ್ಸೆ ಮುಂದುವರಿಸಿರುವ ಮಾಹಿತಿ ಬಂದಿದೆ ಎಂದರು.

ಶಿಕ್ಷಣ ಇಲಾಖೆಗೆ ಅಭಿನಂದನೆ: ತಾಪಂ ಅಧ್ಯಕ್ಷ ಶ್ರೀವತ್ಸ ಮತ್ತು ಇಒ ದ್ಯಾಮಪ್ಪ, ಎಸ್‌ಎಸ್‌ಎಲ್‌ಸಿಯಲ್ಲಿ ಗ್ರಾಮಾಂತರ ಜಿಲ್ಲೆಗೆ 3ನೇ ಸ್ಥಾನ ದೊರಕಿಸಿದ ಶಿಕ್ಷಣ ಇಲಾಖೆಯನ್ನು ಅಭಿನಂದಿಸಿ ಮಾತನಾಡಿದರು. ಗ್ರಾಮಾಂತರ ವಿಭಾಗದ ಬೆಸ್ಕಾಂ ಎಇಇ ವರ್ಗಾವಣೆಗೆ ಶಾಸಕರಿಗೆ ಮನವಿ ಸಲ್ಲಿಸುವುದು, ಮುಂಬರುವ ಮೇವಿನ ದಾಸ್ತಾನನ್ನು ಸಮರ್ಪಕವಾಗಿ ರೈತರಿಗೆ ವಿತರಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವುದು, ಆಯುಷ್ಮಾನ್‌ ಭಾರತ್‌ ಯೋಜನೆಗೆ ಹೆಚ್ಚಿನ ಕೇಂದ್ರ ಸ್ಥಾಪನೆಗೆ ಒತ್ತು ನೀಡುವುದು ಸೇರಿ ಹಲವು ವಿಚಾರಗಳಿಗೆ ಸಲಹೆ ಮತ್ತು ಸೂಚನೆ ನೀಡಿದರು.

ಈ ವೇಳೆ ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಯೋಜನೆ ಮತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next