Advertisement

ಮಲೆನಾಡಿನ ಸುಂದರ ಪ್ರವಾಸಿ ತಾಣ, ಐತಿಹಾಸಿಕ ಹಿನ್ನಲೆಯ “ಕೆಳದಿ”

01:15 PM Apr 11, 2020 | Sharanya Alva |

ಇಡೀ ಸೃಷ್ಟಿಯಲ್ಲಿ ಮಲೆನಾಡಿನ ಸೌಂದರ್ಯದ ಪರಿಯೇ ಬೇರೆ ಬಗೆಯದು. ಅಲ್ಲಿನ ದಟ್ಟ ಕಾಡುಗಳು, ಚಳಿಯ ಹವೆ, ಹಸಿರ ನಡುವೆ ಹರಿವ ತಂಪಾದ ನೀರು, ಕಾಡ ಸೀಳಿಕೊಂಡು ಬರುವ ನೇಸರ, ರಕ್ಕಸನಂತಹ ಮರಗಳು ಇಷ್ಟೇ ಅಲ್ಲದೆ ಐತಿಹಾಸಿಕ ತಾಣಗಳು,  ಒಂದಲ್ಲ ಎರಡಲ್ಲ ಸಾವಿರಾರು ಸಂಗತಿಗಳು ಎಲ್ಲರ ಚಿತ್ತವನ್ನೂ ಸೆಳೆಯುತ್ತದೆ. ಅಂತಹ ಮಲೆನಾಡಿನಲ್ಲಿ ಒಂದು ಪುಟ್ಟ ತಾಲೂಕು ಸಾಗರ. ಈ ಪುಟ್ಟ ಊರಾದರೂ ಇಲ್ಲಿ ಅನೇಕರಿಗೆ ತಿಳಿಯದ ಹಲವಾರು ಪ್ರವಾಸಿ  ತಾಣಗಳಿವೆ. ನೋಡಲು ಚಿಕ್ಕದೆನಿಸುವ ಸ್ಥಳಗಳಾದರೂ ವಿಶೇಷವಾದ  ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳಗಳಿವೆ. ಅಂಥಹ ಸ್ಥಳಗಳಲ್ಲಿ ಒಂದಾದ ’ಕೆಳದಿಯ ಸುತ್ತ ಒಂದು ನೋಟವನ್ನು ಹರಿಸೋಣ.      

Advertisement

ಕೆಳದಿಯು ಕರ್ಣಾಟಕ ರಾಜ್ಯದ  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ  8 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ. ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಊರು ಪ್ರಬುದ್ಧಮಾನಕ್ಕೆ ಬಂದುದು 16ನೆಯ ಶತಮಾನದ ಆರಂಭದಲ್ಲಿ ; ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ. ಇಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತುದಾಗಿಯೂ ಅದರ ಸಹಾಯದಿಂದ ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಇತಿಹಾಸವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣಿಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ.

ಹೀಗೆ ಕೆಳದಿ ಸುಮಾರು 1500ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು. ಊರು ಬಹುಬೇಗ ಬೆಳೆಯಿತು. ಅರಮನೆ, ಕೋಟೆ, ಕೆರೆಗಳನ್ನುಇಲ್ಲಿ  ಚೌಡಪ್ಪನಾಯಕ ಕಟ್ಟಿಸಿದ. ಜೊತೆಗೆ ಸುಂದರವಾದ ರಾಮೇಶ್ವರ ದೇವಾಲಯವನ್ನೂ ಕಟ್ಟಿಸಿದ. ಇಲ್ಲಿ ವಿಸ್ತಾರವಾಗಿ ಹರಡಿರುವ ಹಳೆಯ ಊರಿನ ನಿವೇಶನಗಳೂ ದೇವಾಲಯಗಳೂ, ಕೆರೆ, ಮಠಗಳೂ ಅದರ ಹಿಂದಿನ ವೈಭವವನ್ನು ಸಾರುತ್ತಿವೆ. ಇಲ್ಲಿ ಹೋಯ್ಸಳ ದ್ರಾವಿಡ ಶೈಲಿಯಲ್ಲಿರುವ ರಾಮೇಶ್ವರ ದೇವಾಲಯ ಪ್ರಖ್ಯಾತವಾಗಿದೆ.

ಕೆಳದಿಗೆ ಕಾಲಿಡುತ್ತಿದ್ದಂತೆಯೇ ಎದುರಿಗೆ ರಾಮೇಶ್ವರ ದೇವಸ್ಥಾನ. ರಾಮೇಶ್ವರನ ಎಡಭಾಗದಲ್ಲಿ ಪಾರ್ವತಿ, ಬಲಭಾಗದಲ್ಲಿ ವೀರಭದ್ರನ ಗುಡಿಗಳಿವೆ. ಇವುಗಳೆಲ್ಲಾ ಹೊಯ್ಸಳ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ.

