Advertisement

A Plan ವಿಫಲವಾಗಿದ್ರೆ…B ಪ್ಲ್ಯಾನ್‌ ರೆಡಿಯಾಗಿತ್ತು: ಮಾಸ್ಟರ್‌ ಮೈಂಡ್‌ ಝಾ ಮಾಹಿತಿ!

01:16 PM Dec 15, 2023 | Nagendra Trasi |

ನವದೆಹಲಿ: ಸಂಸತ್‌ ನ ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ಲೋಕಸಭೆಯಲ್ಲಿ ಹಾಗೂ ಸಂಸತ್‌ ಭವನದ ಹೊರಗೆ ಸ್ಮೋಕ್‌ ಕ್ಯಾನ್‌ ಪ್ರಯೋಗಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಡಿ.14) ಬಂಧಿಸಲ್ಪಟ್ಟ ಮಾಸ್ಟರ್‌ ಮೈಂಡ್ ಲಲಿತ್‌ ಹಾಗೂ ಮಹೇಶ್‌, ಸಾಕ್ಷ್ಯ ಸಿಗದಂತೆ ಮಾಡಲು ಇಬ್ಬರೂ ತಮ್ಮ ಮೊಬೈಲ್‌ ಫೋನ್‌ ಗಳನ್ನು ಸುಟ್ಟುಹಾಕಿರುವುದಾಗಿ ವಿಚಾರಣೆಯಲ್ಲಿ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:UP Judge;ಲೈಂಗಿಕ ಕಿರುಕುಳ:..ಸಾಯಲು ಅನುಮತಿ ಕೊಡಿ;CJIಗೆ ಮಹಿಳಾ ಜಡ್ಜ್‌ ಬರೆದ ಪತ್ರ ವೈರಲ್

ಮಾಹಿತಿದಾರರು ನೀಡಿದ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಪ್ರಕರಣದ ಮಾಸ್ಟರ್‌ ಮೈಂಡ್‌ ಲಲಿತ್‌ ಝಾ ಹಾಗೂ ಮತ್ತೊಬ್ಬ ಆರೋಪಿ ಮಹೇಶ್‌ ನನ್ನು ಬಂಧಿಸಿದ್ದರು. ಸಂಸತ್‌ ಭವನದೊಳಗೆ ಸ್ಮೋಕ್‌ ಕ್ಯಾನ್‌ ಪ್ರಯೋಗಿಸಿದ ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸಂಸತ್‌ ಭವನದಲ್ಲಿ ದುಷ್ಕೃತ್ಯ ಎಸಗುವ ಸಂಚಿನ ಮಾಸ್ಟರ್‌ ಮೈಂಡ್‌ ಲಲಿತ್‌ ಝಾ ಬಳಿ ನಾಲ್ಕು ಫೋನ್‌ ಗಳಿದ್ದು, ಅವುಗಳಲ್ಲಿ ಮಹತ್ವದ ಸಾಕ್ಷ್ಯಗಳಿತ್ತು. ಆದರೆ ಆರೋಪಿ ಝಾ ಪುರಾವೆ ನಾಶಕ್ಕಾಗಿ ಫೋನ್‌ ಗಳನ್ನು ಸುಟ್ಟುಹಾಕಿರುವುದಾಗಿ ತಿಳಿಸಿದ್ದಾರೆ.

ಸಂಸತ್‌ ಒಳಗೆ ಪ್ರವೇಶಿಸಿ ಸ್ಮೋಕ್‌ ಕ್ಯಾನ್‌ ಪ್ರಯೋಗಿಸುವ ಘಟನೆಗೂ ಮುನ್ನ ತಮ್ಮ ಮೊಬೈಲ್‌ ಫೋನ್‌ ಗಳನ್ನು ಝಾಗೆ ಹಸ್ತಾಂತರಿಸಿದ್ದರು. ಸುಟ್ಟ ಫೋನ್‌ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

Advertisement

ಪೊಲೀಸ್‌ ತನಿಖೆಯಲ್ಲಿ ಝಾ ಹೇಳಿದ್ದೇನು?

ಪೂರ್ವ ನಿಗದಿಯಂತೆ ಒಂದು ವೇಳೆ ಲೋಕಸಭೆಯೊಳಗೆ ಪ್ರವೇಶಿಸಲು ಸಾಧ್ಯವಾಗದೇ ತಮ್ಮ ಪ್ಲ್ಯಾನ್‌ ಕಾರ್ಯಗತವಾಗದಿದ್ದಲ್ಲಿ, ಅದಕ್ಕಾಗಿ ಪ್ಲ್ಯಾನ್‌ “ಬಿ” ಅನ್ನು ಕೂಡಾ ಸಿದ್ದಪಡಿಸಿ ಇಟ್ಟುಕೊಳ್ಳಲಾಗಿತ್ತು ಎಂದು ಪ್ರಕರಣದ ಮಾಸ್ಟರ್‌ ಮೈಂಡ್‌ ಲಲಿತ್‌ ಝಾ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಭದ್ರತಾ ಕಾರಣದಿಂದಾಗಿ ಒಂದು ವೇಳೆ ನೀಲಮ್‌ ಮತ್ತು ಅಮೋಲ್‌ ತಮ್ಮ ಪ್ಲ್ಯಾನ್‌ ನಂತೆ ಸಂಸತ್‌ ಬಳಿ ತೆರಳಲು ಸಾಧ್ಯವಾಗದಿದ್ದಲ್ಲಿ, ಮಹೇಶ್‌ ಮತ್ತು ಕೈಲಾಶ್‌ ಮತ್ತೊಂದು ಗೇಟ್‌ ನಿಂದ ಸಂಸತ್‌ ಅನ್ನು ಪ್ರವೇಶಿಸಿ ಕಲರ್‌ ಸ್ಮೋಕ್‌ ಕ್ಯಾನ್‌ ಅನ್ನು ಪ್ರಯೋಗಿಸಿ, ಘೋಷಣೆ ಕೂಗಲು ತಿಳಿಸಲಾಗಿತ್ತಂತೆ.

