Advertisement

ಕೊರಗ, ಜೇನುಕುರುಬ ಮಕ್ಕಳಿಗೆ ಸ್ಟೈಪಂಡ್

03:45 AM Jan 22, 2017 | Harsha Rao |

ಬೆಂಗಳೂರು: ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಮತ್ತು ಜೇನುಕುರುಬ ಜನಾಂಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದವರಿಗೆ ಸ್ಟೈಪೆಂಡ್‌ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

Advertisement

ಇದಲ್ಲದೆ, ರಾಜ್ಯದ ಆರು ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಬುಡಕಟ್ಟು ಜನಾಂಗದವರಿಗೆ ಪೌಷ್ಠಿಕ ಆಹಾರ ವಿತರಣೆ ಸೇರಿ ಇತರ ಯೋಜನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಬುಡಕಟ್ಟು ಸಮುದಾಯದವರಿಗೂ ನೀಡಲು ನಿರ್ಧರಿಸಲಾಗಿದೆ.

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಮೈಸೂರಿನಲ್ಲಿ ಫೆ.1ರಂದು ನಡೆಯಲಿರುವ ಆದಿವಾಸಿಗಳಿಗೆ ಸವಲತ್ತು ವಿತರಣೆ ಕುರಿತ ಸಮಾವೇಶದಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ, ಈ ಎರಡೂ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದರು. ಕೊರಗ ಮತ್ತು ಜೇನುಕುರುಬ ಜನಾಂಗವನ್ನು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಅವರಿಗೆ ಸ್ಟೈಪೆಂಡ್‌ ವಿತರಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದವರಿಗೆ ಮಾಸಿಕ ಎರಡು ಸಾವಿರ ರೂ., ಪಿಯು ಪೂರ್ಣಗೊಳಿಸಿದವರಿಗೆ 2,500 ರೂ., ಪದವಿ ಮುಗಿಸಿದವರಿಗೆ 3,500 ರೂ. ಮತ್ತು ಸ್ನಾತಕೋತ್ತರ ಪದವಿ ಮಾಡಿದವರಿಗೆ 4500 ರೂ. ಸ್ಟೈಪಂಡ್‌ ನೀಡಲಾಗುವುದು ಎಂದು ತಿಳಿಸಿದರು.

ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಆದಿವಾಸಿ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುವ ಆಹಾರಧಾನ್ಯ (ಒಂದು ಕುಟುಂಬಕ್ಕೆ 15 ಕೆ.ಜಿ.ಅಕ್ಕಿ,
ರಾಗಿ ಅಥವಾ ಗೋಧಿ, 5 ಕೆ.ಜಿ.ತೊಗರಿಬೇಳೆ, ಐದು ಕೆ.ಜಿ.ಕಾಳುಗಳು, 2 ಲೀಟರ್‌ ಅಡುಗೆ ಎಣ್ಣೆ, 4 ಕೆ.ಜಿ.ಬೆಲ್ಲ ಅಥವಾ ಸಕ್ಕರೆ, 45 ಮೊಟ್ಟೆ, 1 ಕೆ.ಜಿ.ನಂದಿನಿ ತುಪ್ಪ)ವನ್ನು ಚಿಕ್ಕಮಗಳೂರು ಜಿಲ್ಲೆಯ ಬುಡಕಟ್ಟು ಸಮುದಾಯದವರಿಗೂ
ನೀಡಲು ತೀರ್ಮಾನಿಸಲಾಗಿದೆ. ಆ ಜಿಲ್ಲೆಯಲ್ಲಿ 5 ಸಾವಿರ ಕುಟುಂಬಗಳನ್ನು ಗುರುತಿಸಲಾಗಿದೆ ಎಂದರು.

