Advertisement

ಸುಳ್ಯ: ನಳ್ಳಿಯಲ್ಲಿ ಕೆಂಬಣ್ಣಕ್ಕೆ ತಿರುಗಿದ ಕುಡಿಯುವ ನೀರು

03:50 AM Jun 02, 2018 | Team Udayavani |

ಸುಳ್ಯ: ನಳ್ಳಿ ನೀರು ಕೆಂಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿ ವಿಸ್ಮಯ ಅಲ್ಲ. ಬದಲಿಗೆ ನಗರ ಪಂಚಾಯತ್‌ ನಿರ್ಲಕ್ಷ್ಯಕ್ಕೆ ಒಂದು ಉದಾಹರಣೆ. ಸುಮಾರು 20 ಸಾವಿರಕ್ಕೂ ಅಧಿಕ ಜನರು ಇರುವ ನಗರದಲ್ಲಿ ಶೇ. 80ಕ್ಕೂ ಅಧಿಕ ಮಂದಿ ನಳ್ಳಿ ನೀರನ್ನೇ ಆಶ್ರಯಿಸಿದ್ದಾರೆ. ಆ ನೀರು ಕಲುಷಿತಗೊಂಡಿದ್ದು, ಬಣ್ಣ ಬದಲಾವಣೆ ಗೊಂಡು ಮನೆ – ಮನೆ ಸೇರುತ್ತಿದ್ದರೂ ಆಡಳಿತ, ಅಧಿಕಾರಿ ವರ್ಗ ತಲೆಕೆಡಿಸಿ ಕೊಂಡಿಲ್ಲ. ಅವರ ಗಮನಕ್ಕೆ ಬಂದಿಲ್ಲ ಎಂಬ ಉತ್ತರವಷ್ಟೇ ಸಿಕ್ಕಿದೆ.

Advertisement

ಕೆಂಬಣ್ಣದ ನೀರು
ಟ್ಯಾಪ್‌ ತಿರುಗಿಸಿದರೆ ಕೆಂಬಣ್ಣದ ನೀರು ಬರುತ್ತಿದೆ. ಚಿಕ್ಕ ಮಕ್ಕಳು ಇರುವ ಮನೆಗಳಲ್ಲಿ ನೀರು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ತಾ.ಪಂ. ಕಟ್ಟಡದ ಬಳಿಯ ನಿವಾಸಿ ಗಂಗಾಧರ ಅವರು ಅಳಲು ತೋಡಿಕೊಂಡಿದ್ದಾರೆ.


ನಗರಕ್ಕೆ ಕುಡಿಯುವ ನೀರೊದಗಿಸುವ ಪ್ರಕ್ರಿಯೆ

ನಗರಕ್ಕೆ ಬಹುಭಾಗ ನೀರೊದಗಿಸುವ ಮೂಲ ಪಯಸ್ವಿನಿ ನದಿ. ವರ್ಷದ 365 ದಿನವೂ 24 ತಾಸು ಇಲ್ಲಿಂದ ನೀರು ಬಳಸಲಾಗುತ್ತದೆ. ಮಳೆಗಾಲಕ್ಕೆ ಹೋಲಿಸಿದರೆ ಬೇಸಗೆಯಲ್ಲಿ ಇದರ ಪ್ರಮಾಣ ಹೆಚ್ಚು. ಕಲ್ಲುಮಟ್ಲು ಪಂಪ್‌ ಹೌಸ್‌ ಬಳಿಯಲ್ಲಿ 50 ಎಚ್‌ಪಿಯ 1 ಮತ್ತು 45 ಎಚ್‌.ಪಿ. ಧಾರಣ ಸಾಮರ್ಥ್ಯದ 2 ಪಂಪ್‌ ಬಳಸಿ, ನೀರನ್ನು ಸಂಗ್ರಹಿಸಿ ಪಂಪ್‌ ಹೌಸ್‌ ಬಾವಿಗೆ, ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತದೆ. ಅನಂತರ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣಗೊಂಡು, 1 ಲಕ್ಷ ಗ್ಯಾಲನ್‌ ಮತ್ತು 50 ಸಾವಿರ ಗ್ಯಾಲನ್‌ ಟ್ಯಾಂಕ್‌ ಮೂಲಕ ನಗರಕ್ಕೆ ನೀರು ಹರಿಯುತ್ತದೆ. ಇನ್ನೊಂದು ಪೈಪ್‌ ಮೂಲಕ ಕುರುಂಜಿಗುಡ್ಡೆ ಟ್ಯಾಂಕ್‌ ಗೆ ಹರಿಸಿ, ಅಲ್ಲಿಂದ ನಗರದ ಮನೆ ಹಾಗೂ ಗೃಹೇತರ ಕಟ್ಟಡಗಳಿಗೆ ನಳ್ಳಿ ಸಂಪರ್ಕದ ಮುಖಾಂತರ ನೀರು ಪೂರೈಸುವ ವ್ಯವಸ್ಥೆ ಇದೆ.