ಗುರುಗ್ರಾಮ್‌ ನಲ್ಲಿ ವಿಶಾಲ್‌ ಶರ್ಮಾ ಅಲಿಯಾಸ್‌ ವಿಕ್ಕಿ ಮನೆಯಲ್ಲಿ ದುಷ್ಕೃತ್ಯ ಎಸಗುವ ಗುಂಪು ಸೇರಿದ್ದು, ನಿಗದಿಯಂತೆ ಮಹೇಶ್‌ ಮತ್ತು ಕೈಲಾಶ್‌ ವಿಶಾಲ್‌ ಮನೆ ತಲುಪಲು ವಿಫಲರಾಗಿದ್ದರು. ಆ ಕಾರಣಕ್ಕಾಗಿ ಯಾವುದೇ ಬೆಲೆ ತೆತ್ತಾದರೂ ಸಂಸತ್‌ ಹೊರಗೆ ಸ್ಮೋಕ್‌ ಕ್ಯಾನ್‌ ಪ್ರಯೋಗಿಸುವ ಹೊಣೆಯನ್ನು ಅಮೋಲ್‌ ಮತ್ತು ನೀಲಂಗೆ ವಹಿಸಲಾಗಿತ್ತು ಎಂದು ಝಾ ತಿಳಿಸಿದ್ದಾನೆ.

ದುಷ್ಕೃತ್ಯ ಎಸಗಿದ ನಂತರ ಎಲ್ಲಿ ಅಡಗಿಕೊಳ್ಳಬೇಕು ಎಂಬುದರ ಬಗ್ಗೆಯೂ ಝಾ ಪ್ಲ್ಯಾನ್‌ ಮಾಡಿದ್ದು, ಅದರಂತೆ ಲಲಿತ್‌ ಝಾ ರಾಜಸ್ಥಾನದಲ್ಲಿ ತಲೆಮರೆಸಿಕೊಳ್ಳಲು ನೆರವು ನೀಡುವ ಜವಾಬ್ದಾರಿ ಮಹೇಶ್‌ ಗೆ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.

ಪೂರ್ವ ನಿಗದಿತ ಯೋಜನೆಯಂತೆ ಮಹೇಶ್‌ ತನ್ನ ಗುರುತಪತ್ರ ನೀಡಿ ಲಲಿತ್‌, ಮಹೇಶ್‌ ಹಾಗೂ ಕೈಲಾಶ್‌ ಅಡಗಿಕೊಳ್ಳಲು ಗೆಸ್ಟ್‌ ಹೌಸ್‌ ವ್ಯವಸ್ಥೆ ಮಾಡಿಕೊಟ್ಟಿದ್ದ. ಮೂವರು ಗೆಸ್ಟ್‌ ಹೌಸ್‌ ನ ಟಿವಿಯಲ್ಲಿ ಸಂಸತ್‌ ಭವನ ಪ್ರವೇಶಿಸಿ ಸ್ಮೋಕ್‌ ಕ್ಯಾನ್‌ ಪ್ರಯೋಗಿಸಿದ ಸುದ್ದಿಯ ಮಾಹಿತಿ ಕಲೆ ಹಾಕಿದ್ದರು.

ಪ್ರಕರಣದ ಬಗ್ಗೆ ಒಂದೂವರೆ ವರ್ಷದ ಹಿಂದೆಯೇ ಮೈಸೂರಿನಲ್ಲಿ ಆರೋಪಿಗಳ ಒಟ್ಟುಗೂಡಿ ಸಂಸತ್‌ ಭವನ ಪ್ರವೇಶಿಸಿ ಸ್ಮೋಕ್‌ ಕ್ಯಾನ್‌ ಪ್ರಯೋಗಿಸುವ ಪ್ಲ್ಯಾನ್‌ ಸಿದ್ಧಪಡಿಸಿದ್ದರು. ಘಟನೆಯ ಮಾಸ್ಟರ್‌ ಮೈಂಡ್‌ ಲಲಿತ್‌ ಝಾ ಮತ್ತು ಮಹೇಶ್‌ ಗುರುವಾರ ರಾತ್ರಿ ಕರ್ತವ್ಯ ಪಥ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next