ಫೆ.1ರಂದು ಸಮಾವೇಶ:
ಬುಡಕಟ್ಟು ಸಮುದಾಯಕ್ಕೆ ಸರ್ಕಾರ ನೀಡುವ ಸೌಲಭ್ಯಗಳನ್ನು ವಿತರಿಸುವ ಕುರಿತು ಫೆ.1ರಂದು ಮೈಸೂರಿನಲ್ಲಿ ಆದಿವಾಸಿಗಳಿಗೆ ಸವಲತ್ತು ವಿತರಣಾ ಸಮಾವೇಶ ಏರ್ಪಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸಿ ಆದಿವಾಸಿ ಕುಟುಂಬಗಳಿಗೆ ನೂತನವಾಗಿ ಜಾರಿಗೆ ತಂದಿರುವ ಸೌಲಭ್ಯಗಳನ್ನು ವಿತರಿಸಲಿದ್ದಾರೆ ಎಂದರು.

Advertisement

ಆದಿವಾಸಿ ಕುಟುಂಬದವರಿಗೆ ಸರ್ಕಾರದಿಂದ ಹೊಲಿಗೆ ತರಬೇತಿ, ಚಾಲನಾ ತರಬೇತಿ, ಮೊಬೈಲ್‌ ದುರಸ್ತಿ ತರಬೇತಿ ನೀಡಲಾಗಿದ್ದು, ಇವರಿಗೆ ಹೊಲಿಗೆ ಯಂತ್ರ, ಚಾಲನಾ ಪರವಾನಗಿ ನೀಡುವ ಕಾರ್ಯಕ್ರಮವೂ ಅಂದು ನಡೆಯಲಿದೆ.
ಜತೆಗೆ ಸ್ವ ಉದ್ಯೋಗಕ್ಕಾಗಿ ಸಾಲ ವಿತರಣೆ, ಹಕ್ಕುಪತ್ರಗಳ ವಿತರಣೆ ಮಾಡಲಾಗುವುದು ಎಂದು ಆಂಜನೇಯ ತಿಳಿಸಿದರು. ಸಮಾವೇಶಕ್ಕೆ ಆದಿವಾಸಿ ಕುಟುಂಬಗಳು ಅವರ ಸಾಂಪ್ರದಾಯಿಕ ಉಡುಗೆ, ಕಲಾ ಪ್ರಕಾರಗಳೊಂದಿಗೆ ಆಗಮಿಸುವಂತೆ ಸೂಚಿಸಲಾಗಿದೆ. ಅವರಿಗೆ ಸೌಲಭ್ಯ ವಿತರಿಸುವುದರೊಂದಿಗೆ ಅವರ ಮೂಲ ಕಸುಬು ಹಾಗೂ ಅವರ ಸಂಸ್ಕೃತಿಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಎರಡನೇ ಸುತ್ತಿನ ಹಾಡಿ ವಾಸ್ತವ್ಯ:
ತಾವು ಸಮಾಜ ಕಲ್ಯಾಣ ಸಚಿವರಾದ ಮೇಲೆ ಬುಡಕಟ್ಟು ಸಮುದಾಯದ ಸಮಸ್ಯೆಗಳನ್ನು ಆಲಿಸಲು ಹಾಡಿಗಳಲ್ಲಿ ವಾಸ್ಯವ್ಯ ಹೂಡುವ ಕೆಲಸ ಮಾಡಿದ್ದು, ಈಗಾಗಲೇ ಸಾಕಷ್ಟು ಕಡೆ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ತಿಳಿದುಕೊಂಡು
ಅವುಗಳನ್ನು ಬಗೆಹರಿಸುವ ಕೆಲಸ ಮಾಡಿದ್ದೇನೆ. ಎರಡನೇ ಹಂತದಲ್ಲಿ ಮತ್ತೆ ಚಾಮರಾಜನಗರದಿಂದ ವಾಸ್ತವ್ಯ ಕೈಗೊಳ್ಳಲಿದ್ದು, ಆ ವೇಳೆ ಮೊದಲ ಬಾರಿ ಭೇಟಿ ನೀಡಿದಾಗ ನೀಡಿದ ಭರವಸೆಗಳು ಎಷ್ಟು ಪ್ರಮಾಣದಲ್ಲಿ ಈಡೇರಿವೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next