Advertisement

24 ಹೆಣ್ಣು ಕೂಸಿಗೆ ಪಾಲಿಕೆಯಿಂದ 5ಲಕ್ಷ

12:00 PM Dec 27, 2018 | |

ಬೆಂಗಳೂರು: ಹೊಸ ವರ್ಷದ ದಿನ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮೂಲಕ ಜನಿಸುವ 24 ಅದೃಷ್ಟಶಾಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಲಾ 5 ಲಕ್ಷ ರೂ. ವ್ಯಯಿಸಲು ಪಾಲಿಕೆ ಮುಂದಾಗಿದೆ.

Advertisement

ಭ್ರೂಣ ಹತ್ಯೆ ನಿಯಂತ್ರಣ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ “ಪಿಂಕ್‌ ಬೇಬಿ’ ಯೋಜನೆಯನ್ನು ಪಾಲಿಕೆ ಕಳೆದ ವರ್ಷ ಆರಂಭಿಸಿ ಒಂದು ಮಗುವಿಗೆ ಮಾತ್ರ ಯೋಜನೆ
ಜಾರಿಗೊಳಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿಯೂ ಯೋಜನೆ ಮುಂದುವರಿಸಲು ಮೇಯರ್‌ ಗಂಗಾಂಬಿಕೆ ತೀರ್ಮಾನಿಸಿದ್ದು, ಪ್ರಸಕ್ತ ಸಾಲಿನಿಂದ 24 ಹೆಣ್ಣು ಮಕ್ಕಳಿಗೆ ಯೋಜನೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ನಗರದಲ್ಲಿ ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಿದ್ದು ಜನವರಿ 1ನೇ ತಾರೀಖು ಸಹಜ ಹೆರಿಗೆ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ5 ಲಕ್ಷ ರೂ. ಗಳನ್ನು ಪಾಲಿಕೆಯಿಂದ ಠೇವಣಿ ಇಡಲಾಗುತ್ತದೆ. ಮಗು ಶಾಲೆಗೆ ಸೇರುವ ವಯಸ್ಸಿಗೆ ವಾರ್ಷಿಕ ಇಂತಿಷ್ಟು ಪ್ರಮಾಣ ಹಣ ಪೋಷಕರಿಗೆ ದೊರೆಯಲಿದ್ದು, ಆ ಹಣದಿಂದ
ಮಗುವಿಗೆ ಉತ್ತಮ ಶಿಕ್ಷಣ ಕೊಡಿಸುವುದು ಯೋಜನೆಯ ಉದ್ದೇಶವಾಗಿದೆ.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌ ಗಂಗಾಂಬಿಕೆ, ಬೆಂಗಳೂರು ನಗರದಲ್ಲಿ ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಿವೆ. ಆ ಆಸ್ಪತ್ರೆಗಳಲ್ಲಿ ಜನವರಿ 1 ರಂದು ಸಹಜ ಹೆರಿಗೆ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿಗೆ ಪಿಂಕ್‌ ಯೋಜನೆಯಡಿ 5 ಲಕ್ಷ ರೂ. ಠೇವಣಿ ಇರಿಸುವ ಯೋಜನೆ ಈ ಬಾರಿ
ಮುಂದುವರಿಸಲಾಗುತ್ತಿದೆ. ಆದರೆ, ಇದೇ ಮೊದಲ ಬಾರಿಗೆ 24 ಮಕ್ಕಳಿಗೆ ತಲಾ 5 ಲಕ್ಷ ರೂ. ನೀಡಲು ನಿರ್ಧರಿಸಿದ್ದು, ಅದಕ್ಕಾಗಿ 1.20 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು. ಪಾಲಿಕೆಯ ಹೆರಿಗೆ ಆಸ್ಪತ್ರೆಗಳಲ್ಲಿ ಬಡ,
ಮಧ್ಯಮ ವರ್ಗವರು ಹೆಚ್ಚು ಚಿಕಿತ್ಸೆ ಪಡೆಯುತ್ತಾರೆ. ಜತೆಗೆ ಹೆಣ್ಣು ಮಗು ಜನಿಸಿದಾಗ ಅವರಿಗೆ ಶಿಕ್ಷಣ, ಮದುವೆ ಹೀಗೆ ಭವಿಷ್ಯದ ಬಗ್ಗೆ ಯೋಚಿಸಿ, ಕೆಲವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದಿಲ್ಲ. ಹೆಣ್ಣು ಮಕ್ಕಳಿಗೂ
ಶಿಕ್ಷಣ ಕೊಡಿಸಲು ಉತ್ತೇಜನ ನೀಡುವ ಉದ್ದೇಶದಿಂದ ಯೋಜನೆ ಮುಂದುವರಿಸಲಾಗುತ್ತಿದೆ ಎಂದರು.

ಪಾಲಿಕೆಯ ಎಲ್ಲ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಪಿಂಕ್‌ ಬೇಬಿ ಯೋಜನೆಯ ಕುರಿತು ಮಾಹಿತಿ ನೀಡಲಾಗಿದ್ದು, ಹೆಣ್ಣು ಮಗು ಜನಿಸಿದ ಕೂಡಲೇ ಹಿರಿಯ ಅಧಿಕಾರಿಗಳು ಹಾಗೂ ತಮಗೆ ಮಾಹಿತಿ ನೀಡಲಿದ್ದಾರೆ. ಮಗು ಹಾಗೂ ಪೋಷಕರ ಸಂಪೂರ್ಣ ಮಾಹಿತಿಯನ್ನು ಪಡೆಯಲಿದ್ದಾರೆ. ಆ ಮೂಲಕ ಪಾರದರ್ಶಕವಾಗಿ ಮೊದಲು ಜನಿಸುವ ಮಗುವಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ ಎಂದು ಗಂಗಾಂಬಿಕೆ ಹೇಳಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next