ತುಮಕೂರು: 2021ರ ವೇಳೆ ನಗರದ ಎಲ್ಲಾ ಮನೆಗಳಿಗೆ ಪೈಪ್‌ಲೈನ್ ಗ್ಯಾಸ್ ಸಂಪರ್ಕ ಯೋಜನೆ ಜಾರಿಯಾಗಲಿದೆ ಎಂದು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್, ಭವಿತ್ ಕನ್‌ಸ್ಟ್ರಕ್ಷನ್ ಸಹಯೋಗದಲ್ಲಿ ನಿರ್ಮಾಣ ಗೊಂಡಿರುವ ಮನೆ ಮನೆಗೆ ಪೈಪ್‌ಲೈನ್ ಮೂಲಕ ನೈಸರ್ಗಿಕ ಅಡುಗೆ ಅನಿಲ ಸರಬರಾಜು ಮಾಡುವ ಕಾರ್ಯಕ್ಕೆ ಶುಕ್ರವಾರ 26ನೇ ವಾರ್ಡ್‌ನ ಜಯಮ್ಮ ಕವನಯ್ಯ ಅವರ ಮನೆಯಲ್ಲಿ ಗ್ಯಾಸ್ ಸ್ಟೌವ್‌ಗೆ ಚಾಲನೆ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಹೆಚ್ಚು ಸುಭದ್ರ: ನಗರದಲ್ಲಿ ಹಲವಾರು ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಮನೆಮನೆಗೆ ಗ್ಯಾಸ್ ಸಂಪರ್ಕ ನೀಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಪೈಪ್‌ಲೈನ್ ಗ್ಯಾಸ್ ಸಂಪರ್ಕ ನೀಡಲಾಗಿದೆ. ಅಡುಗೆ ಅನಿಲ ಸಿಲಿಂಡರ್‌ಗೆ ಹೋಲಿಸಿದರೆ ಪೈಪ್‌ಲೈನ್ ಮೂಲಕ ಸರಬರಾಜು ಹೆಚ್ಚು ಸುಭದ್ರ ಎನ್ನ ಲಾಗುತ್ತಿದೆ. ಇದರಲ್ಲಿ ಸರಬರಾಜಾಗುವುದು ನೈಸರ್ಗಿಕ ಇಥೇನ್ ಗ್ಯಾಸ್, ಒತ್ತಡದಿಂದ ಸ್ಫೋಟ ಗೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಿದರು.
ಇದೊಂದು ಒಳ್ಳೆಯ ಯೋಜನೆ. ಸ್ಮಾರ್ಟ್ ಸಿಟಿ ಯಾಗುತ್ತಿರುವ ತುಮಕೂರು ಮತ್ತಷ್ಟು ಸುಸಜ್ಜಿತವಾಗಿ ಹೊಗೆ ರಹಿತ ನಗರವಾಗಲು ಇದು ಸಹಕಾರಿ. ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೇಯರ್ ಲಲಿತಾ ರವೀಶ್ ಸಲಹೆ ನೀಡಿದರು.
ಚಾಲ್ತಿಯಲ್ಲಿದೆ ಹಲವು ಯೋಜನೆ: 26ನೇ ವಾರ್ಡ್ ಕೌನ್ಸಿಲರ್ ಮಲ್ಲಿಕಾರ್ಜುನ ಮಾತನಾಡಿ, 26ನೇ ವಾರ್ಡ್ ಪ್ರಾಯೋಗಿಕವಾಗಿ ಅನೇಕ ಹೊಸ ಯೋಜನೆ ಅಳವಡಿಸಿಕೊಳ್ಳುವ ಮೂಲಕ ಇತರ ವಾರ್ಡ್‌ಗಳಿಗೆ ಮಾದರಿಯಾಗಿದೆ. ಕುಡಿಯುವ ನೀರಿಗೆ ಮೀಟರ್ ಅಳವಡಿಕೆ, ಮನೆಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ವಿತರಣೆ ಸೇರಿ ಹಲವು ಯೋಜನೆ ಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಎಲ್ಲರೂ ನೀರು ಮತ್ತು ಗ್ಯಾಸ್ ಸಂಪರ್ಕ ಪಡೆದರೆ ಅನುಕೂಲ ಆಗಲಿದೆ ಎಂದು ಹೇಳಿದರು.
ಶೇ. 40ರಷ್ಟು ಮನೆಗಳಿಗೆ ಈಗಾಗಲೇ ಸಂಪರ್ಕ:
ಇಂಜಿನಿಯರ್ ಅಜೇಯ್ ರೆಡ್ಡಿ ಮಾತನಾಡಿ, ತುಮಕೂರು ನಗರಕ್ಕೆ 2021ರೊಳಗೆ ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಗುತ್ತಿಗೆ ಪಡೆದಿ ದ್ದೇವೆ. ಸಿಲಿಂಡರ್ ಮೂಲಕ ಗ್ಯಾಸ್ ಪಡೆಯುವುದಕ್ಕೆ ಹೋಲಿಸಿದರೆ ಇದು ಅತ್ಯಂತ ಸುರಕ್ಷಿತ ಮತ್ತು ಉಳಿತಾಯದಾಯಕ. ಈಗಾಗಲೇ ಗೋಕುಲ, ಸಪ್ತಗಿರಿ, ಜಯನಗರ, ಉಪ್ಪಾರಹಳ್ಳಿ, ಎಸ್‌ಐಟಿ, ಸಿದ್ದರಾಮೇಶ್ವರ ಬಡಾವಣೆ ಸೇರಿ ನಗರದ ಶೇ. 40ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಏನೇ ತೊಂದರೆಯಾದರೂ ಅರ್ಧ ಗಂಟೆಯೊಳಗೆ ಸರಿ ಪಡಿಸುವ ಕೆಲಸವನ್ನು ಕಂಪನಿ ಮಾಡಲಿದೆ ಎಂದು ಭರವಸೆ ನೀಡಿದರು.
ಪಾಲಿಕೆಯ ಆಯುಕ್ತ ಟಿ. ಭೂಬಾಲನ್, ಮುಖಂಡರಾದ ಚಂದ್ರಪ್ಪ, ಕೊಪ್ಪಲ್ನಾಗರಾಜು, ಭವಿತ ಕನ್‌ಸ್ಟ್ರಕ್ಷನ್‌ನ ಅಲ್ಲಮಪ್ರಭು ಮತ್ತಿತರರಿದ್ದರು.