ಪಾರ್ವತಿ ದೇವಸ್ಥಾನ

Advertisement

ಮೊದಲು ಸಿಗುವುದು ಪಾರ್ವತೀ ದೇವಸ್ಥಾನ. ಇಲ್ಲಿನ ಛಾವಣಿಯೇ ಇಲ್ಲಿನ ಆಕರ್ಷಣೆಗಳಲ್ಲೊಂದು. ಇಲ್ಲಿರುವಂತಹ 40, 50 ಬಗೆಯ ಹೂವಿನ ಕೆತ್ತನೆಗಳಲ್ಲಿ ಪ್ರತಿಯೊಂದೂ ಭಿನ್ನವಾಗಿವೆ. ಇಲ್ಲಿನ ಮೇಲ್ಚಾವಣಿಯಲ್ಲಿ ದೇವಾನುದೇವತೆಗಳ ಕೆತ್ತನೆಗಳಿವೆ. ಇಲ್ಲಿ 32 ಕೈಗಳ ಗಣಪತಿಯ  ವಿಗ್ರಹವೊಂದಿದೆ. ಇದರ ಬಲಭಾಗದಲ್ಲಿರುವುದು ಶ್ರೀರಾಮೇಶ್ವರ ದೇವಸ್ಥಾನ. ಪಾರ್ವತಿ ರಾಮೇಶ್ವರ ದೇಗುಲಗಳ ಮಧ್ಯೆ ಇರುವ ಪ್ರದಕ್ಷಿಣಾಪಥದ ಇಕ್ಕೆಲಗಳ ಗೋಡೆಗಳಲ್ಲಿ ಅನೇಕ ದೇವಾನುದೇವತೆಗಳ, ಅಪ್ಸರೆಯರ, ರಾಮಾಯಣ ಮಹಾಭಾರತಗಳ ಕೆತ್ತನೆಗಳಿವೆ.

ರಾಮೇಶ್ವರ ದೇವಸ್ಥಾನ

ರಾಮೇಶ್ವರ ದೇಗುಲದಲ್ಲಿ ಇಕ್ಕೇರಿಯಲ್ಲಿದ್ದಂತೆ ಆಳೆತ್ತರದ ನಂದಿಯಿರದೇ, ಶಿವನೆದುರು ಪುಟ್ಟನಂದಿಯಿದ್ದಾನೆ. ಈ ದೇಗುಲದ ಎದುರಿನ ನೆಲದಲ್ಲಿ ಹುಲಿ ಹಸು ಆಟದ ಪಟವನ್ನು, ಹಳಗನ್ನಡದ ಬರಹಗಳನ್ನೂ ಕಾಣಬಹುದು.

ವೀರಭದ್ರ ದೇವಸ್ಥಾನ

ವೀರಭದ್ರನಗುಡಿಯ ಮೇಲ್ಛಾವಣಿಯಲ್ಲಿ ಕೆಳದಿಸಾಮ್ರಾಜ್ಯದ ಲಾಂಛನ ಗಂಢಭೇರುಂಡವನ್ನು ಕಾಣಬಹುದು. ಆಗ ಕೆಲವು ಸಾರ್ಮಾಜ್ಯಗಳದ್ದು ಆನೆ ಲಾಂಛನವಾಗಿತ್ತು, ಕೆಲವದ್ದು ಸಿಂಹ. ಈ ಆನೆ, ಸಿಂಹಗಳೆರಡನ್ನು ತನ್ನ ಕಾಲುಗಳಲ್ಲಿ ಬಂಧಿಸಿದ ಎರಡು ತಲೆಯ ಗಂಢಭೇರುಂಡವನ್ನು ಲಾಂಛನವನ್ನಾಗಿಸಿದ ಕೆಳದಿಯ ಅರಸರು ತಮ್ಮ ಸಾಮ್ರಾಜ್ಯ ಎಲ್ಲರಿಗಿಂತಲೂ ಶಕ್ತಿಶಾಲಿಯಾಗಿ ಬೆಳೆಯಲೆಂದು ಆಸೆಪಟ್ಟಿದ್ದರು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ವೀರಭದ್ರನಗುಡಿಯ ಗರ್ಭಗೃಹದ ಬಾಗಿಲನ್ನು ನೋಡಿದರೆ ಮೇಲ್ಗಡೆ ಕೃಷ್ಣನ ಪುಟ್ಟ ವಿಗ್ರಹ ಕಾಣುತ್ತದೆ. ವಿಜಯನಗರದ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನಿಗೆ ಸಾಮಂತರಾದ ಕೆಳದಿ ಅರಸರ ಗೌರವವನ್ನುಇದು ಬಿಂಬಿಸುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಈ ದೇಗುಲದಲ್ಲಿ ಶುಕಭಾಷಿಣಿ, ಗಾರ್ಧಭಮಾನವ ಮುಂತಾದ ಕೆತ್ತನೆಗಳನ್ನು ಕಾಣಬಹುದು.

