Advertisement
ವಿ.ವಿ.ಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸುವ ಮುನ್ನ ಹತ್ತು ಗ್ರೇಡ್-1 ಅಧಿಕಾರಿಗಳ ಹುದ್ದೆಗೆ ವಿಶ್ವವಿದ್ಯಾಲಯದಲ್ಲಿ ನೇರ ನೇಮಕಾತಿ ಮಾಡಿಸುವುದಾಗಿ ಹೇಳಿ ಹಣ ಪಡೆದುಕೊಂಡಿರುವ ಮಧ್ಯವರ್ತಿಗಳು, ಕುಲಪತಿ ಹಾಗೂ ಕುಲಸಚಿವರ ಫೋರ್ಜರಿ ಸಹಿ ಇರುವ ನಕಲಿ ಆದೇಶ ಪ್ರತಿ ನೀಡಿ ತಲೆ ಮರೆಸಿಕೊಂಡಿದ್ದಾರೆ.
Related Articles
Advertisement
ಪತ್ರದಲ್ಲೇನಿದೆ?: ಬೆಂಗಳೂರು ವಿವಿ ಲೆಟರ್ ಹೆಡ್ ಬಳಸಿರುವ ವಂಚಕ, ಪತ್ರದಲ್ಲಿ ವಿಶ್ವವಿದ್ಯಾಲಯದ ಕುಲಪತಿ, ನಾಮನಿರ್ದೇಶಿತ ಸದಸ್ಯ, ಕುಲಸಚಿವ, ಉನ್ನತ ಶಿಕ್ಷಣ ಸಚಿವ, ಮುಖ್ಯಮಂತ್ರಿಗಳ ಆದೇಶ ಮತ್ತು ರಾಜ್ಯಪಾಲರ ಕಚೇರಿಗಳ ನಕಲಿ ಆದೇಶ ಸಂಖ್ಯೆ ಉಲ್ಲೇಖೀಸಿದ್ದಾನೆ. ಆದೇಶ ಪ್ರತಿ, ಅನುಮೋದನೆ ಪತ್ರ, ಕರ್ನಾಟಕ ರಾಜ್ಯಪಾಲರ ನಾಮ ನಿರ್ದೇಶಕ ಸದಸ್ಯರ ನಿರಾಕ್ಷೇಪಣಾ ಪ್ರಮಾಣ ಪತ್ರ, ಜಿಲ್ಲಾ ವರಿಷ್ಠಾಧಿಕಾರಿಗಳ ದೃಢೀಕರಣ ಪತ್ರ, ಆರೋಗ್ಯ ಪ್ರಮಾಣ ಪತ್ರ, ಸಿಂಧುತ್ವ ಪತ್ರ ಸೇರಿದಂತೆ ಹಲವು ಅಗತ್ಯ ದಾಖಲೆಗಳೊಂದಿಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು.
2007ರಲ್ಲಿ ಕಾಣಿಸಿಕೊಂಡಿದ್ದ ವಂಚಕರು: ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರು ವಿವಿ ಸಿಬ್ಬಂದಿಯೇ ವಂಚನೆ ಮಾಡಿದ್ದ ಪ್ರಕರಣ 2007ರಲ್ಲಿ ಬೆಳಕಿಗೆ ಬಂದಿತ್ತು. ನಂತರ ಅನಧಿಕೃತ ವ್ಯಕ್ತಿಗಳು ವಿವಿ ಆವರಣ ಪ್ರವೇಶಿಸದಂತೆ ಎಚ್ಚರ ವಹಿಸಲಾಗಿತ್ತು. ಆದರೆ ಇತ್ತೀಚೆಗೆ ಮತ್ತೆ ವಿವಿ ಆವರಣದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸೀಟು, ಪದವಿ, ಕೆಲಸ ಕೊಡಿಸುವುದಾಗಿ ಹೇಳಿ ಹಣ ದೋಚುತ್ತಿರುವುದಾಗಿ ವಂಚನೆಗೊಳಗಾದ ವ್ಯಕ್ತಿ ಆರೋಪಿಸಿದ್ದಾರೆ.
ವಿವಿ ನಿರ್ಲಕ್ಷ್ಯವೇ ಕಾರಣ: ವಿಶ್ವವಿದ್ಯಾಲಯದ ಆವರಣಕ್ಕೆ ಪ್ರತಿನಿತ್ಯ ನೂರಾರು ಅನಧಿಕೃತ ವ್ಯಕ್ತಿಗಳು ಬರುತಿದ್ದು, ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ನೆರವಾಗುವ ಸೋಗಿನಲ್ಲಿ ವಂಚನೆ ಮಾಡುತಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಎಚ್ಚರಿಕೆ ವಹಿಸಬೇಕಿದ್ದು, ಅಂತಹ ಮಧ್ಯವರ್ತಿಗಳು ಕಂಡುಬಂದ ಕೂಡಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ. ವಿವಿಯ ಕೇಂದ್ರ ಕಚೇರಿ, ಪರೀಕ್ಷಾ ಭವನ ಸೇರಿ ಹಲವೆಡೆ ಮಧ್ಯವರ್ತಿಗಳು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಪ್ರಕಟಣೆಗಳನ್ನು ಪ್ರದರ್ಶಿಸಬೇಕು ಎಂದು ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ವೆಂಕಟಾಚಲ ಆಗ್ರಹಿಸಿದ್ದಾರೆ.
ಕುಲಪತಿ ಮತ್ತು ಕುಲಸಚಿವರ ಸಹಿ ನಕಲು ಮಾಡಿ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿರುವುದು ತಿಳಿದು ಬಂದಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಇಂತಹ ವಂಚನೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುತ್ತೇವೆ.-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ * ಲೋಕೇಶ್ ರಾಮ್