ನಗರದಲ್ಲಿ 3,940 ನಳ್ಳಿ ಸಂಪರ್ಕ ಇದ್ದು, ನದಿ ನೀರಿನ ಜತೆಗೆ 37 ಕೊಳವೆಬಾವಿಗಳನ್ನು ಬಳಸಲಾಗುತ್ತಿದೆ. 2011ರ ಜನಗಣತಿ ಆಧಾರದಲ್ಲಿ ನಗರದ ಜನಸಂಖ್ಯೆ 19,958. ದಿನವೊಂದಕ್ಕೆ ಬೇಕಾದ ನೀರಿನ ಪ್ರಮಾಣ 1.69 ಎಂಎಲ್‌ಡಿ. ಒಬ್ಬ ವ್ಯಕ್ತಿಗೆ  ದಿನ ಒಂದಕ್ಕೆ ನೀಡುತ್ತಿರುವ ನೀರಿನ ಪ್ರಮಾಣ 90 ಲೀಟರ್‌. ಅದರಲ್ಲಿ ಹೆಚ್ಚಿನ ನೀರು ಪಯಸ್ವಿನಿಯ ಒಡಲಿನಿಂದಲೇ ಬಳಸಲಾಗುತ್ತಿದೆ.

ಏನು ಸಮಸ್ಯೆ?
ನೀರು ಶುದ್ಧೀಕರಣದಲ್ಲಿನ ಲೋಪವೇ ಕಾರಣ. ಇಲ್ಲಿ ಸರಿಯಾಗಿ ಫಿಲ್ಟರ್‌ ಮಾಡದೆ, ನೇರವಾಗಿ ಟ್ಯಾಂಕಿಗೆ ಹರಿಸಲಾಗುತ್ತಿದೆ ಎಂಬ ಆಪಾದನೆ ಬಳಕೆದಾರರದ್ದು. ಕೆಲ ದಿನಗಳಿಂದ ಧಾರಾಕಾರ ಮಳೆಯಿಂದ ಪಯಸ್ವಿನಿ ನದಿ ನೀರು ಕೆಂಬಣ್ಣಕ್ಕೆ ತಿರುಗಿತ್ತು. ಅದೇ ನೀರನ್ನು ನಳ್ಳಿ ಮೂಲಕ ಹರಿಸಿರುವುದು ಅಥವಾ ಮನೆ-ಮನೆಗೆ ನೀರು ಹರಿಸಲು ಅಳವಡಿಸಿದ ಪೈಪು ಒಡೆದು ಮಳೆ ನೀರು ಪೈಪ್‌ನೊಂದಿಗೆ ಸೇರಿ, ಈ ಸಮಸ್ಯೆ ಸೃಷ್ಟಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೊಂದೆಡೆ ಒಳಚರಂಡಿ ಯೋಜನೆಯ ಅವ್ಯವಸ್ಥೆ ಕೂಡ ಸಮಸ್ಯೆ ಸೃಷ್ಟಿಸುತ್ತಿದೆ. 2.87 ಕೋ.ರೂ ವೆಚ್ಚದ ಈ ಯೋಜನೆ ಅಸಮರ್ಪಕತೆ ಅಲ್ಲಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು, ಮಳೆ, ತ್ಯಾಜ್ಯ ನೀರು ಅದರೊಂದಿಗೆ ಸೇರಿ ಕಲುಷಿತ ನೀರನ್ನು ಬಳಸಬೇಕಾದ ದುಸ್ಥಿತಿ. ನಾಲ್ಕು ಸಾವಿರಕ್ಕೂ ಅಧಿಕ ಗೃಹ ಮತ್ತು ಗೃಹೇತರ ಕಟ್ಟಡಗಳ ತ್ಯಾಜ್ಯವನ್ನು ಅಧಿಕೃತವಾಗಿ ಚರಂಡಿಗೆ ಹರಿಸುತ್ತಿಲ್ಲ.

