ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ರಿಷಭ್ ಶೆಟ್ಟಿ ಅಭಿನಯದ “ಹೀರೋ’ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಚಿತ್ರದ ಪೈರಸಿ ಕಾಪಿಗಳು ಅಲ್ಲಲ್ಲಿ ಹರಿದಾಡಿ ಚಿತ್ರತಂಡಕ್ಕೆ ಒಂದಷ್ಟು ನಷ್ಟವನ್ನೂ ಉಂಟು ಮಾಡಿದೆ.
ಈ ಬಗ್ಗೆ ಮಾತನಾಡಿರುವ ನಟ ಪುನೀತ್ ರಾಜಕುಮಾರ್, “ದಿನದಿಂದ ದಿನಕ್ಕೆ ಮನುಷ್ಯರನ್ನೂ ಮೀರಿ ತಂತ್ರಜ್ಞಾನ ಬೆಳೆಯುತ್ತಿದೆ. ಹೀಗಿರುವಾಗ ತಂತ್ರಜ್ಞಾನದಿಂದ ಪೈರಸಿ ತಡೆಯಲು ಸಾಧ್ಯವಿಲ್ಲ. ನಾವೇ ಸ್ವ ಇಚ್ಛೆಯಿಂದ ಪೈರಸಿ ತಡೆಯಲು ಮುಂದಾಗಬೇಕು. ಪೈರಸಿ ಕಾಪಿಗಳನ್ನು ನೋಡದಿದ್ದರೆ, ಯಾರೂ ಪೈರಸಿ ಮಾಡೋದಕ್ಕೂ ಯಾರೂ ಮುಂದಾಗುವುದಿಲ್ಲ’ ಎಂದಿದ್ದಾರೆ.
“ಪೈರಸಿಯಂತಹ ಕೆಲಸಗಳು ಸಿನಿಮಾರಂಗಕ್ಕೆ ಮಾರಕ. ಈ ಬಗ್ಗೆ ಸಿನಿಮಾದವರು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಇದಲ್ಲದೆ, ಪ್ರೇಕ್ಷಕರೇ ಎಚ್ಚೆತ್ತುಕೊಂಡು ಪೈರಸಿ ಆಗಿರುವ ಕಾಪಿಗಳನ್ನು ನೋಡದಿರುವುದೇ ಪೈರಸಿ ತಡೆಗಿರುವ ಉತ್ತಮ ಮಾರ್ಗ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ :98 ವರ್ಷದ ಈ ತಾತನ ಕೆಲಸ ಎಂಥವರಿಗೂ ಸ್ಪೂರ್ತಿ..!
ಇದರ ಬೆನ್ನಲ್ಲೆ ಮತ್ತೂಂದು ಬಿಗ್ ಬಜೆಟ್ ಚಿತ್ರ “ರಾಬರ್ಟ್’ ಕೂಡ ಇಂದು ಬಿಡುಗಡೆಯಾಗುತ್ತಿದ್ದು, “ರಾಬರ್ಟ್’ಗೂ ಪೈರಸಿ ಆತಂಕ ಎದುರಾಗಿದೆ. ಈಗಾಗಲೇ ಪೈರಸಿ ಮಾಡುವವರ ಎಚ್ಚರಿಕೆ ನೀಡಿರುವ “ರಾಬರ್ಟ್’ ನಿರ್ಮಾಪಕ ಉಮಾಪತಿ, ನಮ್ಮ ಸಿನಿಮಾಗಳ ಯಾವುದೇ ಭಾಗ ಪೈರಸಿ ಆಗಿರುವುದು ಕಂಡು ಬಂದರೆ ತಪ್ಪಿತಸ್ಥರನ್ನು ಖಂಡಿತವಾಗಿಯೂ ಕಾನೂನಿನ ಅಡಿಯಲ್ಲಿ ಶಿಕ್ಷಿಸದೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.