ವೀರಭದ್ರದೇವಸ್ಥಾನದಿಂದ ಗಂಡಭೇರುಂಡ ಇರುವ ದಿಕ್ಕಿನ ಬಾಗಿಲಲ್ಲಿ ಹೊರಬಂದರೆ ಒಂದು ಧ್ವಜಸ್ಥಂಬ ಸಿಗುತ್ತದೆ. ಸಪ್ತಮಾತೃಕೆಯರು, ಗಣಪತಿ ಇದರ ವಿಶೇಷತೆ. ಈ ದೇಗುಲದ ಹೊರಗೋಡೆಗಳ ಮೇಲೆ ದಶಾವತಾರದ ಕೆತ್ತನೆಗಳಿವೆ. ಜೊತೆಯಲ್ಲಿ ವಾಸ್ತುಪುರುಷ, ಶುಕಮುನಿ ಮತ್ತು ಗಿಳಿ, ನರಸಿಂಹ  ಮುಂತಾದ ಕೆತ್ತನೆಗಳನ್ನು ನೋಡಬಹುದು.

ದೇವಾಲಯಗಳ ಹೊರಾಂಗಣದಲ್ಲಿ ಒಂದು ನಾಗರಬನವಿದೆ. ಅದರ ಪಕ್ಕದಲ್ಲಿ ಆಗಿನ ಕಾಲದ ಪಣತವನ್ನು ಕಾಣಬಹುದು. ವಾಸ್ತುಪುರುಷ ವೀರಭದ್ರದೇಗುಲದ ಹೊರಾಂಗಣದ ಮುಖ್ಯ ಆಕರ್ಷಣೆ. ಸುಧಾರಿತ ಅಳತೆ, ತೆರಿಗೆ ಪದ್ದತಿಗೆ ಒತ್ತು ಕೊಟ್ಟರೆಂದು ನಂಬಲಾದ ಕೆಳದಿ ಅರಸರ ಕಾಲದ ಅಳತೆಪಟ್ಟಿಯನ್ನು ಈ ಮೂರ್ತಿಯ ಪಕ್ಕದಲ್ಲಿ ನೋಡಬಹುದು.

ಕೆಳದಿ ಸಂಸ್ಥಾನದ ರಾಜಧಾನಿಗಳು ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ  ಸಾಗರ ದಿಂದ 8 ಕಿ.ಮೀ. ದೂರದ ಕೆಳದಿ, 5 ಕಿ.ಮೀ. ದೂರದ ಇಕ್ಕೇರಿ,  ಹೊಸನಗರ  ತಾಲ್ಲೂಕಿನಲ್ಲಿರುವ ಬಿದನೂರು(ನಗರ) ಮತ್ತು ತೀರ್ಥಹಳ್ಳಿಗೆ 15 ಕಿ.ಮೀ. ದೂರದಲ್ಲಿರುವ ಕವಲೆದುರ್ಗ.

ಸಾಂಸ್ಕೃತಿಕ ಅಂಶಗಳು

ಕೆಳದಿ ಅರಸರ ಕಾಲದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಇಂಬುಕೊಡಲಾಯಿತು. ಶಿವಮೊಗ್ಗೆಯಲ್ಲಿರುವ ಶಿವಪ್ಪನಾಯಕನ ಅರಮನೆ, ಕೆಳದಿಯ ರಾಮೇಶ್ವರ ದೇವಾಲಯ, ವೀರಭದ್ರ ದೇವಾಲಯ, ಬಿದನೂರು ಆಂಜನೇಯದೇವಾಲಯ, ಕೋಟೆಗಳು, ಗುಡ್ಡೆವೆಂಕಟರಮಣ ದೇವಾಲಯ, ನೀಲಕಂಠೇಶ್ವರ ದೇವಾಲಯ, ಇಕ್ಕೇರಿಯ ಅಘೋರೇಶ್ವರ ದೇವಾಲಯ, ನಗರದ ಬಳಿ ಇರುವ ದೇವಗಂಗೆ ಮುಂತಾದವು ಕೆಳದಿ  ಅರಸರ ವಾಸ್ತುಶಿಲ್ಪ ಚಾತುರ್ಯವನ್ನು ಹೇಳುತ್ತವೆ. ಈ ಅರಸರು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಯ ಕವಿ ವಿದ್ವಾಂಸರಿಗೆ ಆಶ್ರಯವನ್ನಿತ್ತಿದ್ದರು.