Advertisement

ವಲಯ-2ರಲ್ಲಿ ಪರಿವೀಕ್ಷಣೆಗೆಂದೂ ಕೆಲ ಭಾಗದಲ್ಲಿ ಕನೆಕ್ಷನ್‌ ನೀಡಿದ್ದು, ಆ ವೇಳೆ ಕಾಮಗಾರಿ ಲೋಪ ಬೆಳಕಿಗೆ ಬಂದಿತ್ತು. ಎರಡು ತಿಂಗಳ ಹಿಂದೆ ಜಟ್ಟಿಪಳ್ಳದ ವೆಟ್‌ ವೆಲ್‌ ನಲ್ಲಿ ತುಳುಕಿದ ತ್ಯಾಜ ನೀರು ಪಯಸ್ವಿನಿ ನದಿಗೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹರಡಿ ಜನರು ಮೂಗು ಮುಚ್ಚಿಕೊಳ್ಳುವ ಸ್ಥಿತಿ ಉಂಟಾಗಿತ್ತು.

ಸಾಂಕ್ರಾಮಿಕ ರೋಗ ಭೀತಿ
ಸುಳ್ಯವನ್ನು ಕಾಡಿದ್ದ ಸಾಂಕ್ರಾಮಿಕ ರೋಗದ ಭೀತಿ ಮತ್ತೆ ವಕ್ಕರಿಸುವ ಆತಂಕವಿದೆ. ಕಲುಷಿತ ನೀರು ಕುಡಿದು ಅನಾರೋಗ್ಯ ಉಂಟಾಗಬಹುದು. ನೂರಾರು ಹೊಟೇಲ್‌, ಸಾವಿರಾರು ಮನೆ, ಹತ್ತಾರು ಶಾಲಾ ಕಾಲೇಜು, ಆಸ್ಪತ್ರೆಗಳು ಇರುವ ನಗರದಲ್ಲಿ ನದಿಯಲ್ಲಿ ನೀರಿದ್ದರೂ, ಶುದ್ಧ ರೂಪದಲ್ಲಿ ನೀಡುವಲ್ಲಿ ಸ್ಥಳೀಯಾಡಳಿತ ವಿಫಲವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.

ಬಳಸುವಂತಿಲ್ಲ
ನೀರನ್ನು ಶುದ್ಧೀಕರಣ ಮಾಡದ ಪರಿಣಾಮ ಜನರು ಕಲುಷಿತ ನೀರು ಬಳಸಬೇಕಾದ ಸ್ಥಿತಿ ಉಂಟಾಗಿದೆ. ನಗರ ಪಂಚಾಯತ್‌ ಇದಕ್ಕೆ ಕ್ರಮ ಕೈಗೊಂಡಿಲ್ಲ. ಹಲವು ಮನೆ, ಇನ್ನಿತರ ಕಟ್ಟಡಗಳ ಸಂಪರ್ಕ ನಳ್ಳಿಯಲ್ಲಿ ಕೆಂಬಣ್ಣದ ನೀರು ಬರುತ್ತಿದೆ. ಸಮಸ್ಯೆ ಸರಿಯಾಗದಿದ್ದರೆ ಹೋರಾಟ ನಡೆಸುತ್ತೇವೆ. 
– ಪ್ರದೀಪ್‌ ಕುಮಾರ್‌, ಮಲೆನಾಡು ಜಂಟಿ ಕ್ರಿಯಾ ಸಮಿತಿ

ಪರಿಶೀಲಿಸಿ ಸೂಕ್ತ ಕ್ರಮ
ಕಲುಷಿತ ನೀರಿನ ಬಗ್ಗೆ ಈ ತನಕ ದೂರು ಬಂದಿಲ್ಲ. ಯಾವ ವಾರ್ಡ್‌ಗಳಲ್ಲಿ ಈ ಸಮಸ್ಯೆ ಇದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಮಳೆ ಗಾಳಿಯಿಂದ ಮರ ಬಿದ್ದು ಪೈಪುಗಳಲ್ಲಿ ಹಾನಿ ಉಂಟಾಗಿದ್ದರೆ ಈ ಸಮಸ್ಯೆ ಉಂಟಾಗುವುದಿದೆ. ಇದರ ಬಗ್ಗೆ ತತ್‌ ಕ್ಷಣ ಗಮನ ಹರಿಸಲಾಗುವುದು. 
– ಗೋಪಾಲ ನಾೖಕ್‌, ಮುಖ್ಯಾಧಿಕಾರಿ, ನ.ಪಂ, ಸುಳ್ಯ

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next