ಬೆಂಗಳೂರು: ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಕೊಡುವ ಉದ್ದೇಶದಿಂದ ಸೆಪ್ಟಂಬರ್ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ ವಿಕಾಸಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸೀಮಿತವಾಗಿ ಈ ಉದ್ಯೋಗ ಮೇಳೆ ನಡೆಯಲಿದ್ದು, ಇದರಲ್ಲಿ ವಿವಿಧ 200ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿವೆ ಎಂದರು.
ಸದ್ಯ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಸೀಮಿತಗೊಳಿಸಿ ಉದ್ಯೋಗ ಮೇಳ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹತ್ತಿರದ ನಾಲ್ಕೈದು ಜಿಲ್ಲೆಗಳನ್ನು ಸೇರಿಸಿ ರಾಜ್ಯದ ವಿವಿಧ ಕಡೆ ಈ ರೀತಿಯ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದು ಇದೇ ವೇಳೆ ದೇಶಪಾಂಡೆ ತಿಳಿಸಿದರು.
ನಮ್ಮಲ್ಲಿ ಅನೇಕರಿಗೆ ಉದ್ಯೋಗಕ್ಕೆ ಬೇಕಾದರೆ ಶೈಕ್ಷಣಿಕ ಅರ್ಹತೆ ಇದೆ. ಆದರೆ, ಅವರಲ್ಲಿ ಆ ಉದ್ಯೋಗಕ್ಕೆ ಬೇಕಾದ ಕೌಶಲ್ಯತೆ ಇರುವುದಿಲ್ಲ. ಈ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುತ್ತಿದ್ದು, ಪ್ರತಿಯೊಬ್ಬ ವಿದ್ಯಾವಂತರನ್ನು ಉದ್ಯೋಗ ಅರ್ಹರನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಉದ್ಯೋಗಕಾಂಕ್ಷಿಗಳು ಸಲ್ಲಿಸುವ ಅರ್ಜಿಗಳಿಗೆ ಸ್ಪಂದಿಸಲು ಕೌಶಲ್ಯಾಭಿವೃದ್ಧಿ ಇಲಾಖೆಯ ಸಾಫ್ಟ್ವೇರ್‌ನಲ್ಲಿ ಪ್ರತ್ಯೇಕ ಅವಕಾಶ ಮಾಡಿಕೊಡಲಾಗುವುದು. ಅಲ್ಲದೇ ಈ ಪಟ್ಟಿಯನ್ನು ಕಾಸಿಯಾದಂತಹ ಕೈಗಾರಿಕಾ ಸಂಸ್ಥೆಗಳಿಗೆ ನೀಡಲಾಗುವುದು ಎಂದರು.
ಸಭೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಆದಿತ್ಯ ಅಮ್ಲಾನ್ ಬಿಸ್ವಾಸ್, ಎಫ್ಕೆಸಿಸಿಐ, ಕಾಸಿಯಾ ಸೇರಿದಂತೆ ಹಲವು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.