ಕೆಳದಿ ವಸ್ತುಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ

ಕೆಳದಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರವನ್ನು ನೋಡಬಹುದು. ಕೆಳದಿ ಅರಸರ ಕಾಲದ ಇತಿಹಾಸದ ಪರಿಚಯ ಮಾಡಿಕೊಡುವ ಇಲ್ಲಿರುವ ಕೆಳದಿಯರಸರ ಅಥವಾ ಅದಕ್ಕಿಂತಲೂ ಹಿಂದೆ ಸಿಕ್ಕಿದ ಪ್ರಮುಖ ಶಿಲ್ಪಗಳೆಂದರೆ

1.        ನಂದಿಯ ಮೇಲಿನ ಶಿವಲಿಂಗ

2.        ಲಕ್ಷ್ಮೀನಾರಾಯಣ

3.        ಚೆನ್ನಕೇಶವ

4.        ಭೈರವ

5.        ಮಹಿಷಾಸುರಮರ್ಧಿನಿ

6.        ಆಂಜನೇಯ

7.        ಕೆಳದಿಯರಸರ ಕಾಲದ ಇಟ್ಟಿಗೆ, ಹಂಚುಗಳು

8.        ತೂಕ/ವ್ಯಾಯಾಮದ ಕಲ್ಲುಗಳು

9.        ಯಲಕುಂದ್ಲಿಯಲ್ಲಿ ದೊರೆತ ರಾಚಮ್ಮದೇವಿಯ ಶಿಲ್ಪ

10.      ವಾಸ್ತುಕಂಬ

11.      ಜೈನತೀರ್ಥಂಕರರು

12.      ಕೆಳದಿಯರಸರ ಕುದುರೆಲಾಳ, ಕವಣೆಕಲ್ಲು, ಶಿಲಾಯಗ ಕಾಲದ ಆಯುಧಗಳು

13.      ಅಕ್ಕಿಬೀಸೋಕಲ್ಲು

14.      ಪಾರ್ಶ್ವನಾಥ

15.      ಮಣ್ಣಿನವಸ್ತುಗಳು

16.      ಗಣಪತಿ

17.      ಮಡಿಕೆಗಳು

18.      ಮರದತೊಟ್ಟಿಲು

19.      ಜೈನರಬ್ರಹ್ಮದೇವ

20.      ಹೂವಿನರಸದಿಂದ ಚಿತ್ರಗಳನ್ನು ರಚಿಸುತ್ತಿದ್ದ ಎಸ್.ಕೆ. ಲಿಂಗಣ್ಣ ಅವರ ಭಾವಚಿತ್ರ

21.      ರಾಜರ ಕಾಲದ ಖಡ್ಗಗಳು

22.      ರಥದ ಮುಂಭಾಗದ ಭಾಗಗಳು

23.      ಮಸಾಲೆ ಅರೆಯುವ ಕಲ್ಲು

24.      ಮದಕಗಳು

25.      ತುಳಸೀಕಟ್ಟೆ

26.      ಕೆಳದಿ ಸಂಸ್ಥಾನಕ್ಕೆ ಬಂದ ಪತ್ರಗಳು, ಮೈಸೂರರಸರ ಮದುವೆಯ ಪತ್ರ ಇತ್ಯಾದಿ

27.      ಕಾಲುಗ

28.      ಹೂವು ಹಣ್ಣಿನ ರಸದಲ್ಲಿನ ಎಸ್.ಕೆ.ಲಿಂಗಣ್ಣ ಅವರ ಪೈಂಟಿಂಗುಗಳು

29.      ತಾಳೇಗರಿಗಳು

30.      ತಾಳೇಗರಿ ಕಟ್ಟಲು ಬಳಸೋಪಟ್ಟಿ, ಆಗಿನ ಕಾಲದ ಶಾಹಿಯ ಲೇಖನಿಗಳು

31.      ಶಿವಪ್ಪ ನಾಯಕನ ಫೋಟೋ

32.      ಅಚ್ಚರಾದಿಮಾರ್ಗ

33.      ಪ್ರಪಂಚದ ಭೂಪಟವನ್ನು ತೋರಿಸುವ ರಾಣಿ ವಿಕ್ಟೋರಿಯಾ ಪೈಟಿಂಗ್

