Advertisement

ಬಯಲು ಬಹಿರ್ದೆಸೆ ಮುಕ್ತ ಗ್ರಾಮ: ಖಚಿತಕ್ಕಾಗಿ ಪುನರ್‌ ಪರಿಶೀಲನೆ! 

01:00 AM Mar 19, 2019 | Harsha Rao |

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ “ಬಯಲು ಬಹಿರ್ದೆಸೆ ಮುಕ್ತ ಗ್ರಾಮ’ ಎಂಬುದಾಗಿ ಸ್ವಯಂ ಘೋಷಿಸಿಕೊಂಡಿರುವ ಗ್ರಾಮಗಳ ವಾಸ್ತವ ನೈರ್ಮಲ್ಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಆಯಾ ಗ್ರಾ.ಪಂ.ಗಳಿಗೆ ಸೂಚಿಸಿದೆ.

Advertisement

ಈ ಹಿನ್ನೆಲೆಯಲ್ಲಿ ಅಂತರ್‌ ಗ್ರಾಮ, ಅಂತರ್‌ ತಾಲೂಕು ಹಾಗೂ ಅಂತರ್‌ ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸಲಿದೆ. ಘೋಷಿತ ಗ್ರಾಮ ಗಳಲ್ಲಿ ನಿಜಕ್ಕೂ ಶೌಚಾಲಯ ಎಲ್ಲ ಮನೆಗಳಲ್ಲಿ ಇದೆಯೇ? ಅವುಗಳ ಬಳಕೆ ಆಗುತ್ತಿದೆಯೇ ಅಥವಾ ಬಯಲು ಶೌಚ ಜಾರಿಯಲ್ಲಿದೆಯೇ ಎಂಬ ಬಗ್ಗೆ ಇನ್ನೊಂದು ಗ್ರಾ.ಪಂ. ತಂಡ ಪರಿಶೀಲಿಸಿ ಜಿ.ಪಂ.ಗೆ ವರದಿ ನೀಡಲಿದೆ.

ಸ್ವತ್ಛ ಭಾರತ್‌ ಮಿಷನ್‌ (ಗ್ರಾ.) ಯೋಜನೆಯಡಿ “ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಿರುವ ಗ್ರಾ.ಪಂ. ವ್ಯಾಪ್ತಿಯ ಪ್ರತಿ ಕುಟುಂಬವು ಶೌಚಾಲಯ ನಿರ್ಮಾಣ, ಬಳಕೆ, ಗ್ರಾಮದ ಸ್ವತ್ಛತೆ, ಸಮುದಾಯ ಶೌಚಾಲಯಗಳ ಬಳಕೆ- ನಿರ್ವಹಣೆ, ಶಾಲಾ ಮತ್ತು ಅಂಗನವಾಡಿ ಕೇಂದ್ರ ಗಳಲ್ಲಿ ಶೌಚಾಲಯಗಳ ಸ್ಥಿತಿಯ ಬಗ್ಗೆ ಪರಿಶೀಲಿಸಬೇಕು. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಮೊದಲನೇ ಹಂತದ ಪರಿಶೀಲನೆ ನಡೆಸಿ 6 ತಿಂಗಳಾದ ಕಾರಣ ಮತ್ತೆ ಪರಿಶೀಲನೆ ನಡೆಸಲಾಗುವುದು.

ಅಂತರ್‌ ಗ್ರಾಮ-ಅಂತರ್‌ ತಾಲೂಕು ಸಮಿತಿ
ಗ್ರಾ.ಪಂ. ಪಿಡಿಒ, ಗ್ರಾ.ಪಂ. ಕಾರ್ಯ ದರ್ಶಿ, ಆಶಾ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ
ಗಳು, ನೆಹರೂ ಯುವಕ ಕೇಂದ್ರ- ಪ್ರತಿನಿಧಿಗಳು, ಸ್ವಚ್ಛಾಗ್ರಹಿ ಸ್ವಯಂ ಸೇವಕರು ಸೇರಿದಂತೆ ಒಟ್ಟು 14 ಜನರ ತಂಡದ ಗ್ರಾಮ ಸಮಿತಿಯನ್ನು ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ರಚಿಸಬೇಕಿದೆ. ಒಂದು ಗ್ರಾ.ಪಂ.ನ ಈ ಸಮಿತಿಯು ಸೂಚಿಸಿದ ಇನ್ನೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುತ್ತಾಡಿ ಅಲ್ಲಿನ ಪರಿಸ್ಥಿತಿಯ ವರದಿ ನೀಡಬೇಕು.

ಇದೇ ರೀತಿ ತಾಲೂಕು ಮಟ್ಟದಲ್ಲಿ ಮತ್ತೂಂದು ಪರಿಶೀಲನ ತಂಡ ಇರಲಿದೆ. ಗ್ರಾ.ಪಂ.ಗಳು ನೀಡಿದ ವರದಿ ಆಧರಿಸಿ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ, ಸಿಡಿಪಿಒ, ತಾ.ಪಂ., ಮೀನುಗಾರಿಕಾ ಇಲಾಖೆ, ಕೃಷಿ ಇಲಾಖೆ, ಅಕ್ಷರ ದಾಸೋಹ, ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಸೇರಿದಂತೆ 12 ಜನರ ತಂಡವು ಇನ್ನೊಂದು ತಾಲೂಕಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲಿದೆ.

