Advertisement

ಮುಖ್ಯ ಕಾಲುವೆ‌ಗೆ ಹಾಕಿದ್ದ ಪೈಪ್‌ ಕುಸಿತ

11:42 AM Oct 27, 2021 | Team Udayavani |

ಸಿಂಧನೂರು: ತುಂಗಭದ್ರಾ ಎಡದಂಡೆ ಕಾಲುವೆಯ 36ನೇ ಕಾಲುವೆ ಜಿರೋ ಪಾಯಿಂಟ್‌ನಲ್ಲಿ ಗೇಟ್‌ ಬಳಿಯೇ ಪೈಪ್‌ ಕುಸಿದಿದ್ದು, ಕಾಲುವೆ ಕೊನೆ ಭಾಗದ ರೈತರನ್ನು ಚಿಂತೆಗೆ ದೂಡಿದೆ.

Advertisement

ಇಲ್ಲಿನ 36ನೇ ಉಪ ಕಾಲುವೆಗೆ ಪ್ರತಿ ನಿತ್ಯ ಹರಿಸಬೇಕಾದ 208 ಕ್ಯೂಸೆಕ್‌ ಬದಲು ಸದಸ್ಯ ಎರಡು ಗೇಟ್‌ ಮುಚ್ಚಿ ಕಡಿಮೆ ನೀರು ಪೂರೈಸಲಾಗುತ್ತಿದೆ. ರಾಯಚೂರು ಮಾರ್ಗದಲ್ಲಿ ಸಾಗುವ ಮುಖ್ಯ ಕಾಲುವೆಗೆ ಅಳವಡಿಸಿದ ಪೈಪ್‌ ಗಳೇ ಕುಸಿದಿದ್ದರಿಂದ ದುರಸ್ತಿ ಸವಾಲು ಎದುರಾಗಿದೆ. ಸದ್ಯ ಕಾಲುವೆಗೆ ನೀರು ಹರಿಯುತ್ತಿರುವುದರಿಂದ ಅದನ್ನು ಕೈಗೆತ್ತಿಕೊಳ್ಳಲು ಕಾಯಬೇಕಾದ ಅನಿವಾರ್ಯತೆ ತಲೆದೋರಿದೆ.

ಸ್ಥಿತಿಗತಿ ಏನು?

ತುಂಗಭದ್ರಾ ಎಡದಂಡೆ ಕಾಲುವೆ ಪೈಕಿ ಎರಡನೇ ಅತಿ ದೊಡ್ಡ ಉಪ ಕಾಲುವೆ ಇದು. 36ನೇ ಉಪ ಕಾಲುವೆ ವ್ಯಾಪ್ತಿಯಲ್ಲಿ 44,963 ಎಕರೆ ಜಮೀನು ನೀರಾವರಿ ಒಳಪಟ್ಟಿದೆ. ಈ ಕಾಲುವೆಗೆ 12 ಅಡಿಯಷ್ಟು ನೀರು ನಿತ್ಯ ಪೂರೈಸಬೇಕು. 208 ಕ್ಯೂಸೆಕ್‌ ಪೈಕಿ ಎರಡು ಪೈಪ್‌ ಮುಚ್ಚಿದ್ದರಿಂದ 150 ಕ್ಯೂಸೆಕ್‌ನಷ್ಟು ನೀರು ಬಿಡಲಾಗುತ್ತಿದೆ.

ತಾತ್ಕಾಲಿಕವಾಗಿ ಮುಖ್ಯ ಕಾಲುವೆಗೆ ನಾಲ್ಕು ಪೈಪ್‌ ಇಳಿಬಿಟ್ಟು ಒಡ್ಡು ದಾಟಿಸಿ ಕಾಲುವೆಗೆ ಬಿಡಲಾಗುತ್ತಿದೆ. ಪಂಪ್‌ಸೆಟ್‌ಗೆ ಅಳವಡಿಸಿದ ಪೈಪ್‌ ಮಾದರಿಯ ಈ ಸಾಹಸದಿಂದ ಹೆಚ್ಚಿನ ನೀರು ಕಾಲುವೆಗೆ ಬೀಳದಾಗಿದೆ. 36ನೇ ಕಾಲುವೆಗೆ 4 ಪೈಪ್‌ಗ್ಳಿದ್ದು, ನಾಲ್ಕು ಗೇಟ್‌ಗಳನ್ನು 3 ಅಡಿಯಷ್ಟು ಎತ್ತಿ ನೀರು ಬಿಡಲಾಗುತ್ತಿದೆ. ಎರಡು ಪೈಪ್‌ನ ಗೇಟ್‌ ಮುಕ್ಕಾಲು ಭಾಗ ಮುಚ್ಚಿರುವುದರಿಂದ ಕೊನೆ ಭಾಗಕ್ಕೆ ನೀರು ಕೊರತೆಯಾಗುತ್ತಿದೆ.

