Advertisement

ಚಿಕ್ಕಬಳ್ಳಾಪುರ, ಯಾದಗಿರಿಯಲ್ಲಿ ಪೈಪ್‌ಲೈನ್ ಅನಿಲ ಸಂಪರ್ಕ ಯೋಜನೆ ಜಾರಿ

06:07 PM Jan 14, 2022 | Team Udayavani |

ಬೆಂಗಳೂರು: ಮನೆ ಮನೆಗೆ ಅನಿಲ ಸಂಪರ್ಕ ಒದಗಿಸುವ ಮೂಲಕ ಸಿಲಿಂಡರ್ ಗೊಡವೆ ತಪ್ಪಿಸುವ ಕೇಂದ್ರ ಸರ್ಕಾರದ ಅನಿಲ ಕೊಳವೆ ಸಂಪರ್ಕ ಯೋಜನೆಯಡಿ ರಾಜ್ಯದ ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಆಯ್ಕೆಯಾಗಿದ್ದು, ಹೈದರಾಬಾದ್ ಮೂಲದ ಬಹು ಕ್ಷೇತ್ರದ ಜಾಗತಿಕ ಸಂಸ್ಥೆ ಮೆಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ ಯೋಜನೆ ಜಾರಿ ಅವಕಾಶವನ್ನು ತನ್ನದಾಗಿಸಿಕೊಂಡಿದೆ.

Advertisement

ಕೇಂದ್ರ ಸರ್ಕಾರಿ ಸ್ವಾಮ್ಯದ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ದೇಶದ ಒಟ್ಟು 65 ಭೂ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೆ ಟೆಂಡರ್ ಕರೆದಿತ್ತು. ನಾಲ್ಕು ಪ್ರದೇಶಗಳ ಹೊರತಾಗಿ 61 ಪ್ರದೇಶಗಳ ಸೇವೆಗೆ ವಿವಿಧ ಸಂಸ್ಥೆಗಳು ಮುಂದಾಗಿದ್ದವು. ಈ ಪೈಕಿ ಈಗಾಗಲೇ ಅನಿಲ ವಿತರಣೆಯಲ್ಲಿ ಅನುಭವಹೊಂದಿರುವ ಎಂಇಐಎಲ್ 15 ಭೂ ಪ್ರದೇಶಗಳ ಟೆಂಡರ್ ಅನ್ನು ಪಡೆದುಕೊಂಡಿದೆ.

ಈಗಾಗಲೇ ರಾಜ್ಯದ ತುಮಕೂರು ಮತ್ತು ಬೆಳಗಾವಿಯಲ್ಲಿ ನೈಸರ್ಗಿಕ ಅನಿಲ ಸಂಪರ್ಕವನ್ನು ಸಾಧ್ಯವಾಗಿಸಿದ ಅನುಭವ ಹೊಂದಿರುವ ಎಂಇಐಎಲ್ ‘ನಗರ ಅಥವಾ ತಾಯಿ ಕೇಂದ್ರ (ಸಿಟಿ ಅಥವಾ ಮದರ್ ಕೇಂದ್ರ)ಗಳನ್ನು, ಮನೆ ಮನೆ ಸಂಪರ್ಕಕ್ಕೆ ಮುಖ್ಯ ಪೈಪ್‌ಲೈನ್‌ಗಳ ಅವಳಡಿಕೆ ಜತೆಗೆ ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲಿದೆ.

ಹಸಿರು ಅನಿಲ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರದ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಪೈಪ್‌ಗಳ ಮೂಲಕ ಗೃಹೋಪಯೋಗಿ ಮತ್ತು ಕೈಗಾರಿಕಾ ಉದ್ದೇಶಕ್ಕಾಗಿ ಅನಿಲ ಸಂಪರ್ಕ (ಪಿಎನ್‌ಜಿ), ವಾಹನ ಮತ್ತು ಆಟೋಮೋಬೈಲ್ ಕ್ಷೇತ್ರದ ಬಳಕೆಗಾಗಿ ಪಿಎನ್‌ಜಿ ಅನಿಲವನ್ನು ಒದಗಿಸುತ್ತಿದೆ.ಈಗಾಗಲೇ ದೇಶದ ಮೂರು ರಾಜ್ಯಗಳಲ್ಲಿ ಎಂಇಐಎಲ್ ‘ಮೆಘಾ ಗ್ಯಾಸ್’ ಹೆಸರಿನಡಿ 32 ಸಿಎನ್‌ಜಿ ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next