Advertisement

ಗ್ರಾ.ಪಂ/ತಾ.ಪಂ. ನೀಡಿದ ವರದಿ  ಪರಿಶೀಲಿಸಿ ಸರಕಾರಕ್ಕೆ ಜಿಲ್ಲೆಯ ವಸ್ತುಸ್ಥಿತಿ ನೀಡಬೇಕು. ಒಂದು ಜಿ.ಪಂ.ಗೆ ಮತ್ತೂಂದು ಜಿ.ಪಂ.ನ ಪರಿಶೀಲನ ತಂಡ ಭೇಟಿ ನೀಡಿ ಪರಿಶೀಲಿಸಲಿದೆ. ದ.ಕ. ತಂಡವು ಉಡುಪಿ ಜಿಲ್ಲೆ, ಚಿಕ್ಕಮಗಳೂರಿನ ತಂಡವು ದ.ಕ. ಜಿಲ್ಲೆ ಹಾಗೂ ಉಡುಪಿ ಅಂತರ್‌ ಜಿಲ್ಲಾ ಪರಿಶೀಲನಾ ತಂಡವು ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಿದೆ.

ಬಯಲು ಶೌಚ ಮುಕ್ತ ಜಿಲ್ಲೆಯಲ್ಲಿ  ಶೌಚಾಲಯ ರಹಿತರು!
2015ರಲ್ಲಿ ದ.ಕ. ಜಿಲ್ಲೆಯನ್ನು ಸಂಪೂರ್ಣ “ಬಯಲು ಶೌಚ ಮುಕ್ತ’ ಎಂದು ಸ್ವಯಂ ಘೋಷಿಸಲಾಗಿತ್ತು. ಆದರೆ ಆ ಬಳಿಕ ರಾಜ್ಯ ಗ್ರಾಮೀಣಾಭಿ ವೃದ್ಧಿ ಹಾಗೂ ಪಂ.ರಾಜ್‌ ಇಲಾಖೆಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ನಡೆಸಿದ ಮೊದಲ ಸಮೀಕ್ಷೆಯಲ್ಲಿ ಜಿಲ್ಲೆಯ ಸುಮಾರು 2,000ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿತ್ತು. ಇತ್ತೀಚೆಗೆ ಗ್ರಾ.ಪಂ. ಮಟ್ಟದಲ್ಲಿ ಪರಿಶೀಲಿಸಿ ದಾಗ ಸುಮಾರು 803ರಷ್ಟು ಮನೆಗಳಿಗೆ ಶೌಚಾಲಯ ಇಲ್ಲದಿರುವ ಮಾಹಿತಿ ದೊರೆತಿದೆ. ಮಾರ್ಚ್‌ ಅಂತ್ಯದ ವೇಳೆಗೆ ಮನೆ ನಂಬರ್‌ ಇದ್ದು, ಶೌಚಾಲಯ
ಹೊಂದಿರದ ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಸ್ವತ್ಛ ಭಾರತ್‌ ಯೋಜನೆಯಡಿ 12 ಸಾವಿರ ರೂ. ನೆರವು ದೊರೆಯಲಿದೆ. ಬಳಿಕವೂ ಶೌಚಾಲಯ ಆಗದಿದ್ದರೆ ಪಂಚಾಯತ್‌ ಜವಾಬ್ದಾರನಾಗಲಿದೆ.

ರಾಜ್ಯದಲ್ಲೇ  ದ.ಕ. ಮೊದಲು
ಬಯಲು ಬಹಿರ್ದೆಸೆ ಮುಕ್ತ ಆಗಿರುವ ಗ್ರಾ.ಪಂ.ಗಳ ಎರಡನೇ ಹಂತದ ಪರಿಶೀಲನೆಗೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ಎಲ್ಲ ಜಿ.ಪಂ.ಗಳಿಗೆ ಸೂಚನೆ ನೀಡಿದೆ. ಇದರನ್ವಯ ಮೊದಲ ಹಂತದಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಅಂತರ್‌ ಗ್ರಾಮ, ಅಂತರ್‌ ತಾಲೂಕು ಮಟ್ಟದ ಪರಿಶೀಲನಾ ತಂಡ ರಚಿಸಲಾಗುತ್ತಿದೆ. ಮಾ.22ರೊಳಗೆ ಗ್ರಾ.ಪಂ. ಮಟ್ಟದ ವರದಿಯು ಜಿ.ಪಂ.ಗೆ ದೊರೆಯಲಿದೆ.
-ಡಾ| ಆರ್‌. ಸೆಲ್ವಮಣಿ,  ದ.ಕ. ಜಿ.ಪಂ. ಸಿಇಒ 

Advertisement

Udayavani is now on Telegram. Click here to join our channel and stay updated with the latest news.

Next