ಪಿರಿಯಾಪಟ್ಟಣ: ಪ್ರವಾಹದಿಂದ ತಾಲೂಕಿನ ಕಾವೇರಿ ನದಿ ತೀರದಲ್ಲಿ ಸುಮಾರು 3,000 ಎಕರೆ ಪ್ರದೇಶ ಮುಳುಗಡೆಯಾಗಿ 25 ಲಕ್ಷ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.
ತಾಲೂಕಿನ ಕೊಪ್ಪ ಗಡಿಭಾಗ ಹಾಗೂ ಕಾವೇರಿ ನದಿ ಪ್ರಾಂತ್ಯದ 14 ಗ್ರಾಮಗಳಲ್ಲಿ 107 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳು ಜಲಾವೃತವಾಗಿದ್ದು, ಒಟ್ಟು 166 ಮನೆಗಳು ಕುಸಿದು ಬಿದ್ದಿವೆ. ಕೊಪ್ಪಗಡಿ ಭಾಗದ ಜಮೀನುಗಳು ನೀರಿನಿಂದ ಆವರಿಸಿವೆ. ಮನೆ ಕಳೆದುಕೊಂಡ ಸಂತ್ತಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ರಕ್ಷಣಾ ತಂಡ: ಪ್ರವಾಹ ತಗ್ಗುವವರೆಗೂ ಅದೇ ಸ್ಥಳದಲ್ಲಿ ವಾಸ್ತವ್ಯ ಹೂಡಲು ಸೂಚಿಸಿದ್ದು, ಮೂಲ ಸೌಕರ್ಯಗಳನ್ನು ತಾಲೂಕು ಆಡಳಿತ ಕಲ್ಪಿಸಿದೆ. ಮನೆಗಳನ್ನು ಕಳೆದುಕೊಂಡವರಿಗೆ ಈಗಾಗಲೇ ಪರಿಹಾರ ನೀಡಲು ತಾಲೂಕು ಆಡಳಿತ ಸಿದ್ಧವಿದೆ ಎಂದು ತಹಶೀಲ್ದಾರ್ ಶ್ವೇತಾ ಎನ್. ರವಿಂದ್ರ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿವಾರು 3 ಪೊಲೀಸ್, ಓರ್ವ ಸಿವಿಲ್ ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ಸೇರಿದಂತೆ ರಕ್ಷಣಾ ತಂಡ ರಚಿಸಿದ್ದು, ಎಲ್ಲಾ ರೀತಿಯ ಮುಂಜಾಗ್ರತೆ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಶುಂಠಿ, ತಂಬಾಕಿಗೆ ಪರಿಹಾರವಿಲ್ಲ: ತಾಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೊಪ್ಪ, ಆವರ್ತಿ, ಮುತ್ತಿನ ಮುಳುಸೋಗೆ, ಸೂಳೇಕೋಟೆ, ಶಾನುಭೋಗನಹಳ್ಳಿ, ರಾಣಿಗೇಟ್, ಗೋಲ್ಡನ್ ಟೆಂಪಲ್, ಗಿರಗೂರು ಸೇರಿದ ಜಮೀನಿಗೆ ಕಾವೇರಿ ನದಿಯ ನೀರು ನುಗ್ಗಿದ್ದು ಇಲ್ಲಿ ಬೆಳೆದಿದ್ದ ಮುಸುಕಿನ, ತಂಬಾಕು, ಶುಂಠಿ, ಬಾಳೆ, ಅಡಕೆ ಮತ್ತಿತರ ಬೆಳೆ ಹಾನಿಗೊಳಗಾಗಿದೆ. ಮುಸುಕಿನ ಜೋಳ, ಬಾಳೆ, ಅಡಕೆ ಬೆಳೆಗಳಿಗೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ.
ಆದರೆ, ಶುಂಠಿ ಮತ್ತು ತಂಬಾಕು ಬೆಳೆಗೆ ಕೇಂದ್ರ ಸರ್ಕಾರದ ನಿಯಮಾವಳಿ ಅನ್ವಯ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ತಿಳಿಸಿದರು. ಮುಸುಕಿನ ಜೋಳ ಮತ್ತು ಬಾಳೆ ಬೆಳೆ ಇನ್ನು ಕಟಾವಿಗೆ ಬಂದಿಲ್ಲ. ಶುಂಠಿ ಬೆಳೆ ಮುಳುಗಿರುವುದರಿಂದ ಕೊಳೆತು ಹೋಗುವ ಭೀತಿ ಇದೆ. ರೈತರು ಅವಧಿಗೆ ಮೊದಲೇ ಭೂಮಿಯಿಂದ ಕಿತ್ತು ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾರೆ. ತಂಬಾಕು ಎಲೆಗಳು ನೀರಿನಲ್ಲಿ ಕೊಳೆಯುತ್ತಿವೆ.
ಕಾಮಗಾರಿ ಜಲಾವೃತ: ತಾಲೂಕಿನ ಮುತ್ತಿನ ಮುಳುಸೋಗೆ ಗ್ರಾಮದ ಬಳಿ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಸ್ಥಳ ಸಂಪೂರ್ಣವಾಗಿ ಜಲಾವೃತವಾಗಿದೆ.