Advertisement

ರೈತರಲ್ಲಿ ಆತಂಕ

ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಸದ್ಯಕ್ಕೆ ಮುಖ್ಯ ಕಾಲುವೆಯ ಒಡ್ಡು ತೆಗೆದು ಪುನರ್‌ ದುರಸ್ತಿ ಕೈಗೊಳ್ಳುವುದು ಕಷ್ಟವೆಂದು ಹೇಳಲಾಗುತ್ತಿದೆ. ನವೆಂಬರ್‌ ಕೊನೆ ಹೊತ್ತಿಗೆ ಭತ್ತದ ಬೆಳೆ ಕೈಗೆ ಬರಬಹುದು. ಡಿಸೆಂಬರ್‌ನಲ್ಲಿ ಕ್ಲೋಸರ್‌ ಸಮಯ ಬಳಸಿಕೊಂಡು 2ನೇ ಬೆಳೆಗೆ ತೊಂದರೆಯಾಗದ ರೀತಿಯಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು ದುರಸ್ತಿ ಕೆಲಸ ಮುಗಿಸಬೇಕೆಂಬ ಸಲಹೆ ವ್ಯಕ್ತವಾಗಿವೆ. ಸೋಮಲಾಪುರ, ಸಾಲಗುಂದಾ ಸೇರಿದಂತೆ 15ಕ್ಕೂ ಹೆಚ್ಚು ಹಳ್ಳಿಯ ಕೊನೆ ಭಾಗದ ರೈತರು ಈಗಾಗಲೇ ನೀರಿನ ಕೊರತೆಯಾಗುವ ಆತಂಕಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಸರಿದೂಗಿಸಲು ತಜ್ಞರ ಸಲಹೆ ಹಾಗೂ ಪರಿಹಾರಾತ್ಮಕ ಕ್ರಮಗಳ ಅಗತ್ಯವಿದೆ. ನೀರಾವರಿ ಇಲಾಖೆ ಇಇ ಆಗಮಿಸಿದ ಬಳಿಕ ಕುಸಿದ ಪೈಪ್‌ ಬಳಿ ಬಂಡ್‌ ಹಾಕಿ, ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹೇಗೆ? ಎಂಬ ರೈತರ ಪ್ರಶ್ನೆಗೆ ಅಧಿಕಾರಿಗಳೇ ಉತ್ತರ ಕಂಡುಕೊಳ್ಳಬೇಕಿದೆ.

ಇದನ್ನೂ ಓದಿ: ಸಲಗ, ಕೋಟಿಗೊಬ್ಬ-3 ಸಕ್ಸಸ್‌ ಸಂಭ್ರಮ

ಎಚ್ಚೆತ್ತುಕೊಳ್ಳದ್ದೇ ಮುಳುವಾಯಿತೇ?

ಎರಡು ವರ್ಷದ ಹಿಂದೆಯೇ ಮುಖ್ಯ ಕಾಲುವೆಗೆ ಅಳವಡಿಸಿದ ಪೈಪ್‌ ಕುಸಿತದ ಬಗ್ಗೆ ಗಮನ ಸೆಳೆದಿದ್ದರು ಎನ್ನಲಾಗಿದೆ. ಸಂಪೂರ್ಣ ಕುಸಿದು ಅಪಾಯ ಎದುರಾದ ಸನ್ನಿವೇಶದಲ್ಲಿ ಅಧಿಕಾರಿಗಳು ತಾತ್ಕಲಿಕವಾಗಿ ಕಪ್ಪು ಮಣ್ಣು ಹಾಕಿ, ಒಡ್ಡು ಗಟ್ಟಿಗೊಳಿಸಿದ್ದಾರೆ. ಎರಡು ವರ್ಷದ ಹಿಂದೆ ಗೊತ್ತಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೊದಲೇ ಎಚ್ಚೆತ್ತುಕೊಳ್ಳದ್ದರಿಂದ ಇದೀಗ ಸಂಕಷ್ಟದ ಸಂದರ್ಭ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next