ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯ ಲೀಡ್ಸ್ ನ ಹೇಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿದೆ. ಇಂಗ್ಲೆಂಡ್ ನ ಭಾರೀ ಮೊತ್ತದ ಲೀಡ್ ಬೆನ್ನತ್ತಿರುವ ಭಾರತ ತಂಡ ಸದ್ಯ ಸಮಾಧಾನಕರ ಪರಿಸ್ಥಿತಿಯಲ್ಲಿದೆ. ಮೂರನೇ ದಿನದಾಟದಲ್ಲಿ ಭಾರತದ ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರು.
ಆದರೆ ಮೂರನೇ ದಿನದಾಟದ ಪಂದ್ಯದಲ್ಲಿ ತಮಾಷೆಯ ಘಟನೆಯೊಂದು ನಡೆಯಿತು. ಎರಡನೇ ಪಂದ್ಯದಲ್ಲಿ ಭಾರತದ ಪರ ಫೀಲ್ಡಿಂಗ್ ನಡೆಸುವುದಾಗಿ ಮೈದಾನಕ್ಕೆ ನುಗ್ಗಿದ್ದ ಜಾರ್ವೋ ಶುಕ್ರವಾರವೂ ಪ್ರತ್ಯಕ್ಷರಾದರು. ಪ್ರೇಕ್ಷಕರಿಗೆ ತಮಾಷೆಯ ಸಂಗತಿಯಾದರೆ, ಸೆಕ್ಯುರಿಟಿ ಸಿಬ್ಬಂದಿಗೆ ಮಾತ್ರ ಪೀಕಲಾಟವಾಯಿತು.
ಮೂರನೇ ದಿನದಾಟದಲ್ಲಿ ಭಾರತದ ರೋಹಿತ್ ಶರ್ಮಾ ಅವರು ರಾಬಿನ್ಸನ್ ಎಸೆತಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಈ ವೇಳೆ ಭಾರತದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೆ ಬರಬೇಕಿತ್ತು. ಆದರೆ ಭಾರತದ ಜೆರ್ಸಿ ಧರಿಸಿ, ಪ್ಯಾಡ್ ಕಟ್ಟಿಕೊಂಡು ಬ್ಯಾಟ್ ಹಿಡಿದುಕೊಂಡು ಜಾರ್ವೋ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು.
ಇದನ್ನೂ ಓದಿ:ತಾಲಿಬ್ ತಂಡ ತಾಲಿಬಾನ್ ಆಯ್ತು!: ರಾಜಸ್ಥಾನದ ಕ್ರಿಕೆಟ್‌ನಲ್ಲಿ ಎಡವಟ್ಟು
ಜಾರ್ವೋ ಪಿಚ್ ಗೆ ಆಗಮಿಸಿ ಬ್ಯಾಟಿಂಗ್ ನಡೆಸಲು ಮುಂದಾಗಿದ್ದನ್ನು ಕಂಡ ಸೆಕ್ಯುರಿಟಿ ಸಿಬ್ಬಂದಿ ಕೂಡಲೇ ಆತನನ್ನು ಹೊರಕ್ಕೆ ಸಾಗಿಸಲು ಮುಂದಾದರು. ಜಾರ್ವೋನನ್ನು ಮೈದಾನದಿಂದ ಹೊರಹಾಕಲು ಸಿಬ್ಬಂದಿ ಪರದಾಟವೇ ನಡೆಸಬೇಕಾಯಿತು.
ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಎರಡು ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ. 91 ರನ್ ಗಳಿಸಿರುವ ಪೂಜಾರ ಮತ್ತು 45 ರನ್ ಗಳಿಸಿರುವ ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 78 ರನ್ ಗೆ ಆಲೌಟ್ಆಗಿದ್ದರೆ, ಇಂಗ್ಲೆಂಡ್ 432 ರನ್ ಗಳಿಸಿದೆ. ಭಾರತ ಇನ್ನೂ 139 ರನ್ ಹಿನ್ನಡೆಯಲ್ಲಿದೆ.