34.  ಸಣ್ಣ ಅಕ್ಷರಗಳಲ್ಲಿ ಬರೆದ ಭಗವದ್ಗೀತೆಯ ಶ್ಲೋಕಗಳಿಂದಲೇ ರಚಿತವಾದ ಭಗವದ್ಗೀತಾ ಪೈಂಟಿಂಗ್

35.      ವಿಠಲ

36.   ರಥದಬಿಡಿ ಭಾಗಗಳು

ಪಕ್ಕದಲ್ಲಿರೋ ವಿಭಾಗದಲ್ಲಿ ಕೆಳದಿಯರಸರು ತೋಂಟಗಾರ ದಂಬಾಳಮಠಕ್ಕೆ ಕೊಟ್ಟಪಲ್ಲಕ್ಕಿ ಘಂಟೆ, ಶೃಂಗೇರಿ ಮಠಕ್ಕೆಕೊಟ್ಟ ಸ್ಫಟಿಕಲಿಂಗ ಹೀಗೆ ಬೇರೆ ,ಬೇರೆ ಮಠ, ಮಂದಿರಗಳಿಗೆ ಕಾಣಿಕೆ ಕೊಟ್ಟ ವಸ್ತುಗಳ ಫೋಟೋ ಮಾಹಿತಿಯನ್ನು, ಯಕ್ಷಗಾನದ ಪರಿಕರಗಳು, ಸಂಗೀತವಾದ್ಯಗಳು ಮುಂತಾದವನ್ನೂ ಕಾಣಬಹುದು. ಇಲ್ಲಿ ತಾಳೇಗರಿಗಳನ್ನೂ ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿದೆ.

ಮಾರ್ಗ ಸೂಚಿ:

ಕೆಳದಿಗೆ ಶಿವಮೊಗ್ಗದಿಂದ 80 ಕಿ.ಮೀ, ಸಾಗರದಿಂದ 8 ಕಿ.ಮೀ ದೂರ. ಸಾಗರದಿಂದ ಕನಿಷ್ಟ ಪ್ರತೀ ಅರ್ಧ ಗಂಟೆಗಾದರೂ ಒಂದರಂತೆ ಕೆಳದಿಗೆ ಬಸ್ಸುಗಳಿವೆ.

ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು;

1. ಸಾಗರ ದಿಂದ 5 ಕಿ. ಮೀ ದೂರದಲ್ಲಿರುವ  ಇತಿಹಾಸ ಪ್ರಸಿದ್ಧ ಸ್ಥಳ ಇಕ್ಕೇರಿ.

2. ವರದಾ ಮೂಲ : ವರದಾ ನದಿಯ ಉಗಮಸ್ಥಾನ, ಸಾಗರದಿಂದ 6 ಕಿ.ಮಿ.

3. ವರದಹಳ್ಳಿ ಶ್ರೀಧರಾಶ್ರಮ : ಪ್ರಸಿದ್ಧ ಅವದೂತರಾಗಿದ್ದ ಸದ್ಗುರು ಶ್ರೀಧರ ಸ್ವಾಮಿಗಳ ಸಮಾಧಿ, ಆಶ್ರಮ ಮತ್ತು ದುರ್ಗಾಂಬ ದೇವಾಲಯ. ಸಾಗರದಿಂದ 6 ಕಿ.ಮಿ.

4. ನೀನಾಸಂ ರಂಗ ಕೇಂದ್ರ : ಸಾಗರದಿಂದ 9 ಕಿ. ಮೀ ದೂರದಲ್ಲಿರುವ ಹೆಗ್ಗೋಡು ಎಂಬ ಸಣ್ಣ ಗ್ರಾಮದಲ್ಲಿರುವ ಸುಪ್ರಸಿದ್ಧ  ನೀಲಕಂಠೇಶ್ವರ ನಾಟಕ ಸಂಘ ರಂಗ ಕೇಂದ್ರ.

5. ಜೋಗ ಜಲಪಾತ: ಸಾಗರದಿಂದ 26 ಕಿ.ಮೀ ದೂರದಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತ.

ಮಲೆನಾಡನ್ನು ಒಮ್ಮೆ ಸುತ್ತಿದರೆ ಇತಿಹಾಸಕ್ಕೂ, ಪ್ರಕೃತಿಯ ಮಡಿಲಿಗೂ ಒಂದು ಸುತ್ತು ಬಂದಂತಾಗುವುದಲ್ಲದೆ, ಕಣ್ಣಿಗೂ  ಮನಸ್ಸಿಗೂ ಮುದು ಒದಗುವುದಂತೂ ಖಚಿತ.

*ಪ್ರಭಾ ಭಟ್, ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next